Advertisement
ಮೈತ್ರಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ‘ಮೈತ್ರಿ ಪರ್ವ- ಒಂದು ವರ್ಷದ ಸರ್ಕಾರದ ಸಾಧನೆಗಳ ಅವಲೋಕನ’ ಪುಸ್ತಕ ಬಿಡುಗಡೆ ಮಾಡಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೈತ್ರಿ ಸರ್ಕಾರದಲ್ಲಿ ನಾನು ಬಯಸದೇ ಕಾಂಗ್ರೆಸ್ ಹೈ ಕಮಾಂಡ್ ಆಶಯದಂತೆ ಮುಖ್ಯಮಂತ್ರಿಯಾಗುವ ಅವಕಾಶ ಒದಗಿ ಬಂದಿತು. ಆರಂಭದಿಂದಲೂ ಬಿಜೆಪಿಯವರ ಕಿರುಕುಳದ ನಡುವೆಯೇ ಮೈತ್ರಿ ಸರ್ಕಾರ ಉತ್ತಮ ಸಾಧನೆ ಮಾಡಿದೆ’ ಎಂದು ಹೇಳಿದರು.
Related Articles
Advertisement
ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸರ್ಕಾರ 302 ಕೋಟಿ ರೂ.ಬಿಡುಗಡೆ ಮಾಡಿದೆ. ಆದರೆ, ಸ್ಥಳೀಯ ಡಿಸಿಸಿ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕ್ ನಡುವಿನ ಗೊಂದಲದಿಂದ ರೈತರ ಹಣ ವಾಪಸ್ ಪಡೆಯಲಾಗುತ್ತಿದೆ ಎಂಬ ವದಂತಿ ಹಬ್ಬಿದೆ. ಈ ಬಗ್ಗೆ ಬ್ಯಾಂಕ್‌ನವರಿಗೆ ಸೂಚನೆ ನೀಡಿದ್ದು, ರೈತರ ಹೆಸರಿನಲ್ಲಿ ಬಿಡುಗಡೆಯಾಗಿ ರುವ ಹಣ ನೀಡುವಂತೆ ಸೂಚಿಸಲಾಗಿದೆ ಎಂದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಘೋಷಣೆ ಮಾಡಿದ್ದ ಬಾಕಿ 3,800 ಕೋಟಿ ರೂ. ಪಾವತಿ ಮಾಡಿದ್ದೇವೆ. 2018-19ರ ಸಾಲಿಗೆ 12 ಸಾವಿರ ಕೋಟಿ, 2019-20ರ ಬಜೆಟ್ ನಲ್ಲಿ 13 ಸಾವಿರ ಕೋಟಿ ಇಡಲಾಗಿದೆ ಎಂದರು.
ಮೈತ್ರಿ ಸರ್ಕಾರ ಶಿಕ್ಷಣ, ಆರೊಗ್ಯ ಸಮಾಜ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಿರುವುದರಿಂದ ಎಲ್ಲ ಜಿಲ್ಲೆಗಳಿಂದಲೂ ಬೇಡಿಕೆ ಬಂದಿದೆ. ಆದರೆ, ಎಲ್ಲ ಜಿಲ್ಲೆಗಳಲ್ಲಿಯೂ ಒಮ್ಮೆಲೆ ಆರಂಭಿಸಲು ಆಗುವುದಿಲ್ಲ. ಸರ್ಕಾರಿ ಪಬ್ಲಿಕ್ ಶಾಲೆ ಗಳಿಗೂ ಬೇಡಿಕೆ ಹೆಚ್ಚಿಗೆ ಇದ್ದು, ಹಂತ ಹಂತವಾಗಿ ಎಲ್ಲ ತಾಲೂಕುಗಳಲ್ಲಿಯೂ ಸಂಖ್ಯೆ ಹೆಚ್ಚಿಸಲಾಗುವುದು. ಮಲೆನಾಡು, ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿ ಸಾರ್ವಜನಿಕರು ಹಳ್ಳ, ತೊರೆ ದಾಟಲು ಕಷ್ಟ ಪಡುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಕಾಲು ಸಂಕ ನಿರ್ಮಿಸಲು 130 ಕೋಟಿ ರೂ.ಮೀಸಲಿಡಲಾಗಿದೆ ಎಂದು ಹೇಳಿದರು.
ಯಶಸ್ವಿ ಬರ ನಿರ್ವಹಣೆ: ಬರ ನಿರ್ವಹಣೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದು, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುತ್ತಿದೆ. ಪ್ರವಾಹ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದಾಗ 950 ಕೋಟಿ ನೀಡಿದ್ದಾರೆ. ಆದರೂ ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಸಂಘರ್ಷಕ್ಕಿಳಿಯದೇ, ದೆಹಲಿಗೆ ಭೇಟಿ ನೀಡಿದಾಗಲೆಲ್ಲ ಕೇಂದ್ರ ಸಚಿವರನ್ನು ಭೇಟಿ ಮಾಡಿ, ರಾಜ್ಯಕ್ಕೆ ಆಗಬೇಕಿರುವ ಕೆಲಸಗಳ ಬಗ್ಗೆ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದರು.
ಮೈತ್ರಿ ಪರ್ವದಲ್ಲಿ ಯಡವಟ್ಟು
ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆ ಬಿಂಬಿಸುವ 60 ಪುಟಗಳ ಮೈತ್ರಿ ಪರ್ವ ಪುಸ್ತಕದಲ್ಲಿ ಒಂದು ವರ್ಷದಲ್ಲಿ ಪ್ರತಿಯೊಂದು ಇಲಾಖೆ ಮಾಡಿರುವ ಸಾಧನೆಯನ್ನು ವಿವರಿಸಲಾಗಿದೆ. ಮುಜರಾಯಿ ಇಲಾಖೆಯನ್ನು ಇಬ್ಬರು ಸಚಿವರಿಗೆ ನೀಡಲಾಗಿದೆ. ರಾಜಶೇಖರ ಪಾಟೀಲ್ ಹಾಗೂ ಪಿ.ಟಿ.ಪರಮೇಶ್ವರ್ ನಾಯ್ಕ ಇಬ್ಬರೂ ಮುಜರಾಯಿ ಸಚಿವರು ಎಂದು ಉಲ್ಲೇಖೀಸಲಾಗಿದೆ. ಪಿ.ಟಿ. ಪರಮೇಶ್ವರ್ ನಾಯ್ಕ ಸಚಿವರಾಗುವ ಮುಂಚೆ ಮುಜರಾಯಿ ಇಲಾಖೆ ರಾಜಶೇಖರ ಪಾಟೀಲ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿತ್ತು. ಹೀಗಾಗಿ ಅದನ್ನೇ ನಮೂದಿಸಲಾಗಿದೆ ಎಂದು ವಾರ್ತಾ ಇಲಾಖೆಯ ಅಧಿಕಾರಿಗಳು ಸಮಜಾಯಿಸಿ ನೀಡಿದ್ದಾರೆ.
ಆರ್ಥಿಕ ಶಿಸ್ತು ಪಾಲನೆ
ರಾಜ್ಯ ಸರ್ಕಾರ ಸಾಲ ಮನ್ನಾ ಯೋಜನೆ ಘೋಷಣೆ ಮಾಡಿ ಬೇರೆ ಇಲಾಖೆಗಳಿಗೆ ಅನುದಾನ ಕಡಿಮೆ ಮಾಡಿದೆ ಎಂಬ ಆರೋಪ ಮಾಡಲಾಗುತ್ತಿದೆ. ಯಾವುದೇ ಇಲಾಖೆಯ ಅನುದಾನ ಕಡಿತಗೊಳಿಸಿಲ್ಲ. ರಾಜ್ಯ ಸರ್ಕಾರ ಆರ್ಥಿಕ ಶಿಸ್ತು ಪಾಲನೆ ಮಾಡಿಕೊಂಡು ಹೊರಟಿದ್ದು, ವಿತ್ತೀಯ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ. ಈಗಲೂ ಜಿಲ್ಲಾಧಿಕಾರಿಗಳ ಅಕೌಂಟ್‌ನಲ್ಲಿ ಹಣ ಇದ್ದು, ಯಾವುದೇ ಯೋಜನೆಗೂ ಹಣಕಾಸಿನ ಕೊರತೆಯಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಆಡಳಿತ ಯಂತ್ರ ಚುರುಕಾಗಿದೆ: ಪರಂ
‘ರಾಜ್ಯ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಪ್ರತಿ ಪಕ್ಷದವರು ಆರೋಪಿಸುತ್ತಿದ್ದಾರೆ. ಮೈತ್ರಿ ಸರ್ಕಾರದ ಆಡಳಿತ ಯಂತ್ರ ಚುರುಕಾಗಿದೆ. ಐದು ವರ್ಷ ಮೈತ್ರಿ ಸರ್ಕಾರ ಸುಭದ್ರವಾಗಿರಲಿದೆ’ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮೈತ್ರಿ ಸರ್ಕಾರದ ಒಂದು ವರ್ಷದ ಸಾಧನೆ ಕುರಿತ ಮೈತ್ರಿ ಪರ್ವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದೇ ವರ್ಷದಲ್ಲಿ ಮೂರು ಬಾರಿ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳ ಸಭೆ ನಡೆಸಿರುವ ಶ್ರೇಯಸ್ಸು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ ಎಂದರು. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯ ಸರ್ಕಾರದ ಮೂಲಕ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಲು ತೀರ್ಮಾನ ಕೈಗೊಳ್ಳಲಾಯಿತು.
ನಮ್ಮ ಇತಿಮಿತಿಯಲ್ಲಿ 46 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿರುವುದು ದೇಶಕ್ಕೆ ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಶ್ಲಾಘಿಸಿದರು. ಬೆಂಗಳೂರು ಏಷ್ಯಾದ ಅತ್ಯಂತ ವೇಗವಾಗಿ ಬೆಳೆಯುತಿರುವ ನಗರ. ನಗರದಲ್ಲಿ 1.3 ಕೋಟಿ ಜನ ಸಂಖ್ಯೆಯಿದೆ. 20 ಲಕ್ಷ ಜನ ಪ್ರತಿದಿನ ವಲಸೆ ಬರುತ್ತಾರೆ. ನವ ಬೆಂಗಳೂರು ಯೋಜನೆಯಡಿ ಯಲ್ಲಿ 9 ಸಾವಿರ ಕೋಟಿ ರೂ. ಯೋಜನೆ ಕೈಗೆತ್ತಿಕೊಂಡಿದ್ದೇವೆ. ಕಾವೇರಿ 5ನೇ ಹಂತದ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು ತ್ವರಿತವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.