Advertisement
ಮಂಗಳೂರು/ಉಡುಪಿ: ಸ್ಥಳೀಯ ಮಾರುಕಟ್ಟೆಗೆ ನವಚೈತನ್ಯ ತುಂಬಲು ಬಂದಿರುವ ಈ ದಸರಾ ಆಭರಣ ಉದ್ಯಮವನ್ನೂ ಮತ್ತೆ ಹೊಳೆ ಯುವಂತೆ ಮಾಡುವಲ್ಲಿ ಕೊಂಚ ಯಶಸ್ವಿಯಾಗಿದೆ.
Related Articles
Advertisement
ಲಾಕ್‌ಡೌನ್ ಕಾರಣದಿಂದ ಏಳು ತಿಂಗಳಿನಿಂದ ಶುಭ ಸಮಾರಂಭಗಳು ಕರಾವಳಿ ಭಾಗದಲ್ಲಿ ನಡೆದಿರಲಿಲ್ಲ. ಶುಭ ಸಂದರ್ಭಗಳಲ್ಲಿ ಮನೆ ಮಂದಿಯೆಲ್ಲ ಚಿನ್ನಾಭರಣಗಳನ್ನು ಖರೀದಿಸುವ ಸಂಪ್ರದಾಯ ಕರಾವಳಿಯಲ್ಲಿ ಹೆಚ್ಚಿದೆ. ಅದರ ಧನಾತ್ಮಕ ಪರಿಣಾಮದಿಂದ ಚಿನ್ನಾಭರಣ ಉದ್ಯಮಕ್ಕೆ ಅನುಕೂಲವಾಗಿದೆ.
ಉಡುಪಿಯ ಆಭರಣ ಜುವೆಲರ್ಸ್ ಅಕೌಂಟ್ಸ್ ವಿಭಾಗದ ಮುಖ್ಯಸ್ಥ ವಿನೋದ್ ಕಾಮತ್ ಅವರು ಮಾರು ಕಟ್ಟೆ ಚೇತರಿಕೆಯನ್ನು ಒಪ್ಪಿಕೊಳ್ಳುತ್ತಾರೆ. ಚೌತಿ, ವರಮಹಾಲಕ್ಷ್ಮೀ ಹಬ್ಬಗಳಿಗೆ ಹೋಲಿಸಿದರೆ ಶೇ. 50ರಷ್ಟು ಏರಿಕೆ ಯಾಗಿದೆ. ಇದೇ ಬೆಳವಣಿಗೆ ಮುಂದುವರಿದರೆ ಮುಂದಿನ ಎಪ್ರಿಲ್ ಅಂತ್ಯಕ್ಕೆ ಕೊರೊನಾ ಪೂರ್ವದ ಸ್ಥಿತಿಗೆ ಮಾರುಕಟ್ಟೆ ಬರಲಿದೆ’ ಎಂದಿದ್ದಾರೆ.
ಮಂಗಳೂರಿನ ಕೆ.ಎಸ್. ರಾವ್ ರಸ್ತೆಯ ಎಸ್.ಎಲ್. ಶೇಟ್ ಜುವೆಲರ್ ಆ್ಯಂಡ್ ಡೈಮಂಡ್ ಹೌಸ್‌ನ ಪಾಲು ದಾರರಾದ ಎಂ. ಪ್ರಶಾಂತ್ ಶೇಟ್ ಅವರ ಪ್ರಕಾರ, “ಲಾಕ್‌ಡೌನ್ ಕಾರಣದಿಂದ ನಾಲ್ಕೈದು ತಿಂಗಳುಗಳಿಂದ ಜನರಿಗೆ ಖರೀದಿಗೆ ಅವಕಾಶವಿರಲಿಲ್ಲ. ಹೀಗಾಗಿ ಹಬ್ಬಗಳ ಸುಸಂದರ್ಭದಲ್ಲಿ ಚಿನ್ನಾಭರಣ ಖರೀದಿಗೆ ಜನರು ಮನಸ್ಸು ಮಾಡುತ್ತಿದ್ದಾರೆ’.
ಹೊಸ ಚಿನ್ನಾಭರಣ ಖರೀದಿಕೊರೊನಾ ಬಳಿಕ ಚಿನ್ನಾಭರಣ ಮಾರುಕಟ್ಟೆಗೆ ಮೊದಲ ಬಾರಿಗೆ ಹೊಸ ಹುರುಪು ಬಂದಿದೆ. ಚಿನ್ನದ ಬೆಲೆ ಏರಿಕೆಯಾಗಿದ್ದರೂ ಹೊಸ ಚಿನ್ನದ ಖರೀದಿ ಹೆಚ್ಚಿರುವುದು ಆಭರಣ ಉದ್ಯಮಕ್ಕೆ ಹೊಸ ಚೈತನ್ಯವನ್ನು ತುಂಬುತ್ತಿದೆ ಎಂಬುದು ಉಡುಪಿಯ ಸ್ವರ್ಣ ಜುವೆಲರ್ ಮಾಲಕ ಗುಜ್ಜಾಡಿ ರಾಮದಾಸ ನಾಯಕ್ ಅವರ ಅಭಿಮತ. ಮಂಗಳೂರಿನ ಲಕ್ಷ್ಮೀದಾಸ್ ಜುವೆಲರ್ನ ಮಾಲಕರಾದ ಸೀತಾರಾಮ್ ಆಚಾರ್ ಅವರು, “ಮದುವೆ ಸೇರಿದಂತೆ ಶುಭ ಸಮಾರಂಭಗಳು ಸದ್ಯ ಆರಂಭವಾಗಿವೆ. ಗ್ರಾಹಕರೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ವಹಿವಾಟು ಹೆಚ್ಚಬಹುದು’ಎಂದಿದ್ದಾರೆ. ಕುಂದಾಪುರದ ಉದಯ ಜುವೆಲರ್ಸ್ ಪಾಲುದಾರ ಅಕ್ಷಯ್ ಶೇಟ್, ಸಮಾರಂಭಗಳೇ ಕಡಿಮೆಯಾಗಿದ್ದರೂ ಅಗತ್ಯ ಸಮಾರಂಭಗಳಿಗೆ ಖರೀದಿ ನಿಂತಿಲ್ಲ. ನಿಧಾನವಾಗಿ ಮತ್ತೆ ಮಾರುಕಟ್ಟೆಯತ್ತ ಜನರು ಬರುತ್ತಿರುವುದು ಸಂತಸದಾಯಕ ಬೆಳವಣಿಗೆ ಎಂದಿದ್ದಾರೆ.
ಮಂಗಳೂರಿನ ಮಳಿಗೆಯಲ್ಲಿ ಚಿನ್ನ ಖರೀದಿಸುತ್ತಿದ್ದ ಪಿಲಾರು ಸಮೀಪದ ನಮಿತಾ ಅವರ ಪ್ರಕಾರ, “ವರ್ಷದಲ್ಲಿ ಒಮ್ಮೆಯಾದರೂ ಚಿನ್ನ ಖರೀದಿ ಮಾಡಬೇಕು ಎಂಬುದು ನಮ್ಮ ಉದ್ದೇಶ. ಆದರೆ ಇದುವರೆಗೆ ಕಾಲ ಕೂಡಿ ಬಂದಿರಲಿಲ್ಲ’. ಚಿನ್ನಾಭರಣ ಅಂಗಡಿಗಳ ವಹಿವಾಟು ಶೇ. 40ಕ್ಕಿಂತಲೂ ಹೆಚ್ಚು ನಷ್ಟದಲ್ಲಿತ್ತು. ಆದರೆ ಈಗ ತುಸು ಸುಧಾರಣೆ ಕಾಣುತ್ತಿದೆ. ಆದ ಕಾರಣ ದೀಪಾವಳಿಯನ್ನು ಕಾಯುವಂತೆ ಮಾಡಿದೆ ಎಂಬುದು ಕಾರ್ಕಳದ ಪವನ್ ಜುವೆಲರ್ಸ್‌ನ ಸತೀಶ್ ಅವರ ಅಭಿಪ್ರಾಯ. ಬರ್ತ್‌ಡೇ ಗಿಫ್ಟ್
ಮುಂದಿನ ತಿಂಗಳು ನನ್ನ ಮಗಳ ಮತ್ತು ಮೊಮ್ಮಗಳ ಜನ್ಮದಿನವಿದೆ. ಅವಳ ಹುಟ್ಟುಹಬ್ಬದ ಉಡುಗೊರೆಗಾಗಿ ಚಿನ್ನ ಖರೀದಿಸುತ್ತಿದ್ದೇನೆ ಎಂದವರು ಗ್ರಾಹಕಿ ಮಲ್ಪೆ ವಡಭಾಂಡೇಶ್ವರದ ಭಾರತಿ ಕೆದ್ಲಾಯ ಅವರು. ಕೈಯಲ್ಲಿ ಹಣವಿದ್ದರೆ ಖಾಲಿಯಾಗುತ್ತದೆ. ಸ್ವಲ್ಪ ಮಟ್ಟಿನ ಹಣವನ್ನು ಚಿನ್ನದ ರೂಪದಲ್ಲಿ ಇಡೋಣವೆಂದು ಖರೀದಿಗೆ ಬಂದಿದ್ದೇನೆ. ಆಫರ್‌ಗಳು ಸಿಕ್ಕರೆ ಮತ್ತಷ್ಟು ಖುಷಿ ಎಂದಿದ್ದಾರೆ ಸಂತೆಕಟ್ಟೆಯ ಚಿತ್ರಾ ಶೆಟ್ಟಿ. ಕರಾವಳಿಯ ಚಿನ್ನಾಭರಣದ ಉದ್ಯಮ ವಲಯದವರ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಖರೀದಿ ಪ್ರಮಾಣದಲ್ಲಿ ದೊಡ್ಡ ವ್ಯತ್ಯಾಸವಾಗಿಲ್ಲ. ನವರಾತ್ರಿ, ದೀಪಾವಳಿ ವೇಳೆಗೆ ಚಿನ್ನ ಖರೀದಿಗೆ ಆಸಕ್ತಿ ಹೆಚ್ಚುವ ಕಾರಣ ಆಫರ್‌ಗಳು, ಹೊಸ ಡಿಸೈನ್‌ಗಳೂ ಚಿನ್ನಾಭರಣ ಮಳಿಗೆಗಳಲ್ಲಿ ರಾರಾಜಿಸುತ್ತಿವೆ. ಹೀಗಾಗಿ ಕೊರೊನಾ ಬಳಿಕದ ಮಾರುಕಟ್ಟೆ ನಿರೀಕ್ಷಿತ ಪ್ರಮಾಣದಲ್ಲಿ ಚೇತರಿಕೆಯ ಹೆಜ್ಜೆಯಲ್ಲಿದೆ. ಫ್ಯಾಮಿಲಿ ಶಾಪಿಂಗ್
ದಸರಾ ಸಂಭ್ರಮ ಆರಂಭವಾಗಿದ್ದು, ಮನೆಗೆ ಅಗತ್ಯವಾದ ಹೊಸ ವಸ್ತುಗಳ ಖರೀದಿಯ ಭರಾಟೆಯೂ ಹೆಚ್ಚಿದೆ. ನೀವೂ ನಿಮ್ಮ ಕನಸಿನ ವಸ್ತುವನ್ನು ಈ ಹಬ್ಬದಲ್ಲಿ ಖರೀದಿಸಿರಬಹುದು. ಅದರೊಂದಿಗೆ ನಿಮ್ಮ ಕುಟುಂಬದ ಚಿತ್ರ ಮತ್ತು ಖರೀದಿ ರಶೀದಿಯ ಪ್ರತಿಯನ್ನು ಈ ನಂಬರ್‌ಗೆ ಕಳುಹಿಸಿ. ಸೂಕ್ತವಾದವುಗಳನ್ನು ಪ್ರಕಟಿಸುತ್ತೇವೆ.
ವಾಟ್ಸ್‌ಆ್ಯಪ್ ಸಂಖ್ಯೆ: 7618774529