Advertisement

ಗ್ರಾಹಕರು ಮತ್ತಷ್ಟು ಸದೃಢ

12:30 AM Dec 22, 2018 | |

ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಮಾರಾಟವಾಗಲು ಗ್ರಾಹಕರು ಅಗತ್ಯವಾಗಿಬೇಕು. ಅಂತೆಯೇ ಅವರ ಹಿತದೃಷ್ಟಿಯೂ ಅಗತ್ಯ. ಅದರ ಮೊದಲ ಹಂತವಾಗಿ 1986ರಲ್ಲಿ ಗ್ರಾಹಕ ಹಿತರಕ್ಷಣಾ ಕಾಯ್ದೆಯನ್ನು ಸರ್ಕಾರ ಜಾರಿ ಮಾಡಲಾಗಿತ್ತು. ಇದೀಗ 32 ವರ್ಷಗಳ ಬಳಿಕ ಬದಲಾಗಿರುವ ಮಾರುಕಟ್ಟೆ ಮತ್ತು ಗ್ರಾಹಕ ಚಿಂತನೆಗಳಿಗೆ ತಕ್ಕಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೊಸ ನಿಯಮಗಳನ್ನು ಸೇರಿಸಿಕೊಂಡು 1986ರ ಕಾಯ್ದೆಯನ್ನು ಬಲಗೊಳಿಸಿದೆ. ಗುರುವಾರ ಗ್ರಾಹಕ ಹಿತರಕ್ಷಣಾ ವಿಧೇಯಕ 2018 ಲೋಕಸಭೆಯಲ್ಲಿ ಅಂಗೀಕೃತಗೊಂಡಿದ್ದು, ರಾಜ್ಯಸಭೆಯಲ್ಲಿ ಸಮ್ಮತಿ ಪಡೆಯಬೇಕಾಗಿದೆ.

Advertisement

ಹೊಸ ವಿಧೇಯಕದಲ್ಲಿನ ಪ್ರಸ್ತಾಪಗಳೇನು?
ರಾಷ್ಟ್ರಮಟ್ಟದಲ್ಲಿ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ರಚನೆಗೆ ಕ್ರಮ. 
ಗ್ರಾಹಕ ಹಕ್ಕುಗಳ ರಕ್ಷಣೆ ಕಾಯ್ದೆ, ಪ್ರಚಾರಕ್ಕಾಗಿ ಈ ಪ್ರಾಧಿಕಾರ ರಚನೆ ಮಾಡಲಾಗುತ್ತದೆ.
3 ಹಂತದ ಗ್ರಾಹಕ ಹಕ್ಕುಗಳ ರಕ್ಷಣಾ ವ್ಯವಸ್ಥೆ
ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಆಯೋಗ
3 ಹಂತಗಳಲ್ಲಿ ಗ್ರಾಹಕ ರಕ್ಷಣಾ ಮಂಡಳಿ ರಚನೆ
ಗ್ರಾಹಕರ ಮಧ್ಯಸ್ಥಿಕೆ ಕೇಂದ್ರಗಳ ಸ್ಥಾಪನೆಗೂ ಆದ್ಯತೆ

ಗ್ರಾಹಕ ಹಕ್ಕುಗಳೆಂದರೇನು?
ಜೀವಕ್ಕೆ ಮತ್ತು ಆಸ್ತಿಗೆ ಅಪಾಯ ಒಡ್ಡುವ ವಸ್ತು ಅಥವಾ ಸೇವೆಯಿಂದ ರಕ್ಷಣೆ.
ವಸ್ತು ಅಥವಾ ಸೇವೆಯ ಶುಲ್ಕ, ಬೆಲೆಯ ಬಗ್ಗೆ ಮಾಹಿತಿ, ಅದರ ಗುಣಮಟ್ಟ, ಪ್ರಮಾಣದ ಸರಿಯಾದ ಮಾಹಿತಿ.
ಅದರಲ್ಲಿ ವ್ಯತ್ಯಯ ಉಂಟಾದರೆ ಗ್ರಾಹಕರ ದೂರು, ಸಲಹೆಗಳನ್ನು ಸೂಕ್ತ ವೇದಿಕೆಯಲ್ಲಿ ಪ್ರಸ್ತಾಪಿಸಿ, ಅದಕ್ಕೆ ಪರಿಹಾರ ಪಡೆಯುವುದು.

ಗ್ರಾಹಕ ರಕ್ಷಣಾ ಪ್ರಾಧಿಕಾರದ ಕೆಲಸವೇನು?
ಗ್ರಾಹಕರು ನೀಡಿದ ದೂರಿನ ಬಗ್ಗೆ ಮಹಾ ನಿರ್ದೇಶಕರ ನೇತೃತ್ವದಲ್ಲಿ ತನಿಖೆ. ಶೋಧ ಮತ್ತು ವಸ್ತುಗಳನ್ನು ವಶಕ್ಕೆ ಪಡೆಯಲೂ ಅಧಿಕಾರ.
ಗ್ರಾಹಕರಿಗೆ ಮತ್ತು ಸಾರ್ವಜನಿಕವಾಗಿ ನಿಗದಿತ ವಸ್ತು ಅಥವಾ ಸೇವೆ ಹಾನಿಕಾರಕ ಎಂದು ಕಂಡು ಬಂದಲ್ಲಿ ಹಿಂದಕ್ಕೆ ಪಡೆಯುವಂತೆ ಆದೇಶ ನೀಡಬಹುದು.
ತನಿಖಾ ವರದಿಯ ಆಧಾರದಲ್ಲಿ ಗ್ರಾಹಕ ವೇದಿಕೆಯ ವ್ಯಾಪ್ತಿಯಲ್ಲಿ ದೂರು ಸಲ್ಲಿಸಲು ಸೂಚನೆ.

ತಪ್ಪು ಮಾಹಿತಿ ಇದ್ದಲ್ಲಿ ವಸ್ತು ಅಥವಾ ಸೇವೆಯ ಬ್ರ್ಯಾಂಡ್‌ ಅಂಬಾಸಿಡರ್‌ ಅಥವಾ ರಾಯಭಾರಿಗೆ ದಂಡ ವಿಧಿಸಲು ಅವಕಾಶ. 1 ವರ್ಷದವರೆಗೆ ಆತನಿಗೆ ಅದನ್ನು ಪ್ರತಿನಿಧಿಸದಂತೆ ಇರಲು ಕ್ರಮ. 
ತಪ್ಪು ಮಾಹಿತಿ/ಜಾಹೀರಾತಿನ ವಿರುದ್ಧ ಕ್ರಮ. 
ಯಾವುದೇ ವಸ್ತು ಅಥವಾ ಸೇವೆಯಲ್ಲಿ ನ್ಯೂನತೆ ಇದ್ದರೆ ಅದರ ಪ್ರಚಾರ ರಾಯಭಾರಿಗೆ  10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಜತೆಗೆ ಒಂದು ವರ್ಷಗಳ ಕಾಲ ಆ ವ್ಯಕ್ತಿಗೆ ಅದನ್ನು ಪ್ರತಿನಿಧಿಸದಂತೆ ನಿಷೇಧ ಹೇರಲಾಗುತ್ತದೆ.
ತಪ್ಪು ಮರುಕಳಿಸಿದಲ್ಲಿ 50 ಲಕ್ಷ ರೂ. ವರೆಗೆ ದಂಡ ಮತ್ತು 3 ವರ್ಷಗಳ ಕಾಲ ನಿಷೇಧ ಹೇರಲಾಗುತ್ತದೆ. 
ಯಾವುದೇ ವಸ್ತು ಮತ್ತು ಸೇವೆಯಲ್ಲಿನ ಮಾರಾಟದಿಂದ ಹಾನಿ ಅಥವಾ ಗಾಯಗಳಾದಲ್ಲಿ ಒಂದು ವರ್ಷ ಜೈಲು ಶಿಕ್ಷೆ ಸಹಿತ ಮೂರು ಲಕ್ಷ ರೂ., ಗಂಭೀರ ಗಾಯಗಳಾದಲ್ಲಿ 7 ವರ್ಷದವರೆಗೆ ಜೈಲು ಶಿಕ್ಷೆ ಸಹಿತ 5 ಲಕ್ಷ ರೂ. ದಂಡ, ಅಸುನೀಗಿದರೆ 7 ವರ್ಷದವರೆಗೆ ಜೈಲು/ ಜೀವಾವಧಿ ಜೈಲು ಶಿಕ್ಷೆ  ಮತ್ತು 10 ಲಕ್ಷ ರೂ. ದಂಡ ವಿಧಿಸಲು ಅವಕಾಶ ಉಂಟು.

Advertisement

ಎಲ್ಲಿಂದ ಬೇಕಾದರೂ ದೂರು
ಸೇವೆಯಲ್ಲಿ ಅಥವಾ ವಸ್ತುವಿನಲ್ಲಿ ವ್ಯತ್ಯಯ ಉಂಟಾಗಿದ್ದರೆ ದೂರು ಸಲ್ಲಿಸಲು ಅವಕಾಶ.
ಉದಾಹರಣೆಗೆ: ನಿಗದಿತ ಟ್ಯಾಕ್ಸಿ ಸೇವೆ ಕಾಯ್ದಿರಿಸಿ ಅದು ವಿಳಂಬವಾಗಿ ಆಗಮಿಸಿ ತಲುಪಬೇಕಾದ ಸ್ಥಳಕ್ಕೆ ತೆರಳಲು ಸಾಧ್ಯವಾಗದೇ ಇದ್ದರೆ ಅದನ್ನು ಸೇವೆಯಲ್ಲಿ ವ್ಯತ್ಯಯ ಎಂದು ಪರಿಗಣಿಸಿ ದೂರು ದಾಖಲಿಸಬಹುದು.
ಹೊಸ ಕಾಯ್ದೆಯಲ್ಲಿ ನಿಗದಿತ ವಸ್ತು ಅಥವಾ ಸೇವೆ ಪಡೆದುಕೊಂಡ ಸ್ಥಳದಿಂದಲೇ ದೂರು ನೀಡುವುದರ ಬದಲಾಗಿ ಗ್ರಾಹಕನು ಇರುವ ಸ್ಥಳದಿಂದಲೂ ಕೂಡ ವ್ಯತ್ಯಯದ ವಿರುದ್ಧ ಕೇಸು ಹಾಕಲು ಅವಕಾಶವಿದೆ. 

ವಸ್ತು ಅಥವಾ ಸೇವೆಯಲ್ಲಿ ವ್ಯತ್ಯಯ
ವಸ್ತು ಅಥವಾ ಸೇವೆಯ ಉತ್ಪಾದಕ ಸಂಸ್ಥೆ, ಅದನ್ನು ಮಾರಾಟ ಮಾಡಿದವರ ವಿರುದ್ಧ ಕ್ರಮ.
ಆಸ್ತಿಯ ಮೇಲೆ ಹಾನಿ ಉಂಟಾದರೆ, ವೈಯಕ್ತಿಕವಾಗಿ ಹಾನಿ ಅಥವಾ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ, ವಿಪರೀತದ ಸಂದರ್ಭದಲ್ಲಿ ಸಾವು ಉಂಟಾದರೆ ಕ್ರಮ
ಮಾನಸಿಕವಾಗಿ ಆಘಾತ ಉಂಟಾದರೆ ಹಾನಿ ಎಂದೇ ಪರಿಗಣಿಸಲಾಗುತ್ತದೆ.

ಪ್ರಕರಣ ನ್ಯಾಯ ನಿರ್ಣಯ ವ್ಯಾಪ್ತಿ
ಜಿಲ್ಲಾ ಮಟ್ಟದ ಆಯೋಗ- 12 ಲಕ್ಷ ರೂ.ಗಳಿಂದ 1 ಕೋಟಿ ರೂ. ವರೆಗೆ
ರಾಜ್ಯ ಮಟ್ಟದ ಆಯೋಗ- 1 ಕೋಟಿ ರೂ.ಗಳಿಂದ 10 ಕೋಟಿ ರೂ. ವರೆಗೆ
ರಾಷ್ಟ್ರ ಮಟ್ಟದ ಆಯೋಗ- 10 ಕೋಟಿ ರೂ. ಮೊತ್ತ ಮತ್ತು ಮೇಲ್ಪಟ್ಟದ್ದು

ಇ- ಕಾಮರ್ಸ್‌
ಹಾಲಿ ಇರುವ ಕಾಯ್ದೆಯಲ್ಲಿ ವೆಬ್‌ಸೈಟ್‌ಗಳ ಮೂಲಕ ವಸ್ತುಗಳ ಖರೀದಿ ಮತ್ತು ಅದರಿಂದ ಉಂಟಾಗುವ ಸೇವಾ ವ್ಯತ್ಯಯ ಪ್ರಸ್ತಾಪ ಇಲ್ಲ.
ಡೈರೆಕ್ಟ್ ಸೆಲ್ಲಿಂಗ್‌, ಇ-ಕಾಮರ್ಸ್‌, ಇಲೆಕ್ಟ್ರಾನಿಕ್‌ ಮಾಧ್ಯಮ ಮೂಲಕ ಸೇವೆ ನೀಡುವ ವ್ಯವಸ್ಥೆಗಳಲ್ಲಿ ನ್ಯೂನತೆ ತಪ್ಪಿಸಲು ಸರ್ಕಾರ ನಿಯಮ ಜಾರಿ ಮಾಡಬಹುದು. 

ಗುತ್ತಿಗೆ (ಕಾಂಟ್ರಾಕ್ಟ್)
ಹೊಸ ಕಾಯ್ದೆಯಲ್ಲಿ ಗುತ್ತಿಗೆ ಅಥವಾ ಕಾಂಟ್ರಾಕ್ಟ್ ರದ್ದು ಮಾಡುವುದರಿಂದ ಉಂಟಾಗುವ ನಷ್ಟ ತುಂಬಿ ಕೊಡುವುದನ್ನು ಪ್ರಸ್ತಾಪಿಸಲಾಗಿದೆ.
ಅಗತ್ಯಕ್ಕಿಂತ ಹೆಚ್ಚು ಸುರಕ್ಷಾ ಠೇವಣಿ, ಗುತ್ತಿಗೆ ನಿಯಮ ಉಲ್ಲಂ ಸಿದರೆ ಅಸಮಂಜಸವಾಗಿ ದಂಡ ವಿಧಿಸುವುದು,  ಅವಧಿಗಿಂತ ಮೊದಲೇ ಸಾಲ ನೀಡಿ ಅದನ್ನು ಮುಕ್ತಾಯಗೊಳಿಸುವುದಿದ್ದರೆ ಒಪ್ಪಿಕೊಳ್ಳದೇ ಇರುವುದು, ಸರಿಯಾದ ಕಾರಣ ನೀಡದೆ ಗುತ್ತಿಗೆ ರದ್ದು  ಗ್ರಾಹಕನ ಒಪ್ಪಿಗೆ ಇಲ್ಲದೆ ಮೂರನೇ ವ್ಯಕ್ತಿಗೆ ಸೇವೆಯ ಗುತ್ತಿಗೆ ವರ್ಗಾವಣೆ ಅಥವಾ ಸಲ್ಲದ ಕಾರಣ ಮುಂದಿಟ್ಟು ಗ್ರಾಹಕನಿಗೆ ಕಿರಿಕಿರಿಯಾಗುವಂತೆ ವರ್ತನೆ ವಿರುದ್ಧ ಕ್ರಮ.

ಸದಾಶಿವ ಕೆ

Advertisement

Udayavani is now on Telegram. Click here to join our channel and stay updated with the latest news.

Next