ಜೇವರ್ಗಿ: ಕಳೆದ ಹತ್ತು ದಿನಗಳಿಂದ ಪಟ್ಟಣಕ್ಕೆ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ತಾಲೂಕಿನ ಕಟ್ಟಿಸಂಗಾವಿ ಹತ್ತಿರದ ಭೀಮಾ ನದಿಯಿಂದ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಪಟ್ಟಣದಲ್ಲಿ ಸರಿ ಸುಮಾರು 30 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ.
ಕೆಲವು ಬಡಾವಣೆ ಹೊರತುಪಡಿಸಿ ಉಳಿದ ಎಲ್ಲ ವಾರ್ಡ್‌ಗಳಿಗೆ ಭೀಮಾನದಿ ನೀರೇ ಆಸರೆ. ಬೇಸಿಗೆ ಸಂದರ್ಭದಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದಾಗಲೂ ಕಲುಷಿತ ನೀರು ಪೂರೈಕೆಯಾಗಿರಲಿಲ್ಲ. ಕಳೆದ 10 ದಿನಗಳಿಂದ ಮಾತ್ರ ಪಟ್ಟಣಕ್ಕೆ ನಿತ್ಯ ಕಲುಷಿತಗೊಂಡ ನೀರು ಪೂರೈಕೆಯಾಗುತ್ತಿದೆ.
ಇದರಿಂದ ಸಾರ್ವಜನಿಕರು ಆತಂಕಪಡುವಂತಾಗಿದೆ. ಬಸ್ ಡೀಪೋ ಹತ್ತಿರದ μಲ್ಟರ್ ಬೆಡ್ ಬಳಿ ನೀರು ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿದೆ. ಆದರೂ ಜನರು ನಿತ್ಯ ಕಲುಷಿತ ನೀರೇ ಕುಡಿಯುವಂತಾಗಿದೆ. ಪಟ್ಟಣದಲ್ಲಿ ಬಹುತೇಕ ಕಡೆ ನೀರಿನ ಪೈಪ್ ಒಡೆದು ಮಳೆ ನೀರು, ಚರಂಡಿ ನೀರು ಸೇರಿ ಕಲುಷಿತಗೊಳ್ಳುತ್ತಿದೆ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಕಳೆದ ಬುಧವಾರ ರಾತ್ರಿ ಶಾಸ್ತ್ರಿಚೌಕ್ ಬಡಾವಣೆಯಲ್ಲಿ ಸತತ ಮೂರು ಗಂಟೆಗಳ ಕಾಲ ನಳದಲ್ಲಿ ನೊರೆ ಬಂದಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಭೀಮಾ ನದಿಯಿಂದ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಪೈಪ್ ಬಹುತೇಕ ಕಡೆ ಒಡೆದಿರುವುದರಿಂದ ಸಮಸ್ಯೆ ಎದುರಿಸುವಂತಾಗಿದೆ. ಇದರಿಂದ ಪಟ್ಟಣದ ಜನರು ಶುದ್ಧ ನೀರು ಖರೀದಿಸುವಂತಹ ಅನಿವಾರ್ಯತೆ ಎದುರಾಗಿದೆ.
ಪ್ರತಿ ಕ್ಯಾನ್ ನೀರಿಗೆ 30-40 ರೂ. ದರ ನಿಗದಿ ಮಾಡಲಾಗಿದೆ. ಭೀಮಾನದಿ ನೀರು ಕೇವಲ ಬಟ್ಟೆಬರೆ ತೊಳೆಯಲು ಬಳಸಲಾಗುತ್ತಿದೆ. ಆದ್ದರಿಂದ ಒಡೆದ ನೀರಿನ ಪೈಪ್‌ಗ್ಳನ್ನು ದುರಸ್ತಿ ಮಾಡಬೇಕು ಹಾಗೂ ಸರಿಯಾಗಿ ನೀರು ಶುದ್ಧೀಕರಿಸಿ ಪೂರೈಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
* ವಿಜಯಕುಮಾರ ಎಸ್. ಕಲ್ಲಾ