Advertisement

ಕಲುಷಿತ ನೀರು ತಡೆಗೆ ಮುಂದಾದ ಮೈಸೂರು ವಿವಿ

02:05 PM Dec 27, 2019 | Suhan S |

ಮೈಸೂರು: ಕುಕ್ಕರಹಳ್ಳಿ ಕೆರೆಯ ಉತ್ತರ ಬಂಡ್‌ ಮತ್ತು ಹುಣಸೂರು ರಸ್ತೆಯ ಮಧ್ಯಭಾಗದಲ್ಲಿ ಎರಡು ದ್ವೀಪಗಳನ್ನು ರಚಿಸಿ ಅವುಗಳ ಸುತ್ತ ಪಡುವಾರಹಳ್ಳಿ ಕಡೆಯಿಂದ ಹರಿಯುವ ಹೊರಚರಂಡಿ ನೀರು ಈ ದ್ವೀಪಗಳನ್ನು ಸುತ್ತಿ ಅನಂತರ ದಟ್ಟವಾಗಿ ಬೆಳೆದಿರುವ ಗಿಡಗಳ ಮಧ್ಯದಲ್ಲಿ ಹರಿದು ಕೆರೆ ಸೇರುವಂತೆ ಮಾಡುವ ಸಂಬಂಧ ಮೈಸೂರು ವಿವಿ ಕಾರ್ಯ ಪ್ರವೃತ್ತ ವಾಗಿದೆ.

Advertisement

ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಇತ್ತೀಚೆಗೆ ಮೈಸೂರು ವಿವಿ ಕುಲಪತಿಗೆ ಪತ್ರ ಬರೆದು ಮಾಡಿದ್ದ ಮನವಿಗೆ ಸ್ಪಂದಿಸಿರುವ ವಿವಿ, ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಅವಶ್ಯ ಕಾಮಗಾರಿಗಳ ಬಗ್ಗೆ ಕುಲಸಚಿವರ ಗಮನಕ್ಕೆ ತಂದು ಸೂಕ್ತ ಕ್ರಮಕೈಗೊಳ್ಳುವಂತ ವಿವಿ ತಾಂತ್ರಿಕ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚಿಸಿದೆ.

ಚರಂಡಿ ನೀರು ತಡೆ: ಕುಕ್ಕರಹಳ್ಳಿ ಕೆರೆಗೆ ಪಡುವಾರಹಳ್ಳಿ ಕಡೆಯಿಂದ ಹೊರಚರಂಡಿ ನೀರು ಸೇರುತ್ತಿದೆ. ಈ ಹೊರ ಚರಂಡಿ ನೀರಲ್ಲಿ ದನಗಳ ಗಂಜಲ, ಪಾತ್ರೆ ತೊಳೆದ, ಬಟ್ಟೆ ಒಗೆದ ನೀರು, ವಾಹನಗಳನ್ನು ಸ್ವಚ್ಛ ಮಾಡಲು ಫೋಮ್‌, ಶಾಂಪು ನಂತಹ ನೊರೆ ಬರುವಂತಹವು ಇರುತ್ತವೆ. ಆಗಾಗ ಹೊರಚರಂಡಿ ಪೈಪುಗಳು ಒಡೆದು ಅದರ ನೀರು ಸಹ ಕೆರೆ ಸೇರುತ್ತಿದೆ.

ಕಾಲುವೆಯಲ್ಲಿ ನೀರು ಹರಿಯಬೇಕು: ಹುಣಸೂರು ರಸ್ತೆಯಲ್ಲಿನ ಮೋರಿಯ ಮೂಲಕ ಕುಕ್ಕರಹಳ್ಳಿ ಕೆರೆ ಸೇರುವ ಈ ಹೊರಚರಂಡಿ ನೀರನ್ನು ಎಡಕ್ಕೆ ಮತ್ತು ಬಲಕ್ಕೆ ಉದ್ದವಾದ ಕಾಲುವೆ ತೋಡಿ ಈ ಕಾಲುವೆಯಲ್ಲಿ ಹರಿಯುವಂತೆ ಮಾಡಬೇಕು. ಜೊತೆಗೆ ಎರಡು ದ್ವೀಪಗಳನ್ನು ಕೆರೆಯ ಉತ್ತರ ಬಂಡ್‌ ಮತ್ತು ಹುಣಸೂರು ರಸ್ತೆಯ ಮಧ್ಯದ ಭಾಗದಲ್ಲಿ ರಚಿಸಿ ಈ ಹೊರಚರಂಡಿ ನೀರು ಈ ದ್ವೀಪಗಳನ್ನು ಸುತ್ತಿ ನಂತರ ದಟ್ಟವಾಗಿ ಬೆಳೆದಿರುವ ಗಿಡಗಳ ಮಧ್ಯೆ ಹರಿದು ಕೆರೆ ಸೇರುವಂತಾಗಬೇಕು. ಹೀಗೆ ಮಾಡುವುದರ ಮೂಲಕ ಗಂಜಲ ಮೊದಲಾದವುಗಳ ಘಾಟು ಕಡಿಮೆ ಯಾಗಿ ಕೆರೆಯ ನೀರನ್ನು ಕಲುಷಿತಗೊಳಿಸುವುದು ಕಡಿಮೆಯಾಗುತ್ತದೆ.

ಜೆಟ್ಟಿಂಗ್‌ ಯಂತ್ರದ ಮೂಲಕ ಸ್ವಚ್ಛಗೊಳಿಸಬೇಕು: ಉತ್ತರ ಬಂಡ್‌ನ‌ ಮೋರಿಯ ಆಸುಪಾಸಿನಲ್ಲಿ ಶೇಖರವಾಗಿರುವ ಕೊಳೆತ ನೀರನ್ನು ಮೈಸೂರು ಮಹಾನಗರ ಪಾಲಿಕೆಯಲ್ಲಿರುವ ಜೆಟ್ಟಿಂಗ್‌ ಯಂತ್ರದ ಮೂಲಕ ಸ್ವಚ್ಛ ಗೊಳಿಸಬೇಕು. ಬಹಳ ವರ್ಷಗಳಿಂದ ಕಲುಷಿತ ನೀರು ಹರಿದಿರುವ ಈ ಭಾಗದಲ್ಲಿ ತೇವಾಂಶದಲ್ಲಿ ಬೆಳೆಯುವ ಮರಗಳಾದ ನೀರಂಜಿ, ತಾಳೆಮರ, ನೀರ್‌ಕದಂಬ, ಶ್ರೀತಾಳೆ ಇಂತಹವುಗಳನ್ನು ಬೆಳೆಯಬಹುದು. ಜೊತೆಗೆ ಈ ಭಾಗದ ತೇವವಿಲ್ಲದ ಸ್ಥಳದಲ್ಲಿ ಹಣ್ಣಿನ ಮರಗಳನ್ನು ದಟ್ಟವಾಗಿ ಬೆಳೆಯುವುದರ ಮೂಲಕ ಹುಣಸೂರು ರಸ್ತೆಯಲ್ಲಿನ ವಾಹನಗಳ ಶಬ್ದ ತಡೆಯುವುದರ ಮೂಲಕ ಪಕ್ಷಿಗಳಿಗೆ ಶಬ್ದದಿಂದ ಆಗುವ ತೊಂದರೆ ಕಡಿಮೆಯಾಗಬಹುದು.

Advertisement

ಹೊರಚರಂಡಿ ನೀರನ್ನು ಶುದ್ಧಿಕರಿಸಿ ಕೆರೆಗೆ ಬಿಡಿ: ಈ ಭಾಗದ ಪಕ್ಕದಲ್ಲಿ ಐದಾರು ವರ್ಷಗಳ ಹಿಂದೆ ಬೆಳೆದಿದ್ದ ಸಾವಿರಕ್ಕಿಂತ ಹೆಚ್ಚು ನೀಲಗಿರಿ ಮರಗಳನ್ನು ಬುಡಸಮೇತ ತೆಗೆದು ಹಣ್ಣಿನ ಮರಗಳನ್ನು ಬೆಳೆಸಲಾಗಿದೆ. ಈ ಕಾರ್ಯಕ್ರಮಕ್ಕೆ ಆಗ ಮೈಸೂರು ವಿವಿ ಕುಲಪತಿ  ಗಳಾಗಿದ್ದ ಪ್ರೊ.ವಿ.ಜಿ.ತಳವಾರ್‌ ಅವರು ಸಹಕರಿಸಿದ್ದರು. ಕರ್ನಾಟಕ ಸರ್ಕಾರದ ಬಜೆಟ್‌ನ ಅನುದಾನದ 3 ಕೋಟಿ ರೂ. ಉಳಿದಿರುವ ಹಣದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳುವುದು ಅಪೇಕ್ಷಣೀಯ. ಕಲುಷಿತಗೊಂಡಿ ರುವ ಈ ಭಾಗವು ಬಹಳ ವರ್ಷಗಳಿಂದ ಹಾಗೆಯೇ ಉಳಿದಿದೆ, ಇದನ್ನು ಸ್ವಚ್ಛಗೊಳಿಸುವುದು ಅವಶ್ಯಕ ಮತ್ತು ಹೊರಚರಂಡಿ ನೀರನ್ನು ನೈಸರ್ಗಿಕವಾಗಿ ಶುದ್ಧೀಕರಿಸಿ ಕೆರೆಗೆ ಹರಿಸುವುದು ಒಳ್ಳೆಯದು ಎಂದು ಡಾ.ಜಯರಾಮಯ್ಯ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next