Advertisement

ಕಂಟೆಂಟೇ ಸ್ಟ್ರಾಂಗು ಗುರೂ… ದೇಸಿ ಸೊಗಡಿಗೆ ಪ್ರೇಕ್ಷಕನ ಜೈಕಾರ

10:10 AM Oct 07, 2022 | Team Udayavani |

“ಕಂಟೆಂಟ್‌ ತುಂಬಾ ಹೊಸದಾಗಿದೆ. ನಮ್ಮ ನೆಲದ ಕಥೆಯನ್ನು ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ…’ – “ಕಾಂತಾರ’ ಚಿತ್ರ ನೋಡಿದ ಪ್ರತಿಯೊಬ್ಬರು ಹೇಳುವ ಮಾತಿದು. ಇದೇ ಕಾರಣಕ್ಕೆ ಇವತ್ತು “ಕಾಂತಾರ’ ಹೌಸ್‌ಫ‌ುಲ್‌ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿದೆ.

Advertisement

ಇದು “ಕಾಂತಾರ’ದ ಮಾತಾದರೆ, “ಗುರು-ಶಿಷ್ಯರು’ ಚಿತ್ರ ಕೂಡಾ ಕಂಟೆಂಟ್‌ನಿಂದ ಸದ್ದು ಮಾಡುತ್ತಿದೆ. ಇದಕ್ಕೂ ಮುನ್ನ ಬಂದ “777 ಚಾರ್ಲಿ’, “ಗರುಡ ಗಮನ ವೃಷಭ ವಾಹನ’ ಸೇರಿದಂತೆ ಇನ್ನೂ ಒಂದಷ್ಟು ಚಿತ್ರಗಳು ಕೂಡಾ ಕಂಟೆಂಟ್‌ನಿಂದಾಗಿಯೇ ಹಿಟ್‌ಲಿಸ್ಟ್‌ ಸೇರಿದ್ದವು. ಕನ್ನಡದಲ್ಲಂತೂ ಇತ್ತೀಚೆಗೆ ಕಂಟೆಂಟ್‌ ಸಿನಿಮಾಗಳ ಟ್ರೆಂಡ್‌ ಹೆಚ್ಚುತ್ತಿದೆ ಎಂಬುದು ಖುಷಿಯ ವಿಚಾರ. ಹಿಟ್‌ ಆದ ಸಿನಿಮಾಗಳಲ್ಲಿ ಸ್ಟಾರ್‌ವ್ಯಾಲ್ಯೂಗಿಂತ ಹೆಚ್ಚಾಗಿ ಸದ್ದು ಮಾಡಿದ್ದು ಕಂಟೆಂಟ್‌. ಅಲ್ಲಿಗೆ ಒಂದಂತೂ ಸ್ಪಷ್ಟವಾಯಿತು, ಕಂಟೆಂಟ್‌ ಸ್ಟ್ರಾಂಗ್‌ ಇದ್ದರೆ ಪ್ರೇಕ್ಷಕ ಅಪ್ಪಿಕೊಳ್ಳುತ್ತಾನೆ ಎಂಬುದು.

ಕಾಲ ಬದಲಾಗಿದೆ, ಪ್ರೇಕ್ಷಕರ ಮನಸ್ಥಿತಿಯೂ ಹೊಸದನ್ನು ಬಯಸುತ್ತಿದೆ. ಈಗಿನ ಪ್ರೇಕ್ಷಕರಿಗೂ “ಸಿನಿ ಶಿಕ್ಷಣ’ ಚೆನ್ನಾಗಿಯೇ ಇದೆ. ಬೆರಳಂಚಿನಲ್ಲಿ ಜಗತ್ತಿನ ಸಿನಿಮಾಗಳನ್ನು ಇಟ್ಟುಕೊಂಡಿರುವ ಪ್ರೇಕ್ಷಕ ಹೊಸದನ್ನು ಬಯಸುತ್ತಿದ್ದಾನೆ. ಅದರ ಪರಿಣಾಮವಾಗಿಯೇ ಇವತ್ತು ಕಂಟೆಂಟ್‌ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲ್ಲುತ್ತಿವೆ. ಇದು ಕೇವಲ ಕನ್ನಡಕ್ಕಷ್ಟೇ ಸೀಮಿತವಾಗಿಲ್ಲ. ಎಲ್ಲಾ ಭಾಷೆಗಳಿಗೂ ಇದು ಅನ್ವಯಿಸುತ್ತಿದೆ. ಇತ್ತೀಚೆಗೆ ಬಂದ “ಸೀತಾರಾಮಂ’, “ಬಿಂಬಿಸಾರ’, “ಕಾರ್ತಿಕೇಯ’, ಹಿಟ್‌ ಆಗಿದ್ದು, “ಪೊನ್ನಿಯನ್‌ ಸೆಲ್ವನ್‌’ ಯಶಸ್ವಿ ಪ್ರದರ್ಶನ ಕಾಣುತ್ತಿರೋದು ಕೂಡಾ ಅದರ ಕಂಟೆಂಟ್‌ನಿಂದಾಗಿಯೇ.

ಅಲ್ಲಿಗೆ ಒಂದು ಸ್ಪಷ್ಟ, ಪ್ರೇಕ್ಷಕ ಬದಲಾಗಿದ್ದಾನೆ, ಈಗ ಬದಲಾಗಬೇಕಾಗಿರುವುದು ಸಿನಿಮಾ ಮೇಕರ್‌ಗಳು. ನಾಲ್ಕು ಫೈಟ್‌, ಭರ್ಜರಿ ಹೀರೋ ಇಂಟ್ರೊಡಕ್ಷನ್‌, ಪಂಚಿಂಗ್‌ ಡೈಲಾಗ್‌ಗಳಿಗೆ ತೃಪ್ತಿ ಪಟ್ಟುಕೊಳ್ಳುತ್ತಿದ್ದ ಪ್ರೇಕ್ಷಕ ಈಗ, ಅದರಾಚೆ ಏನಿದೆ ಎಂದು ನೋಡುತ್ತಾನೆ. ಒಂದು ಸಿನಿಮಾದ ಸ್ಟಾರ್‌ವ್ಯಾಲ್ಯೂ, ಕಮರ್ಷಿಯಲ್‌ ಅಂಶಗಳು ಆರಂಭದ ಒಂದೆರಡು ದಿನ ಸಿನಿಮಾಕ್ಕೆ ಆಕ್ಸಿಜನ್‌ ನೀಡಬಹುದು, ಸಿನಿಮಾ ರಿಲೀಸ್‌ಗೆ ಮುಂಚೆಯೇ ದೊಡ್ಡ ಮಟ್ಟದ ಬಿಝಿನೆಸ್‌ ಮಾಡಬಹುದು. ಅದರಾಚೆ ಸಿನಿಮಾ ಪ್ರೇಕ್ಷಕರನ್ನು ಸೆಳೆಯಬೇಕಾದರೆ, ಅಲ್ಲೊಂದು ಗಟ್ಟಿಕಥೆ ಬೇಕು, ಹೊಸದೆನಿಸುವ ನಿರೂಪಣೆ ಬೇಕು. ಅದನ್ನು ನೀವು ಕಮರ್ಷಿಯಲ್‌ ಆಗಿ ಹೇಗೆ ಹೇಳುತ್ತೀರಿ ಎಂಬುದು ನಿರ್ದೇಶಕನ ಜಾಣ್ಮೆಗೆ ಬಿಟ್ಟಿದು.

ಒಂದೊಳ್ಳೆಯ ಕಥೆಯನ್ನು ನೀವು ನೀಟಾಗಿ ಕಟ್ಟಿಕೊಟ್ಟುಬಿಟ್ಟರೆ ನೀವು ಯಾರು, ಏನು, ಎಲ್ಲಿಂದ ಬಂದ್ರಿ… ಯಾವುದನ್ನೂ ನೋಡದೇ ಪ್ರೇಕ್ಷಕ ಮುಕ್ತ ಮನಸ್ಸಿನಿಂದ ಅಪ್ಪಿಕೊಳ್ಳುತ್ತಾನೆ. ಬಹುಶಃ ಇವತ್ತು ಬಾಲಿವುಡ್‌ ಒಂದು ದೊಡ್ಡ ಗೆಲುವಿಗಾಗಿ ಒದ್ದಾಡಲು ಹಾಗೂ ಸ್ಯಾಂಡಲ್‌ವುಡ್‌ ಒಂದರ ಹಿಂದೊಂದರಂತೆ ಗೆಲ್ಲಲು ಇದೇ ಕಾರಣ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಕನ್ನಡ ಚಿತ್ರರಂಗ ಗೆಲುವಿನ ಪತಾಕೆ ಹಾರಿಸುವಲ್ಲೂ ಕಂಟೆಂಟ್‌ ಪ್ರಮುಖ ಪಾತ್ರ ವಹಿಸಿದೆ.

Advertisement

ಚಿತ್ರರಂಗಕ್ಕೆ ಹೊಸದಾಗಿ ಬರುವ ಯುವ ಪ್ರತಿಭೆಗಳು ಇವತ್ತು ಪ್ರೇಕ್ಷಕನ ಮೂಡ್‌ ಅನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರೆ ಎಂದರೆ ತಪ್ಪಲ್ಲ. “ಔಟ್‌ ಆಫ್ ಬಾಕ್ಸ್‌’ ಯೋಚಿಸುವ ಮನಸ್ಥಿತಿ ಇವತ್ತು ಕನ್ನಡ ಚಿತ್ರರಂಗದತ್ತ ಬೇರೆ ಭಾಷೆ ತಿರುಗಿ ನೋಡುವಂತೆ ಮಾಡುತ್ತಿದೆ. ಇದು ಯಾವ ಮಟ್ಟದ ಬದಲಾವಣೆಗೆ ಕಾರಣವಾಗಿದೆ ಎಂದರೆ ರೆಗ್ಯುಲರ್‌ ಕಮರ್ಷಿಯಲ್‌ ಸಿನಿಮಾಗಳ ಮೂಲಕ ಮಿಂಚುತ್ತಿದ್ದ ಸ್ಟಾರ್‌ ನಟರು ಕೂಡಾ ಇವತ್ತು ಕಂಟೆಂಟ್‌ ಸಿನಿಮಾಗಳತ್ತ ಚಿತ್ತ ಹರಿಸುವಂತಾಗಿದೆ.

ಪ್ರೇಕ್ಷಕನಿಗೆ ಕನೆಕ್ಟ್ ಆಗಬೇಕು ಕಂಟೆಂಟ್‌ ಸಿನಿಮಾಗಳಿಗೆ ಮುಖ್ಯವಾಗಿ ಇರಬೇಕಾದ ಗುಣ ಯಾವುದೆಂದು ನೀವು ಕೇಳಿದರೆ, ಅದಕ್ಕೆ ಉತ್ತರ ಬೇಗನೇ ಕನೆಕ್ಟ ಆಗಬೇಕು. ಇದು ನಮ್ಮ ನೆಲದ ಘಮ ಇರುವ ಕಥೆ ಎಂಬ ಭಾವನೆ ಒಮ್ಮೆ ಪ್ರೇಕ್ಷಕನಿಗೆ ಬಂದರೆ ಆತ, ಅದನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುತ್ತಾನೆ. ಎಲ್ಲೋ ನಡೆದ ವಿಚಾರಗಳನ್ನು ಇದು ನಮ್ಮ ಪಕ್ಕದ ಮನೆಯ ಕಥೆ ಎಂದರೆ ಪ್ರೇಕ್ಷಕ ಅದನ್ನು ಒಪ್ಪಲು ತಯಾರಿಲ್ಲ. ಆ ನಿಟ್ಟಿನಲ್ಲಿ ಕಥೆಗಾರ ಗಮನಹರಿಸಬೇಕು.

ಇವತ್ತು ಬರುತ್ತಿರುವ ಒಂದಷ್ಟು ಸಿನಿಮಾಗಳು ರೆಟ್ರೋ ಶೈಲಿಯಿಂದ ಗಮನ ಸೆಳೆಯುತ್ತಿವೆ. ಇಂತಹ ಸಿನಿಮಾ ಮಾಡುವಾಗಲೂ ಹೆಚ್ಚಿನ ಶ್ರಮ ಹಾಗೂ ಗಮನ ಬೇಕಾಗುತ್ತದೆ. ಏಕಾಏಕಿ ರೆಟ್ರೋ ಬಂದು ಮೆಟ್ರೋಗೆ ಕನೆಕ್ಟ್ ಆದರೆ ಮೂಲ ಆಶಯಕ್ಕೆ ಧಕ್ಕೆಯಾಗಬಹುದು. ಸಾಕಷ್ಟು ಹೊಸಬರು ಕಂಟೆಂಟ್‌ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆದರೆ, ಈ ಸಿನಿಮಾಗಳಿಗೆ ಸೂಕ್ತ ಪ್ರಚಾರದ ಕೊರತೆಯೋ, ಸಿನಿಮಾ ತಲುಪಿಸುವಲ್ಲಿ ಎಡವಿದ ಪರಿಣಾಮವೋ ಅಂತಹ ಸಿನಿಮಾಗಳು ಬಂದು ಹೋಗಿರೋದೇ ಗೊತ್ತಾಗುವುದಿಲ್ಲ. ಆದರೆ, ಒಂದಂತೂ ಸ್ಪಷ್ಟ, ಮುಂದೆ ಭವಿಷ್ಯವಿರೋದು ಕಂಟೆಂಟ್‌ ಸಿನಿಮಾಗಳಿಗೆ. ಈ ನಿಟ್ಟಿನಲ್ಲಿ ನವಪ್ರತಿಭೆಗಳು ಪ್ರಯತ್ನಿಸುತ್ತಿವೆ ಕೂಡಾ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.