Advertisement
ಮನೆ ಮೇಲ್ಛಾವಣಿಯಲ್ಲಿ ಸೌರ್ ಪ್ಯಾನಲ್ ಅಳವಡಿಸುವ ಮೂಲಕ ವಿದ್ಯುತ್ ಬಳಸಿಕೊಂಡು ಇದನ್ನು ಹೆಸ್ಕಾಂಗೆ ಮಾರಾಟ ಮಾಡಲು ಅವಕಾಶವಿದ್ದು, ನಗರ ಹಾಗೂ ಜಿಲ್ಲಾದ್ಯಂತ ಹೆಸ್ಕಾಂಗೆ ಸೋಲಾರ್ ವಿದ್ಯುತ್ ಬಳಸಿಕೊಂಡು ಮಾರಾಟ ಮಾಡುವಂತೆ ಹೆಸ್ಕಾಂ ಮನವಿ ಮಾಡಿದ್ದರೂ ಗ್ರಾಹಕರು ಅಷ್ಟೊಂದು ಆಸಕ್ತಿ ವಹಿಸುತ್ತಿಲ್ಲ. ಬೆಳಗಾವಿ ನಗರದಲ್ಲಿ 2.50 ಲಕ್ಷಕ್ಕೂ ಹೆಚ್ಚು ಜನ ವಿದ್ಯುತ್ ಗ್ರಾಹಕರು ಇದ್ದು, ಈ ಪೈಕಿ ಸುಮಾರು 16 ಸಾವಿರ ಜನ ಸೋಲಾರ್ ವಿದ್ಯುತ್ ಉಪಯೋಗಿಸುತ್ತಿದ್ದಾರೆ.
Related Articles
Advertisement
ನಿತ್ಯ 140 ಮೆ.ವ್ಯಾ. ಅಗತ್ಯ: ಬೆಳಗಾವಿ ನಗರಕ್ಕೆ ಪ್ರತಿನಿತ್ಯ 140 ಮೆಗಾ ವ್ಯಾಟ್ ವಿದ್ಯುತ್ ಅವಶ್ಯಕತೆ ಇದೆ. ಇದರಲ್ಲಿ 60 ಮೆಗಾ ವ್ಯಾಟ್ ವಿದ್ಯುತ್ ಕೈಗಾರಿಕೆಗಳಿಗೆ ಬಳಕೆ ಆಗುತ್ತಿದೆ. ಬೇಸಿಗೆ ಕಾಲದಲ್ಲಿ ಇದರ ಪ್ರಮಾಣ 160 ಮೆಗಾ ವ್ಯಾಟ್‌ವರೆಗೆ ಹೆಚ್ಚಾಗುತ್ತ ಹೋಗುತ್ತದೆ. ದಿನದಿನಕ್ಕೂ ವಿದ್ಯುತ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಹೆಸ್ಕಾಂಗೆ ತಲೆ ನೋವಾಗಿ ಪರಿಣಮಿಸಿದ್ದು, ಹೀಗಾಗಿ ಸೋಲಾರ್ ವಿದ್ಯುತ್ ಬಳಸುವಂತೆ ಗ್ರಾಹಕರಲ್ಲಿ ಮನವಿ ಮಾಡುತ್ತಿದೆ.
140 ಮೆಗಾ ವ್ಯಾಟ್ ವಿದ್ಯುತ್ ಅಗತ್ಯ ಇರುವುದರಿಂದ ಇಷ್ಟೊಂದು ವಿದ್ಯುತ್‌ನ್ನು ಹೆಸ್ಕಾಂ ಬೇರೆ-ಬೇರೆ ಮೂಲಗಳಿಂದ ಪಡೆದುಕೊಳ್ಳುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ, ಸಕ್ಕರೆ ಕಾರ್ಖಾನೆಗಳು, ಕೈಗಾ ಅಣುಸ್ಥಾವರ, ಪವನ ಶಕ್ತಿಗಳು ಹೀಗೆ ವಿವಿಧ ಮೂಲಗಳಿಂದ ಪಡೆದುಕೊಂಡು ನಗರ ಹಾಗೂ ಜಿಲ್ಲೆಗೆ ಪೂರೈಸುತ್ತಿದೆ. ಪವನ ಶಕ್ತಿ ಕಡೆಯಿಂದ ನಿತ್ಯ 24.08 ಮೆಗಾ ವ್ಯಾಟ್ ವಿದ್ಯುತ್ ಪೂರೈಕೆ ಆಗುತ್ತಿದೆ. ರಾಯಬಾಗ, ಚಿಕ್ಕೋಡಿ, ಅಥಣಿ, ಸವದತ್ತಿ, ಬೆಳಗಾವಿ ತಾಲೂಕು ಸೇರಿದಂತೆ ವಿವಿಧ ಕಡೆಗಳಲ್ಲಿ ಪವನ ಶಕ್ತಿ ಟಾವರ್‌ಗಳನ್ನು ಅಳವಡಿಸಲಾಗಿದೆ. ವಿವಿಧ ಖಾಸಗಿ ಸಂಸ್ಥೆಯವರು ಹೆಸ್ಕಾಂಗೆ ವಿದ್ಯುತ್ ಪೂರೈಸುತ್ತಿವೆ. ಜತೆಗೆ ಖಾಸಗಿ ಕಂಪನಿಯವರು ವಿಶಾಲ ಪ್ರದೇಶಗಳಲ್ಲಿ ಸೋಲಾರ್ ಪ್ಲ್ಯಾಂಟ್‌ಗಳನ್ನು ಮಾಡಿ ವಿದ್ಯುತ್ ಮಾರಾಟ ಮಾಡುವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ.
ಬೆಳಗಾವಿ ನಗರ ಹಾಗೂ ಜಿಲ್ಲಾದ್ಯಂತ ಸೋಲಾರ್ ವಿದ್ಯುತ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯ 387 ಗ್ರಾಹಕರು ಸೌರ ವಿದ್ಯುತ್ ಬಳಸಿಕೊಂಡು ಹೆಸ್ಕಾಂಗೆ ಮಾರಾಟ ಮಾಡುತ್ತಿದ್ದಾರೆ. ನಗರದಲ್ಲಿಯೂ ಗ್ರಾಹಕರ ಸಂಖ್ಯೆ 152 ಇದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೋಲಾರ್ ವಿದ್ಯುತ್ ಬಳಸುವಂತೆ ಗ್ರಾಹಕರಲ್ಲಿ ಮನವಿ ಮಾಡಲಾಗುತ್ತಿದೆ. -ಗಿರಿಧರ ಕುಲಕರ್ಣಿ, ಅಧೀಕ್ಷಕ ಅಭಿಯಂತರರು, ಹೆಸ್ಕಾಂ
-ಭೈರೋಬಾ ಕಾಂಬಳೆ