ಹೊಸಪೇಟೆ: ಸಮಾಜದ ಚಲನಶೀಲತೆ ಹೆಚ್ಚಿಸಲು ಚರಿತ್ರೆ ನೆರವಾಗುತ್ತಿದ್ದು, ಸಮಕಾಲೀನ ಚರಿತ್ರೆಯಲ್ಲಿ ಸಂಶೋಧನೆ ಕೈಗೊಳ್ಳಲು ವಿದ್ಯಾರ್ಥಿಗಳು ಗಂಭೀರವಾದ ಅಧ್ಯಯನದಲ್ಲಿ ತೊಡಗಬೇಕು ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ನಿಕಟಪೂರ್ವ ಪ್ರಾಧ್ಯಾಪಕ ಪ್ರೊ| ಬಿ.ಸಿ. ಮಹಾಬಲೇಶ್ವರಪ್ಪ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ 2017-18ನೇ ಸಾಲಿನ ಸ್ನಾತಕೋತ್ತರ ಚರಿತ್ರೆ ಪ್ರಥಮ ಮತ್ತು ಅಂತಿಮ ವರ್ಷದ ಸಂಪರ್ಕ ತರಗತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಐತಿಹಾಸಿಕ ಘಟನೆಗಳ ವಿಶ್ಲೇಷಣೆಯ ಸಂದರ್ಭದಲ್ಲಿ ಸ್ಥಳ ಮತ್ತು ಸಮಯಕ್ಕೆ ಪ್ರಾಮುಖ್ಯತೆ ಕೊಡದಿದ್ದರೆ ಅದು ಚರಿತ್ರೆಯಾಗುವುದಿಲ್ಲ. ಆಕರಗಳ ಸಂಗ್ರಹ ಮತ್ತು ವಿಶ್ಲೇಷಣೆ ಕುರಿತು ಸರಿಯಾದ ತಿಳುವಳಿಕೆ ಹೊಂದಿರಬೇಕು. ಅದಕ್ಕಾಗಿ ಚರಿತ್ರೆಯ ಸಂಶೋಧನೆಯ ವೈಜ್ಞಾನಿಕತೆಗಳನ್ನು ಮನನ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಶಿಸ್ತಿನ ಜೊತೆಗೆ ನೈತಿಕ ಮಟ್ಟ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾಜ ವಿಜ್ಞಾನಗಳ ನಿಕಾಯದ ಡೀನ್ ಡಾ| ಮಂಜುನಾಥ ಬೇವಿನಕಟ್ಟಿ ಮಾತನಾಡಿ, ದೂರಶಿಕ್ಷಣದಲ್ಲಿ ಪಡೆದ ಪದವಿಗಳಿಗೆ ಮೌಲ್ಯ ಇಲ್ಲ ಎಂಬ ವದಂತಿಗಳಿಗೆ ಕಿವಿಗೊಡಬೇಡಿ. ಇಲ್ಲಿನ ಪದವಿಗಳಿಗೆ, ಕೋರ್ಸ್‌ಗಳಿಗೆ ಮಾನ್ಯತೆ ಪಡೆಯಲಾಗಿದ್ದು, ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಲು ವಿಶ್ವವಿದ್ಯಾಲಯ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿದೆ. ಪಠ್ಯಕ್ರಮ ಬೇರೆ ದೂರಶಿಕ್ಷಣ ಸಂಸ್ಥೆಗಳಿಗಿಂತ 15 ವರ್ಷ ಮುಂದೆಯಿದೆ. ಆಧುನಿಕ ಸಮಗ್ರ ವಿಷಯಗಳನ್ನು ಒಳಗೊಂಡ ಸರಳವಾದ ಭಾಷೆಯಲ್ಲಿ ಪಠ್ಯಕ್ರಮ ರೂಪಿಸಿ ಕನ್ನಡ ವಿಶ್ವವಿದ್ಯಾಲಯ ದೂರಶಿಕ್ಷಣದ ವಿದ್ಯಾರ್ಥಿಗಳಿಗೆ ಕಲಿಕಾಸಾಮಗ್ರಿ ಒದಗಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಂಚಾಲಕ ಡಾ| ಮೋಹನಕೃಷ್ಣ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣಕ್ಕೆ ಹತ್ತಿರವಾಗಿಸುವ ಕ್ರಿಯೆಯೇ ದೂರಶಿಕ್ಷಣವಾಗಿದ್ದು, ಚರಿತ್ರೆಯನ್ನು ಸಮಕಾಲೀನವಾಗಿ, ವಿಶ್ಲೇಷಣಾತ್ಮಕವಾಗಿ, ಅಧ್ಯಯನ ಮಾಡಬೇಕಾದ ಕ್ರಮವಿದೆ. ಚರಿತ್ರೆ ಎಂದೂ ಅಂತಿಮವಲ್ಲ. ಅದು ಪುನಾರಚನೆ ಹಾಗೂ ಮರು ಓದಿಗೆ ಒಳಗಾಗುತ್ತಿರುತ್ತದೆ ಎಂದು ತಿಳಿಸಿದರು.
ದೂರಶಿಕ್ಷಣ ನಿರ್ದೆಶನಾಲಯದ ನಿರ್ದೇಶಕ ಡಾ| ವಾಸುದೇವ ಬಡಿಗೇರ ಸ್ವಾಗತಿಸಿದರು. ವಿದ್ಯಾರ್ಥಿನಿ ಪೂಜಾ ರೂಪಿಸಿದರು. ಸುಪ್ರಿತಾ ವಂದಿಸಿದರು. ರಾಜೇಶ್ವರಿ ಪ್ರಾರ್ಥಿಸಿದರು.
ದೂರಶಿಕ್ಷಣದಲ್ಲಿ ಪಡೆದ ಪದವಿಗಳಿಗೆ ಮೌಲ್ಯ ಇಲ್ಲ ಎಂಬ ವದಂತಿಗಳಿಗೆ ಕಿವಿಗೊಡಬೇಡಿ. ಇಲ್ಲಿನ ಪದವಿಗಳಿಗೆ, ಕೋರ್ಸ್‌ಗಳಿಗೆ ಮಾನ್ಯತೆ ಪಡೆಯಲಾಗಿದ್ದು, ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಲು ವಿಶ್ವವಿದ್ಯಾಲಯ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿದೆ.
ಡಾ| ಮಂಜುನಾಥ ಬೇವಿನಕಟ್ಟಿ, ಸಮಾಜ ವಿಜ್ಞಾನಗಳ ನಿಕಾಯದ ಡೀನ್