ಚಿತ್ರದುರ್ಗ: ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವನೆ ಪ್ರಕರಣಕ್ಕೆ ಸಂಬಂ ಧಿಸಿ ನಗರಸಭೆಯ ಇಬ್ಬರು ಎಂಜಿನಿಯರ್‌ಗಳನ್ನು ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಅಮಾನತು ಮಾಡಲು ಶಿಫಾರಸು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ತಿಳಿಸಿದ್ದಾರೆ.
ಜತೆಗೆ ನೀರು ಸರಬರಾಜು ಸಹಾಯಕ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ವಾಲ್ವ್‌ಮ್ಯಾನ್‌ಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ ಆರ್. ಗಿರಡ್ಡಿ ಹಾಗೂ ಕಿರಿಯ ಎಂಜಿನಿಯರ್ ಎಸ್.ಆರ್. ಕಿರಣ್‌ಕುಮಾರ್ ಅಮಾನತಿಗೆ ಶಿಫಾರಸು ಮಾಡಲಾಗಿದೆ. ನಗರಸಭೆ ಆಯುಕ್ತರು ಹಾಗೂ ಇಬ್ಬರೂ ಎಂಜಿನಿಯರ್‌ಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಪೌರಾಯುಕ್ತರು ಹಾಗೂ ಕಿರಿಯ ಅಭಿಯಂತರ ಎಸ್.ಆರ್.ಕಿರಣ್ ಕುಮಾರ್ ಸಮಜಾಯಿಷಿ ನೀಡಿದ್ದು, ಸಹಾಯಕ ಕಾರ್ಯಪಾಲಕ ಅಭಿಯಂತರರು ನೋಟಿಸ್‌ಗೆ ಸಮಜಾಯಿಷಿ ಸಲ್ಲಿಸುವ ಪ್ರಯತ್ನ ಮಾಡಿಲ್ಲ. ಕಿರಿಯ ಎಂಜಿನಿಯರ್ ಕರ್ತವ್ಯ ನಿರ್ಲಕ್ಷéದ ಕುರಿತು ಸಮರ್ಥನೀಯ ಕಾರಣ ನೀಡದ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆಗೆ ಆದೇಶ ಮಾಡುವಂತೆ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ. ಕವಾಡಿಗರಹಟ್ಟಿಗೆ ನೀರು ಸರಬರಾಜು ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಸಿ.ಎಚ್. ಪ್ರಕಾಶ್‌ಬಾಬು ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ನೀರು ಕುಡಿಯಲು ಯೋಗ್ಯವಾಗಿಲ್ಲ
ಕಲುಷಿತ ನೀರು ಸೇವನೆಯಿಂದ ಮಹಿಳೆ ಮೃತಪಟ್ಟ ದಿನವೇ ಜಿಲ್ಲಾ ಸರ್ವೇಕ್ಷಣೆ ಘಟಕವು ಕವಾಡಿಗರಹಟ್ಟಿ ಪ್ರದೇಶದಿಂದ ಸಂಗ್ರಹಿಸಿದ 5 ನೀರಿನ ಮಾದರಿಗಳನ್ನು ಸೂಕ್ಷ್ಮಾಣು ಜೀವಿ ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ ನಾಲ್ಕು ಮಾದರಿಗಳಲ್ಲಿ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ವರದಿ ಬಂದಿದೆ. ಜಿಲ್ಲಾ ಸರ್ವೇಕ್ಷಣಾಧಿ ಕಾರಿಗಳು ಆ.3ರಂದು ವರದಿ ಸಲ್ಲಿಸಿದ್ದಾರೆ.
ನಗರದ ಎಲ್ಲ ಕುಡಿಯುವ ನೀರಿನ ಸಂಗ್ರಹ ತೊಟ್ಟಿಗಳನ್ನು ಸ್ವತ್ಛಗೊಳಿಸಿ ನೀರಿನ ಲೀಕೇಜ್‌ಗಳನ್ನು ದುರಸ್ತಿಗೊಳಿಸಿ ಕ್ಲೋರಿನೇಷನ್ ಮಾಡುವಂತೆ ಹಲವು ಬಾರಿ ತಿಳಿಸಲಾಗಿದ್ದರೂ ನಿರ್ಲಕ್ಷಿಸಿರುವುದು ಈ ಮೂಲಕ ಬಹಿರಂಗವಾಗಿದೆ.
ಜು.31ರಂದು ಮಧ್ಯಾಹ್ನದ ಬಳಿಕ ಕವಾಡಿಗರಹಟ್ಟಿಯ ಓವರ್‌ಹೆಡ್ ಟ್ಯಾಂಕ್‌ನಿಂದ ನೀರು ಸರಬರಾಜಾದ ನೀರು ಸೇವಿಸಿ ಕೆಲವರು ಅಸ್ವಸ್ಥರಾಗಿದ್ದರು. 23 ವರ್ಷದ ಮಂಜುಳಾ ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಇವರ ಹೆಣ್ಣುಮಗು ಕೂಡ ಅಸ್ವಸ್ಥವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಜಿಲ್ಲಾ ಆರೋಗ್ಯಾ ಧಿಕಾರಿಗಳ ವರದಿಯಂತೆ ಜು.31ರಿಂದ ಆ.2ರ ವರೆಗೆ ಒಟ್ಟು 107 ಪ್ರಕರಣಗಳು ದಾಖಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ 65 ಮತ್ತು ಬಸವೇಶ್ವರ ವೈದ್ಯಕೀಯ ಆಸ್ಪತ್ರೆಯಲ್ಲಿ 42 ಅಸ್ವಸ್ಥರು ಚಿಕಿತ್ಸೆ ಪಡೆದಿದ್ದು, 7 ಜನರು ಗುಣಮುಖರಾಗಿದ್ದಾರೆ. ಮೂವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ.