Advertisement

ಗ್ರಾಹಕರ ಕೈ ಸುಡುತ್ತಿರುವ ಟೊಮೇಟೊ; ಮೊಟ್ಟೆ ರಖಂ ದರ ಕುಸಿತ!

12:30 AM Jul 11, 2023 | Team Udayavani |

ಉಡುಪಿ/ಮಂಗಳೂರು: ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಇದೀಗ ಟೊಮೇಟೊ ಮತ್ತಷ್ಟು ಕೈ ಸುಡುತ್ತಿದೆ.

Advertisement

ವಿಪರೀತ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನ ಮನೆಗಳಲ್ಲಿ ಟೊಮೇಟೊ ಬಳಕೆಯನ್ನೇ ಕಡಿಮೆ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕೆ.ಜಿ.ಗೆ 70, 80 ರೂ. ಇದ್ದ ದರ ಈಗ 100 ರೂ. ಗಡಿ ದಾಟಿ, 120 ರೂ.ಗೆ ತಲುಪಿದೆ.

ಮಾರುಕಟ್ಟೆಯಲ್ಲಿ ಪ್ರಸ್ತುತ ಹೋಲ್‌ಸೇಲ್‌ (ಸಗಟು) ದರ ಕೆ.ಜಿ. ಗೆ 100-110 ರೂ. ಇದ್ದು ಮಾರುಕಟ್ಟೆ (ಚಿಲ್ಲರೆ)ಯಲ್ಲಿ 120 ರೂ. ಇದೆ. ಪ್ರಸ್ತುತ ದಿನಗಳಲ್ಲಿ ಸಸ್ಯಾಹಾರ, ಮಾಂಸಾಹಾರ ಸಹಿತ ಸಾಮಾನ್ಯ ಅಡುಗೆಗೂ ಟೊಮೇಟೊ ಅತ್ಯಗತ್ಯ. ಏನಿಲ್ಲದಿದ್ದರೂ ಸರಳವಾಗಿ ಒಂದು ಸಾರು ಮಾಡಿ ಊಟ ಮಾಡಲು ಟೊಮೇಟೊ ಬೇಕಾಗುತ್ತದೆ. ಆದರೆ ಬೆಲೆ ಏರಿಕೆಯಿಂದ ಟೊಮೇಟೊ ಖರೀದಿ ಪ್ರಮಾಣ ಕುಸಿತವಾಗಿದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿ ಶಫೀಕ್‌.

ಒಂದು ಕೆ.ಜಿ. ಖರೀದಿಸುವವರು ಈಗ 500 ಗ್ರಾಂ / 250 ಗ್ರಾಂ ತೆಗೆದುಕೊಂಡು ಹೋಗುತ್ತಿದ್ದಾರೆ. ಅದರಲ್ಲಿಯೂ ಹೊಟೇಲ್‌, ಕ್ಯಾಂಟೀನ್‌, ರೆಸ್ಟೋರೆಂಟ್‌ ಉದ್ಯಮಗಳು ಟೊಮೇಟೊ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿವೆ. ಟೊಮೇಟೊ ಸಹಿತ ತರಕಾರಿ ಬೆಲೆ ಏರಿಕೆ ಹೊಟೇಲ್‌ ಉದ್ಯಮದ ಮೇಲೆ ಆರ್ಥಿಕವಾಗಿ ಗಂಭೀರ ಪರಿಣಾಮ ಬೀರುತ್ತಿದೆ ಎಂಬುದು ಹೊಟೇಲ್‌ ಮಾಲಕರ ಅಳಲು.

ಚಿಕ್ಕಮಗಳೂರು ಟೊಮೇಟೊ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಗೆ ಚಿಕ್ಕಮಗಳೂರು ಸೇರಿದಂತೆ ಹೊರ ಜಿಲ್ಲೆಗಳಿಂದ ಟೊಮೇಟೊ ಪೂರೈಕೆಯಾಗುತ್ತಿದೆ. ಚಿಕ್ಕಮಗಳೂರಿನ ಕೊಡುಗೆಯೇ ಅತ್ಯಧಿಕ. ಅಲ್ಲಿಂದ ನಗರ, ಗ್ರಾಮಾಂತರ ಭಾಗದ ತರಕಾರಿ ಅಂಗಡಿಗಳಿಗೆ ವಿತರಿಸಲಾಗುತ್ತದೆ. ಚಿಕ್ಕಮಗಳೂರು ಭಾಗದಲ್ಲಿ ಭಾರೀ ಮಳೆಯಿಂದಾಗಿ ಬೆಳೆಗಳಿಗೆ ಅಪಾರ ಹಾನಿಯಾಗಿರುವುದು ಬೆಲೆ ಏರಿಕೆಗೆ ಕಾರಣ.

Advertisement

ಜಿಲ್ಲೆಯ ಮಾರುಕಟ್ಟೆಗೆ ಪ್ರಮುಖವಾಗಿ ಚಿಕ್ಕಮಗಳೂರು ಭಾಗದಿಂದ ಟೊಮೇಟೊ ಪೂರೈಕೆಯಾಗುತ್ತದೆ. ಸಗಟು ದರದಲ್ಲಿ ಕೆ.ಜಿ.ಗೆ 100 ರೂ.ಗಳಲ್ಲಿ ಮಾರಾಟ ಮಾಡುತ್ತಿದ್ದು, ಸ್ಥಳೀಯ ಮಾರುಕಟ್ಟೆಗಳಲ್ಲಿ 110, 120 ರೂ.ಗಳಂತೆ ಮಾರಾಟವಾಗುತ್ತಿದೆ. ಸದ್ಯಕ್ಕೆ ಬೆಲೆ ಕಡಿಮೆಯಾಗುವ ಲಕ್ಷಣ ತೋರುತ್ತಿಲ್ಲ. ಬೆಲೆ ಏರಿಕೆಯಿಂದಾಗಿ ಜನರು ಟೊಮೇಟೊ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.
– ಅಶ್ವಿ‌ತ್‌, ಟೊಮೇಟೊ ವ್ಯಾಪಾರಸ್ಥರು, ಎಪಿಎಂಸಿ

ಮೊಟ್ಟೆ ರಖಂ ದರ ಕುಸಿತ!
5 ದಿನಗಳಲ್ಲಿ 80 ಪೈಸೆ ಇಳಿಕೆ
ಬಜಪೆ: ಕಳೆದ ಗುರುವಾರ ದಿಂದ ಸೋಮವಾರದ ಅವಧಿಯಲ್ಲಿ ಕೋಳಿ ಮೊಟ್ಟೆಯ ದರದಲ್ಲಿ ಕುಸಿತ ಕಂಡು ಬಂದು 80 ಪೈಸೆಯಷ್ಟು ಇಳಿಕೆಯಾಗಿದೆ.

ಸೋಮವಾರ ಒಮ್ಮೆಲೇ 40 ಪೈಸೆ ಕುಸಿದಿದೆ. ಗುರುವಾರ ಮೊಟ್ಟೆಗೆ ರಖಂ ದರ ಒಂದಕ್ಕೆ 6.40 ರೂ. ಇದ್ದು, ಶುಕ್ರವಾರ 6.20 ರೂ.ಗೆ, ರವಿವಾರ 6 ರೂ.ಗೆ, ಸೋಮವಾರ 5.60 ರೂ.ಗೆ ಇಳಿದಿದೆ.
ದಿನನಿತ್ಯ ಬಳಕೆಯಲ್ಲಿ ಮೊಟ್ಟೆ ಪಾತ್ರ ಹಿರಿದು. ಇದರ ದರ ಏರಿಕೆ, ಇಳಿಕೆ ಬಗ್ಗೆ ಹೆಚ್ಚು ಚರ್ಚೆಗಳು ಆಗುತ್ತವೆ. ಗೂಡಂಗಡಿ, ಆಮ್ಲೆಟ್‌ ಅಂಗಡಿಯವರು ಮೊಟ್ಟೆಯನ್ನೇ ನಂಬಿ ವ್ಯಾಪಾರ ಮಾಡುವವರು. ಮಾಂಸದತ್ತ ಒಲವು ಮೊಟ್ಟೆ ದರ ಇಳಿಕೆಗೆ ಒಂದು ಕಾರಣ. ಬೇಡಿಕೆ ಕಡಿಮೆಯಾದ ಕಾರಣ ಮೊಟ್ಟೆಯ ದಾಸ್ತಾನು ಹೆಚ್ಚಿದೆ. ಇದು ದರ ಮತ್ತಷ್ಟು ಕಡಿಮೆಯಾಗಲು ಒಂದು ಕಾರಣ ಎನ್ನುತ್ತಾರೆ ವ್ಯಾಪಾರಿಗಳು.

ಮಳೆ-ಮೊಟ್ಟೆ ಸಂಬಂಧ!
ಮಳೆ ಅಧಿಕವಾದರೆ ಮೊಟ್ಟೆಗೆ ಬೇಡಿಕೆಯೂ ಹೆಚ್ಚು. 2 ದಿನದಿಂದ ಮಳೆ ಕಡಿಮೆ ಯಾಗಿರುವುದು ಮೊಟ್ಟೆ ಬೇಡಿಕೆ ಕುಸಿಯಲು ಕಾರಣ ಎನ್ನುತ್ತಾರೆ ವ್ಯಾಪಾರಿಗಳು. ಮಳೆ ಬಂದರೆ ಆಮ್ಲೆಟ್‌ ತಿನ್ನುವವರ ಸಂಖೆ ಹೆಚ್ಚು ಎಂಬುದು ಆಮ್ಲೆಟ್‌ ಮಾಡುವ ವ್ಯಾಪಾರಿಗಳ ಅಂಬೋಣ.

ಮೊಟ್ಟೆ ದರ ಇನ್ನೂ ಕಡಿಮೆಯಾಗಬಹುದೆಂದು ಹೆಚ್ಚು ತೆಗೆದುಕೊಳ್ಳಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಮೊಟ್ಟೆ ಮಾರಾಟವೂ ಕಡಿಮೆಯಾಗುತ್ತಿದೆ ಎಂದು ಮೊಟ್ಟೆ ಲೈನ್‌ ಸೇಲ್‌ ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ಮಳೆ ಕಡಿಮೆಯಾದರೆ ಮೊಟ್ಟೆದರ ಇನ್ನೂ ಕುಸಿದೀತು ಎಂಬ ಲೆಕ್ಕಾಚಾರವಿದೆ. ರಖಂ ಮೊಟ್ಟೆ ದರ ಕಡಿಮೆಯಾದರೂ ಚಿಲ್ಲರೆ ಮಾರಾಟ ದರದಲ್ಲಿ ಇದರ ಪರಿಣಾಮ ಒಂದೆರಡು ದಿನದ ಅನಂತರ ಕಾಣಬಹುದು.

Advertisement

Udayavani is now on Telegram. Click here to join our channel and stay updated with the latest news.

Next