Advertisement

ಸದನ ಕಲಾಪ ಪ್ರಸಾರಕ್ಕೆ ಖಾಸಗಿ ಸುದ್ದಿವಾಹಿನಿ ಕ್ಯಾಮೆರಾ ನಿರ್ಬಂಧ ಮುಂದುವರಿಕೆ

10:22 AM Feb 15, 2020 | Sriram |

ಬೆಂಗಳೂರು: ಕಳೆದ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಸದನ ಕಲಾಪ ನೇರ ಪ್ರಸಾರಕ್ಕೆ ಖಾಸಗಿ ಸುದ್ದಿವಾಹಿನಿಗಳ ಕ್ಯಾಮೆರಾಗಳಿಗೆ ಪ್ರಾಯೋಗಿಕವಾಗಿ ವಿಧಿಸಿದ್ದ ನಿರ್ಬಂಧವನ್ನು ಮುಂದುವರಿಸಲು ನಿರ್ಧರಿಸಿರುವುದಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

Advertisement

ಆ ಮೂಲಕ ಇನ್ನು ಮುಂದೆ ವಿಧಾನಸಭೆಯ ಕಲಾಪ ನೇರ ಪ್ರಸಾರ ಮಾಡಲು ಖಾಸಗಿ ಸುದ್ದಿವಾಹಿನಿಗಳಿಗೆ ಅವಕಾಶವಿರುವುದಿಲ್ಲ. ಬೆಂಗಳೂರು ದೂರದರ್ಶನ ಕೇಂದ್ರ ಬಿತ್ತರಿಸುವ ನೇರ ಪ್ರಸಾರದ ವಿಡಿಯೋಗಳನ್ನೇ ಬಳಸುವುದು ಅನಿವಾರ್ಯವಾಗಲಿದೆ.

ವಿಧಾನಸೌಧದಲ್ಲಿನ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಲೋಕಸಭೆ, ರಾಜ್ಯಸಭೆಗಳ ಮಾದರಿಯಲ್ಲೇ ರಾಜ್ಯದಲ್ಲೂ ಖಾಸಗಿ ಎಲೆಕ್ಟ್ರಾನಿಕ್‌ ಮಾಧ್ಯಮಗಳು ಸದನ ಕಲಾಪ ನೇರ ಪ್ರಸಾರಕ್ಕೆ ಅವಕಾಶ ನೀಡದಿರಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಲೋಕಸಭೆ ಹಾಗೂ ರಾಜ್ಯಸಭೆ ಮಾದರಿಯನ್ನೇ ದೇಶದ ಎಲ್ಲ ರಾಜ್ಯಗಳ ವಿಧಾನಸಭೆಗಳೂ ಜಾರಿಗೊಳಿಸಬೇಕು ಎಂಬ ಬಗ್ಗೆ ಹತ್ತಾರು ಬಾರಿ ನಿರಂತರವಾಗಿ ಚರ್ಚೆ ನಡೆದಿದ್ದು, ಅನೇಕ ರಾಜ್ಯಗಳು ಅದೇ ಮಾದರಿ ಅನುಸರಿಸುತ್ತಿವೆ. ಹಾಗಾಗಿ ನಮ್ಮ ರಾಜ್ಯದಲ್ಲೂ ಲೋಕಸಭೆ, ರಾಜ್ಯಸಭೆಯ ಮಾದರಿಯನ್ನೇ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಈ ಹಿಂದೆ ಪ್ರಾಯೋಗಿಕ ಜಾರಿ ಎಂದು ಹೇಳಿ ಇದೀಗ ನಿರ್ಬಂಧ ಮುಂದುವರಿಕೆ ಸರಿಯೇ ಹಾಗೂ ಖಾಸಗಿ ಸುದ್ದಿವಾಹಿನಿಗಳ ಕ್ಯಾಮೆರಾಗಳನ್ನು ಕಲಾಪ ಪ್ರಸಾರದಿಂದ ಹೊರಗಿಟ್ಟಿರುವುದರಿಂದ ಆಗಿರುವ ಅನುಕೂಲವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಲೋಕಸಭೆ, ರಾಜ್ಯಸಭೆ ಮಾದರಿಯನ್ನೇ ರಾಜ್ಯದಲ್ಲೂ ಅನುಸರಿಸುತ್ತೇವೆ. ಇಡೀ ದೇಶದಲ್ಲಿ ಚರ್ಚೆಯಾದಂತೆ ಲೋಕಸಭೆ, ರಾಜ್ಯಸಭೆ ಮಾದರಿಯನ್ನೇ ವಿಧಾನಸಭೆಯಲ್ಲಿ ಅನುಷ್ಠಾನಗೊಳಿಸಿದೆ. ನಾನು ಅದೇ ಮಾದರಿ ಅನುಸರಿಸಲು ನಿರ್ಧರಿಸಲಾಗಿದೆ. ಈ ವ್ಯವಸ್ಥೆ ಪಾರದರ್ಶಕವಾಗಿರಬೇಕು ಎಂಬ ಬಗ್ಗೆ ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲ. ಚರ್ಚೆ ಮಾಡುವ ವಿಚಾರ ಪಾರದರ್ಶಕವಾಗಿದ್ದು, ಜನತೆಗೆ ಗೊತ್ತಾಗಬೇಕು. ಆ ವ್ಯವಸ್ಥೆ ಜಾರಿಗೊಳಿಸಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

Advertisement

ನಮ್ಮ ಹಾಗೂ ಮಾಧ್ಯಮಗಳ ನಡುವೆ ಒಂದು ವಿಚಾರದ ಬಗ್ಗೆ ಭಿನ್ನಾಭಿಪ್ರಾಯ ಮೂಡುತ್ತದೆ. ಮಾಧ್ಯಮಗಳು ತಮಗೆ ಬೇಕಾದ ಉತ್ತರ ಬಯಸುತ್ತವೆ. ನಾವು ನಮ್ಮ ನಿಲುವಿಗೆ ಬದ್ಧರಾಗಿರುತ್ತೇವೆ. ಪರಸ್ಪರ ವಿಶ್ವಾಸದಲ್ಲಿದ್ದು, ವ್ಯವಸ್ಥೆಗೆ ಶಕ್ತಿ ತುಂಬೋಣ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುವ ಪತ್ರಿಕಾರಂಗದ ಬಗ್ಗೆ ನೂರಕ್ಕೆ ನೂರು ವಿಶ್ವಾಸದಲ್ಲಿರುತ್ತೇವೆ. ತಾವು ಹೇಳುತ್ತಿರುವುದು ನನಗೆ ಅರ್ಥವಾಗಿದ್ದು, ನಾನು ಹೇಳುತ್ತಿರುವುದು ತಮಗೆ ಅರ್ಥವಾಗಿದೆ ಎಂದು ತಿಳಿದಿದ್ದೇನೆ ಎನ್ನುವ ಮೂಲಕ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

ವಿಧಾನಸಭೆಯ ಕಲಾಪ ನೇರ ಪ್ರಸಾರಕ್ಕೆ ಖಾಸಗಿ ಸುದ್ದಿವಾಹಿನಿಗಳ ಕ್ಯಾಮೆರಾಗಳಿಗೆ ಕಳೆದ ಚಳಿಗಾಲದ ಅಧಿವೇಶನದಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಆಗ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಾಯೋಗಿಕವಾಗಿ ನಿರ್ಬಂಧ ವಿಧಿಸಲಾಗಿದ್ದು, ನಂತರ ಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ನಿರ್ಬಂಧ ತಾತ್ಕಾಲಿಕವಾಗಿದ್ದು, ಈ ಸಂಬಂಧ ಸ್ಪೀಕರ್‌ರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದರು. ಇದೀಗ ಪ್ರಾಯೋಗಿಕ ವ್ಯವಸ್ಥೆಯನ್ನೇ ಕಾಯಂಗೊಳಿಸಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಎಚ್‌.ಡಿ.ರೇವಣ್ಣ ಖಂಡನೆ
ವಿಧಾನಸಭೆಯ ಕಲಾಪವನ್ನು ಖಾಸಗಿ ಸುದ್ದಿವಾಹಿನಿಗಳು ನೇರ ಪ್ರಸಾರ ಮಾಡುವ ಮೂಲಕ ಜನರಿಗೆ ಮಾಹಿತಿ ನೀಡುತ್ತಿದ್ದು, ಇದು ಹಿಂದಿನಿಂದ ನಡೆದುಬಂದಿದೆ. ಆದರೆ ಖಾಸಗಿ ಸುದ್ದಿವಾಹಿನಿಗಳ ಕ್ಯಾಮೆರಾಗಳಿಗೆ ನಿರ್ಬಂಧ ವಿಧಿಸಿರುವುದು ಸರಿಯಲ್ಲ. ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು. ಈ ಬಗ್ಗೆ ಕಲಾಪ ಸಲಹಾ ಸಮತಿಯಲ್ಲಿ ಪ್ರಸ್ತಾಪಿಸಲಾಗುವುದು.
– ಎಚ್‌.ಡಿ.ರೇವಣ್ಣ,ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next