ಹುಣಸೂರು: ನಾಗರಹೊಳೆ ಉದ್ಯಾನದಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದೆ. ಇತ್ತ ರೈತರು ಬೆಳೆ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೂ, ಕಾಡಾನೆಗಳ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದ್ದು, ರೈತರು ಆಕ್ರೋಶಗೊಂಡಿದ್ದಾರೆ.
ಉದ್ಯಾನದಂಚಿನ ವೀರನಹೊಸಹಳ್ಳಿ ವಲಯ ವ್ಯಾಪ್ತಿಯ ತಾಲೂಕಿನ ಗುರುಪುರ, ಟಿಬೆಟ್ ಕ್ಯಾಂಪ್, ಹುಣಸೇಕಟ್ಟೆಹಳ್ಳಿ, ವಾರಂಚಿ, ಸರ್ವೆ ನಂ.25, ಮಾಜಿ ಗುರುಪುರ ಗ್ರಾಮಗಳಲ್ಲಿ ಎರಡು ತಿಂಗಳಿಂದಲೂ ನಿತ್ಯ ರಾತ್ರಿ ವೇಳೆ ಆನೆಗಳ ಪುಂಡಾಟ ಮುಂದುವರಿದಿದೆ. ಸೋಮವಾರ ರಾತ್ರಿ ಮೂರು ಪ್ರತ್ಯೇಕ ಹಿಂಡುಗಳಲ್ಲಿ ಈ ಭಾಗಕ್ಕೆ ದಾಂಗುಡಿ ಇಟ್ಟಿರುವ ಕಾಡಾನೆಗಳು ಎಲ್ಲೆಂದರಲ್ಲಿ ಓಡಾಡುತ್ತಾ, ಬೆಳೆಗಳನ್ನು ತಿಂದು- ತುಳಿದು ನಾಶಪಡಿಸುತ್ತಿವೆ. ಮಾಜಿ ಗುರುಪುರದ ಜಯಮ್ಮ ರಿಗೆ ಸೇರಿದ ಬಾಳೆ, ನಾಗನಾಯ್ಕರ ಜೋಳ, ಸಣ್ಣ ಶೆಟ್ಟರ ತೆಂಗಿನ ಸಸಿ, ಬಾಳೆ ಬೆಳೆಗಳು, ಸರ್ವೆ ನಂ.25 ಹಾಗೂ ಹುಣಸೇಕಟ್ಟೆ ಹಳ್ಳದ ಜಮೀನಿನ ಬೆಳೆಗಳನ್ನು ನಾಶಪಡಿಸಿವೆ.
ರಾತ್ರಿ ವೇಳೆ ದಾಳಿ ಇಡುವ ಆನೆಗಳು ಮುಂಜಾನೆ ತನಕ ತಿಂದು ತೇಗಿ, ಬೆಳಗಾಗುವುದರೊಳಗೆ ಕಾಡು ಸೇರಿಕೊಳ್ಳುತ್ತಿದ್ದು, ಅರಣ್ಯ ಇಲಾಖೆ ಅಲ್ಲಲ್ಲಿ ಹಾಗೂ ರೈತರು ಅಟ್ಟಣೆ ಹಾಕಿಕೊಂಡು ಕಾವಲು ಕಾಯ್ದರೂ ಯಾವ ವೇಳೆ ದಾಳಿ ಇಡುತ್ತವೋ ಗೊತ್ತಾಗುತ್ತಿಲ್ಲ.
ರೈಲ್ವೆ ಕಂಬಿ ಬೇಲಿ ಇಲ್ಲ: ವೀರನಹೊಸಹಳ್ಳಿ ವಲಯದ ನಾಗಾಪುರ ಪುನರ್ವಸತಿ ಕೇಂದ್ರದಿಂದ ಹಿಡಿದು ಟಿಬೆಟ್ ಕ್ಯಾಂಪ್, ಗುರುಪುರ, ಸೊಳ್ಳೆಪುರ, ಭೀಮನಹಳ್ಳಿ, ಅಣ್ಣೂರುವರೆಗೆ ರೈಲ್ವೆ ಕಂಬಿ ತಡೆಗೋಡೆ ನಿರ್ಮಿಸದ ಪರಿಣಾಮ ಕಾಡಾನೆಗಳು ಯಾವುದೇ ಭೀತಿ ಇಲ್ಲದೆ ದಾಟುತ್ತಿವೆ. ಇಷ್ಟೆಲ್ಲಾ ಸಮಸ್ಯೆ ಗಳು ಕಾಡುತ್ತಿದ್ದರೂ ಯಾವುದೇ ಜನಪ್ರತಿನಿ ಗಳು ಮಾತ್ರ ತಲೆ ಕೆಡಿಸಿಕೊಳ್ಳದೆ ಚುನಾವಣೆ ಬ್ಯುಸಿಯಲ್ಲಿದ್ದಾರೆ, ಅಧಿಕಾರಿಗಳು ಸಹ ಗಮನ ಹರಿಸುತ್ತಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏಳು ಆನೆಗಳ ಪಯಣ: ಪ್ರತಿವರ್ಷ ನವಂಬರ್- ಡಿಸೆಂಬರ್, ಜನವರಿ ತಿಂಗಳಿನಲ್ಲಿ ಬೆಳೆ ಕಟಾವಿನ ಸಮಯ, ಈ ವೇಳೆ ವೀರನಹೊಸಹಳ್ಳಿ ಭಾಗದಿಂದ ಹೊರ ಬರುವ ಏಳು ಸಲಗಗಳು ಬೆಳೆಗಳನ್ನು ತಿಂದು, ಮತ್ತೆ ಕಾಡು ಸೇರುವುದು ಕಳೆದ ನಾಲ್ಕೆದು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಆನೆ ಮಾರ್ಗದಲ್ಲಿ ಸಿಕ್ಕಿದನ್ನು ತಿಂದು ಮತ್ತೆ ಕಾಡು ಸೇರುತ್ತವೆ. ರೈತರೇ ನಾದರೂ ಕಾಡಾನೆಗಳನ್ನು ಓಡಿಸುವುದು ಮಾಡಿದಲ್ಲಿ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ, ಮತ್ತಷ್ಟು ಉಪಟಳ ನೀಡಿರುವ ಉದಾಹರಣೆಯೂ ಇದೆ.
ಹೀಗಾಗಿ ಆನೆಗಳನ್ನು ಕಾಡು ಸೇರಿಸುವ ವೇಳೆ ಕಾಡಂಚಿನಲ್ಲೇ ಬಿಡದೆ ಮದ್ಯಭಾಗದವರೆಗೂ ಓಡಿಸ ಬೇಕು, ಇಲ್ಲವೇ ರೈತರೇ ಕಾಡಾನೆಗಳನ್ನು ನಿಯಂತ್ರಿ ಸಲು ಅವಕಾಶ ನೀಡಬೇಕೆಂದು ಗುರುಪುರದ ರೈತ ಸಣ್ಣಶೆಟ್ಟಿ ಅವಲತ್ತುಕೊಂಡಿದ್ದಾರೆ.