ನಾಗ್ಪುರ: ಮುಂದಿನ ವರ್ಷ ವಿಜಯದಶಮಿಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ವು ಶತಮಾನೋತ್ಸವ ವರ್ಷವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ತನ್ನ ದಶಕಗಳ ಹಳೆಯ ತರಬೇತಿ ವ್ಯವಸ್ಥೆಯನ್ನು ನವೀಕರಿಸಲು ಸಂಘ ಚಿಂತನೆ ನಡೆಸುತ್ತಿದೆ.
ಈ ತರಬೇತಿ ಶಿಬಿರವನ್ನು ಆಫೀಸರ್ ಟ್ರೈನಿಂಗ್ ಕ್ಯಾಂಪ್(ಒಟಿಸಿ) ಅಥವಾ ಸಂಘ ಶಿಕ್ಷಾ ವರ್ಗ ಎಂದು ಕರೆಯಲಾಗುತ್ತದೆ. ಇನ್ನೊಂದೆಡೆ, ಆರ್‌ಎಸ್‌ಎಸ್ ಸ್ವಯಂ ಸೇವಕರು ಉಪಯೋಗಿಸುವ ಸಾಂಪ್ರದಾಯಿಕ ದಂಡ(ಬಿದಿರಿನ ದೊಣ್ಣೆ)ದ ಗಾತ್ರವನ್ನು ತಗ್ಗಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಜು.13ರಿಂದ 15ರವರೆಗೆ ಊಟಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆಗಳು ಜರುಗಿದವು. ಈ ವರ್ಷ ನಡೆಯಲಿರುವ ಕೇಂದ್ರೀಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಮೊದಲನೇ ವರ್ಷ ಮತ್ತು ಎರಡನೇ ವರ್ಷದ ಶಿಬಿರ(ಒಟಿಸಿ) ಗಳನ್ನು ತಲಾ 20 ದಿನಗಳು ಹಾಗೂ ಮೂರನೇ ವರ್ಷದ ಶಿಬಿರವನ್ನು ನಾಗ್ಪುರದಲ್ಲಿ 25 ದಿನಗಳ ಕಾಲ ನಡೆಸಲಾಗುತ್ತದೆ. ಈ ಅವಧಿಯನ್ನು ಮೊದಲನೇ ವರ್ಷ ಮತ್ತು ಎರಡನೇ ವರ್ಷದಲ್ಲಿ ತಲಾ 15 ದಿನಗಳು ಹಾಗೂ ಮೂರನೇ ವರ್ಷದ ಶಿಬಿರವನ್ನು 20 ದಿನಗಳಿಗೆ ಇಳಿಸಲು ಚಿಂತನೆ ನಡೆದಿದೆ.
ಮತ್ತೂಂದಡೆ, ಪ್ರಸ್ತುತ ಸಾಂಪ್ರದಾಯಿಕ ದಂಡ 5.3 ಅಡಿ ಗಾತ್ರವಿದೆ. ಇದನ್ನು “ಯಶ್ತಿ”‘ ಎಂದು ಕರೆಯುವ ಸುಮಾರು 3 ಅಡಿ ಉದ್ದದ ದಂಡಕ್ಕೆ ಇಳಿಸಲು ಯೋಜಿಸಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ, ಸಮವಸ್ತ್ರದಲ್ಲಿ ಬದಲಾವಣೆ ತರಲಾಗಿ, ಪ್ರಸ್ತುತ ಪ್ಯಾಂಟ್‌ಗಳನ್ನು ಬಳಸಲಾಗುತ್ತಿದೆ.
ಹೆಚ್ಚಿನ ಸಂಘ ಶಿಕ್ಷಾ ವರ್ಗಗಳು ಏಪ್ರಿಲ್‌ನಿಂದ ಜೂನ್‌ವರೆಗೆ ನಡೆಯುತ್ತದೆ ಮತ್ತು ಕೆಲವು ಚಳಿಗಾಲದಲ್ಲೂ ನಡೆಯುತ್ತದೆ. ಈ ವರ್ಷ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಶಿಬಿರಗಳನ್ನು ನಡೆಸಲಾಗಿದ್ದು, 20,000ಕ್ಕೂ ಹೆಚ್ಚು ಮಂದಿ ತರಬೇತಿ ಪಡೆದಿದ್ದಾರೆ.