Advertisement

ಪೇಜಾವರ ಶ್ರೀಪಾದರಿಗೆ ಯಥಾಸ್ಥಿತಿಯಲ್ಲಿ ಚಿಕಿತ್ಸೆ ಮುಂದುವರಿಕೆ

10:09 AM Dec 25, 2019 | mahesh |

ಉಡುಪಿ: ಪೇಜಾವರ ಶ್ರೀಪಾದರ ಆರೋಗ್ಯ ಗಂಭೀರವಾಗಿದ್ದು, ಸ್ಥಿರವಾಗಿ ಮುಂದುವರಿಯುತ್ತಿದೆ. ಇದೇ ವೇಳೆ ಬೆಂಗಳೂರು ಮಣಿಪಾಲ್‌ ಆಸ್ಪತ್ರೆಯ ಇಬ್ಬರು ತಜ್ಞ ವೈದ್ಯರು ಮಣಿಪಾಲದ ವೈದ್ಯರ ಜತೆ ಸಮಾಲೋಚನೆ ನಡೆಸಿದ್ದಾರೆ. ದಿಲ್ಲಿ ಏಮ್ಸ್‌ ವೈದ್ಯರು ಸಂಪರ್ಕದಲ್ಲಿದ್ದಾರೆ ಎಂದು ಆಸ್ಪತ್ರೆಯ ವೈದ್ಯರ ಪ್ರಕಟನೆ ತಿಳಿಸಿದೆ.  ಸುದ್ದಿಗಾರರ ಜತೆ ಮಾತನಾಡಿದ ಕಿರಿಯ ಶ್ರೀಪಾದರು, ರವಿವಾರ ರಾತ್ರಿ ಎಕ್ಸ್‌ರೇ, ಸ್ಕ್ಯಾನ್‌ ಮಾಡಲಾಗಿದೆ. ಸೋಮವಾರ ರಾತ್ರಿ ಎಂಆರ್‌ಐ ಸ್ಕ್ಯಾನ್‌ ಮಾಡುತ್ತಾರೆ. ಇದರ ಫ‌ಲಿತಾಂಶದ ಆಧಾರದಲ್ಲಿ ಚಿಕಿತ್ಸಾ ವಿಧಾನ ವನ್ನು ಬದಲಾಯಿಸಬಹುದು ಎಂದರು.

Advertisement

ಆಸ್ಪತ್ರೆಗೆ ಸೋಮವಾರವೂ ಗಣ್ಯರ ದಂಡು ಆಗಮಿಸಿದೆ. ಕೇಂದ್ರದ ಮಾಜಿ ಸಚಿವೆ, ಶ್ರೀಗಳ ಶಿಷ್ಯೆ ಉಮಾ ಭಾರತಿಯವರು ಸಂಜೆ ಭೇಟಿ ನೀಡಿ ಕಿರಿಯ ಶ್ರೀಗಳು, ವೈದ್ಯರ ಜತೆ ಚರ್ಚಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಉಮಾ ಭಾರತಿ, 30 ವರ್ಷಗಳ ಹಿಂದೆ ಶ್ರೀಗಳಿಂದ ಸನ್ಯಾಸವನ್ನು ಸ್ವೀಕರಿಸಿದೆ. ಶಿಷ್ಯಳಾದರೂ ಮಗಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅವರು ಬಲುದೊಡ್ಡ ಸಮಾಜ ಸುಧಾರಕರು. ಪ್ರಧಾನಿ, ಕೇಂದ್ರ ಆರೋಗ್ಯ ಸಚಿವರು ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಶೀಘ್ರ ಗುಣಮುಖ ರಾಗಲೆಂದು ಪ್ರಾರ್ಥಿಸುತ್ತೇನೆ ಎಂದರು.

ಬಸವಣ್ಣನವರಲ್ಲಿ ಪಾಟೀಲ್‌ ಪ್ರಾರ್ಥನೆ
ಶ್ರೀಗಳು ನೂರು ವರ್ಷ ಬಾಳಿ ಬದುಕಬೇಕು. ಅವರ ಸೇವೆ ಅನನ್ಯವಾದುದು. ದೇಶ, ಸಮಾಜಕ್ಕೆ ಅವರ ಮಾರ್ಗದರ್ಶನ ಅಗತ್ಯ. ನಮ್ಮ ನಡುವೆ ವೈಚಾರಿಕ ಭಿನ್ನಾಭಿಪ್ರಾಯವಿದ್ದರೂ ನಾವು ಸಮಾನಾಭಿಪ್ರಾಯಕ್ಕೂ ಬಂದಿದ್ದೆವು. ಬಸವಣ್ಣನವರಲ್ಲಿ ಶ್ರೀಗಳಿಗಾಗಿ ಪ್ರಾರ್ಥನೆ ಮಾಡುತ್ತೇನೆ ಎಂದು ಸೋಮವಾರ ರಾತ್ರಿ ಭೇಟಿ ನೀಡಿದ ಲಿಂಗಾಯತ ಪ್ರತ್ಯೇಕ ಧರ್ಮದ ಪ್ರತಿಪಾದಕ ಎಂ.ಬಿ. ಪಾಟೀಲ್‌ ತಿಳಿಸಿದರು. ವಿಜಯಪುರದಲ್ಲಿ ತಾವು ಶ್ರೀಗಳನ್ನು ಭೇಟಿ ಮಾಡಿದ್ದನ್ನು ಶ್ರೀಗಳ ಆಪ್ತರೊಂದಿಗೆ ಪಾಟೀಲ್‌ ನೆನಪಿಸಿಕೊಂಡು, ಸಮಾಜ ಏಕತೆಗಾಗಿ ಶ್ರೀಗಳು ದೊಡ್ಡ ಕೊಡುಗೆ ನೀಡಿದ್ದಾರೆಂದರು.

ಉತ್ತರಾದಿ ಶ್ರೀ ಉಡುಪಿ ಮೊಕ್ಕಾಂ
ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರು 2ದಿನಗಳ ಹಿಂದೆ ಉಡುಪಿಗೆ ಬಂದವರು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಉಡುಪಿಯ ತಮ್ಮ ಮಠದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

Advertisement

ಕಣ್ವತೀರ್ಥದಲ್ಲಿ ಸಪ್ತಾಹ
ತಲಪಾಡಿ ಸಮೀಪ ಇರುವ, ಪೇಜಾವರ ಮಠಕ್ಕೆ ಸೇರಿದ ಕಣ್ವತೀರ್ಥ ಮಠದಲ್ಲಿ ಹುಬ್ಬಳ್ಳಿಯ ಶ್ರೀಹರಿ ವಾಳ್ವೆಕರ್‌ ಎರಡು ದಿನಗಳಿಂದ ಭಾಗವತ ಸಪ್ತಾಹ ನಡೆಸುತ್ತಿದ್ದಾರೆ. ಡಿ. 26, ಗ್ರಹಣದ ದಿನ ಮಂಗಲೋತ್ಸವ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪೇಜಾವರ ಶ್ರೀಗಳು ಹೋಗುವುದೆಂದು ಮೊದಲೇ ನಿಗದಿಯಾಗಿತ್ತು. ಮಧ್ವಾಚಾರ್ಯರು ಇಳಿವಯಸ್ಸಿನಲ್ಲಿ ಕಣ್ವತೀರ್ಥಕ್ಕೆ ಹೋದಾಗ ಅಲ್ಲಿ ಗ್ರಹಣದ ಸಮುದ್ರ ಸ್ನಾನ ಮಾಡಿದ್ದರು ಎಂಬ ಉಲ್ಲೇಖವಿರುವುದರಿಂದ ಗ್ರಹಣದ ದಿನ ವಿಶೇಷ ಪೂಜೆ ಇರಿಸಿಕೊಳ್ಳಲಾಗಿದೆ.

ಆದಿಚುಂಚನಗಿರಿ ಶ್ರೀ ಭೇಟಿ
ಶ್ರೀ ಆದಿಚುಂಚನಗಿರಿ ಮಠದ ಹಿಂದಿನ ಸ್ವಾಮೀಜಿಯವರ ಕಾಲದಿಂದಲೂ ಪೇಜಾವರ ಶ್ರೀಗಳೊಂದಿಗೆ ನಿಕಟ ಸಂಪರ್ಕವಿದೆ. ಅವರ ಶಿಷ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸೋಮವಾರ ರಾತ್ರಿ ಮಣಿಪಾಲಕ್ಕೆ ಭೇಟಿ ನೀಡಿದರು. ಸಂಗೀತಗಾರ ವಿದ್ಯಾಭೂಷಣರು ಮೊದಲಾದವರು ಆಸ್ಪತ್ರೆಗೆ ಭೇಟಿ ನೀಡಿದರು.

ರದ್ದಾದ ಸಿದ್ದು ಭೇಟಿ
ಮಾಜಿ ಸಿಎಂ ಸಿದ್ದರಾಮಯ್ಯ ಸಂಜೆ ಭೇಟಿ ನೀಡುವುದೆಂದು ನಿರ್ಧಾರವಾಗಿದ್ದರೂ ಕೊನೆ ಗಳಿಗೆಯಲ್ಲಿ ಉಡುಪಿ ಪ್ರವಾಸವನ್ನು ರದ್ದುಗೊಳಿಸಿ ಬೆಂಗಳೂರಿಗೆ ವಾಪಸಾದರು.

“ಮತ್ತೆ ಸಿದ್ದು ಬರ್ತಾರೆ’
ರಾತ್ರಿ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್‌, ಶಾಸಕ ಜಮೀರ್‌ ಅಹಮದ್‌ ಆಸ್ಪತ್ರೆಗೆ ಭೇಟಿ ನೀಡಿದರು. “ಸಿದ್ದರಾಮಯ್ಯ ಬರಬೇಕಾಗಿತ್ತು. ಮಂಗಳೂರಿನಲ್ಲಿ ಪ್ರವಾಸ ನಡೆಸಿ ಬಳಲಿದ್ದರಿಂದ ವಾಪಸಾಗಿದ್ದಾರೆ. ಮೂರ್‍ನಾಲ್ಕು ದಿನಗಳಲ್ಲಿ ವಿಶೇಷ ಹೆಲಿಕಾಪ್ಟರ್‌ ಮೂಲಕ ಬರಲಿದ್ದಾರೆ. ಯಾರೂ ಸಣ್ಣತನದ ಆಲೋಚನೆ ಮಾಡಬಾರದು’ ಎಂದು ಪಾಟೀಲ್‌ ವಿನಂತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next