Advertisement

ಕಾಮಗಾರಿ ಪೂರ್ಣಗೊಂಡರೂ ತಡೆ ಮುಂದುವರಿಕೆ

11:05 PM Jul 28, 2019 | Team Udayavani |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಭಾಗದಿಂದ ಸಂಪರ್ಕ ಕಲ್ಪಿಸುವ ಮಲೆಯಾಳ-ಹರಿಹರ ರಸ್ತೆಯ ಕಾಂಕ್ರೀಟ್‌ ಕಾಮಗಾರಿಗಾಗಿ ಕೆಲ ಸಮಯಗಳಿಂದ ಸಂಚಾರ ನಿರ್ಬಂಧಿಸಲಾಗಿದೆ. ಕಾಮಗಾರಿ ಪೂರ್ಣಗೊಂಡು ಅನೇಕ ದಿನಗಳು ಕಳೆದಿದ್ದರೂ ಈ ಮಾರ್ಗವನ್ನು ಇನ್ನೂ ಚತುಷ್ಪಥ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಿಲ್ಲ. ಇದರಿಂದ ತೊಂದರೆ ಎದುರಿಸುವಂತಾಗಿದೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಮಲೆಯಾಳ-ಐನಕಿದು ಮಾರ್ಗದಲ್ಲಿ ಮಲೆಯಾಳ ಬಳಿ 300 ಮೀ.ನಷ್ಟು ದೂರ ಮತ್ತು ಕೆದಿಲ ಬಳಿ 60 ಮೀ. ಕಾಂಕ್ರೀಟ್‌ ಕಾಮಗಾರಿ ನಡೆಸಲಾಗಿತ್ತು. ಎರಡು ಕಡೆ ಕಾಂಕ್ರೀಟ್‌ ಕಾಮಗಾರಿ ನಡೆಯುವ ಸಂದರ್ಭದಲ್ಲಿ ವಾಹನಗಳು ಓಡಾಡದಂತೆ ಮಲೆಯಾಳ ಬಳಿ ರಸ್ತೆಯ ಎರಡು ಬದಿಗೆ ಅಡ್ಡಲಾಗಿ ಮಣ್ಣು ಸುರಿದು ನಿರ್ಬಂಧಿಸಲಾಗಿತ್ತು.

ಇನ್ನೂ ಮುಕ್ತಗೊಂಡಿಲ್ಲ
ಕಾಮಗಾರಿ ನಡೆದು ಅನೇಕ ದಿನಗಳಾಗಿವೆ. ರಸ್ತೆಯನ್ನು ಇನ್ನೂ ಸಂಚಾರಕ್ಕೆ ಮುಕ್ತವಾಗಿಸುವ ಆಸಕ್ತಿ ತೋರುತಿಲ್ಲ. ಈ ಮಾರ್ಗದಲ್ಲಿ ಸಾರಿಗೆ ಬಸ್‌ ಸಹಿತ ಚತುಷ್ಪಥ ವಾಹನಗಳು ತೆರಳಲು ಸಾಧ್ಯವಾಗುತಿಲ್ಲ. ಇದರಿಂದ ಬಹಳಷ್ಟು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹರಿಹರ, ಬಾಳುಗೋಡು, ಐನಕಿದು, ಕೊಲ್ಲಮೊಗ್ರು, ಕಲ್ಮಕಾರು ಭಾಗದಿಂದ ಸುಬ್ರಹ್ಮಣ್ಯ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸುತ್ತಿ ಬಳಸಿ ನಡುಗಲ್ಲು ಮಾರ್ಗವಾಗಿ ತೆರಳುತ್ತಿದ್ದಾರೆ. ದೂರದೂರಿಗೆ ತೆರಳುವ ನಾಗರಿಕರು ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.

ಬದಲಿ ರಸ್ತೆ ಇರಲಿಲ್ಲ
ದ್ವಿಚಕ್ರ ವಾಹನಗಳಿಗೆ ತೆರಳಲು ಪರ್ಯಾಯ ದಾರಿ ಮಾಡಿ ಕೊಡದೆ ರಸ್ತೆ ಬಂದ್‌ಗೊಳಿಸಿದ್ದರಿಂದ ಬಹಳಷ್ಟು ತೊಂದರೆ ಅನುಭವಿಸಬೇಕಾಯಿತು. ಬಳಿಕ ತಹಶೀಲ್ದಾರ್‌ ಅವರ ಗಮನಕ್ಕೆ ಸ್ಥಳೀಯರು ತಂದ ಮೇರೆಗೆ ಅಧಿಕಾರಿಗಳಿಗೆ ಸೂಚಿಸಿ ದ್ವಿಚಕ್ರ ವಾಹನ ಮಾತ್ರ ತೆರಳಲು ಅವಕಾಶ ಮಾಡಿಕೊಟ್ಟಿದ್ದರು. ಸ್ಥಳೀಯರು ದ್ವಿಚಕ್ರ ವಾಹನ ತೆರಳುವಷ್ಟು ಜಾಗ ಮಾಡಿಕೊಟ್ಟು ಸಹಕರಿಸಿದ್ದರು.

ಮಣ್ಣು ತೆರವಿಗೆ ಒತ್ತಾಯ
ಈ ರಸ್ತೆಯ ಹಲವೆಡೆ ಹಾಳಾಗಿದ್ದು, ಸಂಚಾರಕ್ಕೆ ತೊಂದರೆ ಉಂಟಾಗಿದೆ. ಕಾಮಗಾರಿ ಬಳಿಕ ರಸ್ತೆಯನ್ನು ಸ್ವತ್ಛಗೊಳಿಸದೆ ಹಾಗೆಯೇ ಬಿಡಲಾಗಿದೆ. ಇದರಿಂದ ದ್ವಿಚಕ್ರ ವಾಹನದವರಿಗೂ ಸಮಸ್ಯೆಯಾಗುತ್ತಿದೆ. ರಸ್ತೆಯನ್ನು ಸ್ವತ್ಛಗೊಳಿಸುವುದರ ಜತೆಗೆ ಚತುಷ್ಪಥ ವಾಹನಗಳ ಸಂಚಾರಕ್ಕೆ ಶೀಘ್ರ ಅವಕಾಶ ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ರಸ್ತೆ ಕಾಮಗಾರಿ ನಡೆಸುವ ವೇಳೆ ತಡೆಗೆಂದು ಸುರಿದ ಮಣ್ಣನ್ನು ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸುವಂತೆಯೂ ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next