ಚಿತ್ರದುರ್ಗ: ಅಕ್ಷರ ದಾಸೋಹ ಯೋಜನೆಯಡಿ ಶಾಲೆಗಳಿಗೆ ನೀಡಲು 50 ಮತ್ತು 100 ಕೆಜಿ ಕಂಟೇನರ್‌ಗಳ ಖರೀ ದಿಯಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆದಿದೆ. ಇದರ ತನಿಖೆಯನ್ನು ಎಸಿಬಿಗೆ ಒಪ್ಪಿಸಲಾಗುವುದು ಎಂದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ತನಿಖೆ ಪೂರ್ಣಗೊಳ್ಳುವವರೆಗೆ ಯಾರಿಗೂ ಬಿಲ್ ಪಾವತಿ ಮಾಡಬಾರದು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿ ಕಾರಿಗೆ ಸೂಚಿಸಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ 2018-19ನೇ ಸಾಲಿನ ತ್ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಕ್ಷರ ದಾಸೋಹ ಯೋಜನೆ ಅಡಿ ತಾಲೂಕಿನ 32 ಗ್ರಾಮ ಪಂಚಾಯತ್‌ಗಳಿಗೆ ನೀಡಲು ಖರೀದಿ ಮಾಡಲಾಗಿರುವ ಕಂಟೇನರ್‌ಗಳ ಗುಣಮಟ್ಟವನ್ನು ಪರೀಕ್ಷಿಸಿದ್ದೀರಾ, ಯಾರನ್ನು ಕೇಳಿ ವ್ಯವಹಾರ ಮಾಡಿದ್ದೀರಿ, ಖರೀದಿಸಲು ನಿಮಗೆ ಅನುಮತಿ ಕೊಟ್ಟವರ್ಯಾರು ಎಂದು ಅಧಿಕಾರಿಗಳು ಹಾಗೂ ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಈ ಪ್ರಕರಣವನ್ನು ಎಸಿಬಿಗೆ ವಹಿಸಬೇಕು ಎಂದು ಇಒಗೆ ತಾಕೀತು ಮಾಡಿದರು.
ಒಂದು ಕಂಟೇನರ್ ಬೆಲೆ ಹೆಚ್ಚೆಂದರೆ ಒಂದು ಸಾವಿರ ರೂ. ಇಬಹುದು. ಆದರೆ ನೀವು ಒಂದು ಲಕ್ಷ ರೂ. ಪಾವತಿಸಿದ್ದೀರಿ. ದರದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಈ ಅವ್ಯವಹಾರದಲ್ಲಿ ಭಾಗಿಯಾಗಿರುವವರನ್ನು ಸುಮ್ಮನೆ ಬಿಡುವುದಿಲ್ಲ. ಅಂಗವಿಕಲರಿಗೆ ನೀಡಿರುವ ತ್ರಿಚಕ್ರ ಸೈಕಲ್ ಹಾಗೂ ಶ್ರವಣ ಸಾಧನ ಖರೀದಿ ಮಾಡಲು ನಿಮಗೆ ಹೇಳಿದವರ್ಯಾರು, ಗ್ರಾಪಂ ಪಿಡಿಒಗಳಿಗೆ ಲಂಗುಲಗಾಮು ಇಲ್ಲದಂತಾಗಿದೆ ಎಂದು ಸಿಡಿಮಿಡಿಗೊಂಡರು. ಸಭೆಗೆ ಗೈರುಹಾಜರಾಗಿದ್ದ ಅನ್ನೆಹಾಳ್ ಗ್ರಾಪಂ ಪಿಡಿಒ ಯತಿರಾಜ್ ಅವರನ್ನು ಅಮಾನತು ಮಾಡುವಂತೆ ಸೂಚನೆ ನೀಡಿದರು. ಎನ್‌ಆರ್‌ಇಜಿ ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ತಾಪಂ ಹಾಗೂ ಜಿಪಂ ಸದಸ್ಯರೊಂದಿಗೆ ಚರ್ಚಿಸಿ ಅಭಿವೃಧಿ ಕಾರ್ಯ ಕೈಗೊಳ್ಳಬೇಕು.
ವಿನಾಕಾರಣ ವಾದ ವಿವಾದ ಮಾಡುವುದು ಬೇಡ. ಬೆಟ್ಟದನಾಗೇನಹಳ್ಳಿ, ಕಲ್ಲಹಳ್ಳಿ, ಡಿ.ಎಸ್. ಹಳ್ಳಿಯಲ್ಲಿ ರಸ್ತೆಗಳು ಹದಗೆಟ್ಟಿದ್ದು, ಕೂಡಲೆ ರಸ್ತೆಗಳನ್ನು ದುರಸ್ತಿ ಮಾಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಿ. ಡಿಚಿಕ್ಕೇನಹಳ್ಳಿಯಲ್ಲಿ ಪರಿಶಿಷ್ಟ ಜಾತಿಯವರಿಗಾಗಿ ನಿರ್ಮಿಸಿರುವ ಸಮುದಾಯ ಭವನದಲ್ಲಿ ನ್ಯಾಯಬೆಲೆ ಅಂಗಡಿ ಇಟ್ಟುಕೊಂಡಿರುವ ವ್ಯಕ್ತಿಯನ್ನು ಅಲ್ಲಿಂದ ಖಾಲಿ ಮಾಡಿಸಬೇಕು ಎಂದು ತಿಳಿಸಿದರು.
ಮಳೆ-ಬೆಳೆ ಇಲ್ಲದೆ ಕಂಗಾಲಾಗಿರುವ ರೈತರ ಟ್ರಾನ್ಸ ಫಾರ್ಮರ್‌ಗಳನ್ನು ಬದಲಿಸಲು 40-50 ಸಾವಿರ ರೂ. ಲಂಚ ಕೇಳಲಾಗುತ್ತಿದೆ ಎಂಬ ಆರೋಪವಿದೆ. ರೈತರ ಸಮಸ್ಯೆಗಳನ್ನು ಆಲಿಸುವುದಕ್ಕಾಗಿಯೇ ಪ್ರತ್ಯೇಕ ಸಭೆ ನಡೆಸುತ್ತೇನೆ, ರೈತರನ್ನು ಸತಾಯಿಸಬೇಡಿ ಎಂದು ಬೆಸ್ಕಾಂ ಇಂಜಿನಿಯರ್‌ಗೆ ಎಚ್ಚರಿಕೆ ನೀಡಿದರು. ಸಭೆಯಲ್ಲಿ ತಾಪಂ ಅಧ್ಯಕ್ಷ ವೇಣುಗೋಪಾಲ್, ಜಿಪಂ ಸದಸ್ಯ ಗುರುಮೂರ್ತಿ, ತಹಶೀಲ್ದಾರ್ ಮಲ್ಲಿಕಾರ್ಜುನ್, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಿಡಿಒಗಳು ಭಾಗವಹಿಸಿದ್ದರು.