ಬೆಂಗಳೂರು: ಮಹಿಳೆಯೊಬ್ಬರ ದಂತ ಶಸ್ತ್ರ ಚಿಕಿತ್ಸೆಯಲ್ಲಿ ಎಡವಟ್ಟು ಮಾಡಿದ ದಂತ ವೈದ್ಯನಿಗೆ ಗ್ರಾಹಕರ ನ್ಯಾಯಾಲಯ 1.19 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಬೆಂಗಳೂರಿನ 36 ವರ್ಷದ ಮಹಿಳೆಯೊಬ್ಬರು 2016ರಲ್ಲಿ ಹಲ್ಲುಗಳ ಸಂವೇದನಾ ಶೀಲತೆ ಸಮಸ್ಯೆಯಿಂದ ಬಳಲುತ್ತಿದ್ದು, ಅದರ ಚಿಕಿತ್ಸೆಗೆ ಇಂದಿರಾ ನಗರದ ದಂತ ಕ್ಲಿನಿಕ್‌ಗೆ ತೆರಳಿದ್ದರು. ಈ ವೇಳೆ ವೈದ್ಯರು ಹಲ್ಲುಗಳಿಗೆ ಕಟ್ಟು ಪಟ್ಟಿ (ಹಲ್ಲಿಗೆ ಸರಿಗೆ) ಹಾಕಬೇಕು. ಅದಕ್ಕಾಗಿ ದವಡೆ (ಬುದ್ಧಿವಂತಿಕೆ ಹಲ್ಲು) ಹಲ್ಲು ತೆಗೆಯುವಂತೆ ಸಲಹೆ ನೀಡಿದ್ದರು. ಅದಕ್ಕಾಗಿ ಅವರೇ ಇನ್ನೊಬ್ಬ ವೈದ್ಯರ ಮೂಲಕ ಹಲ್ಲು ಶಸ್ತ್ರ ಚಿಕಿತ್ಸೆ ನಡೆಸಲು ಸೂಚನೆ ನೀಡಿದ್ದರು. ಅಂತೆಯೇ ಮಹಿಳೆಯು 2019ರ ಆ.2 ರಂದು ಸರ್ಜರಿಗೆ ಒಳಗಾಗಿದ್ದು, ಈ ವೇಳೆ ಮಹಿಳೆಗೆ 2 ಬಾರಿ ಸಾಮಾನ್ಯ ಅರವಳಿಕೆ ನೀಡಿ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ. ತದ ನಂತರ ಮಹಿಳೆಯು ನಿರಂತರವಾಗಿ ದವಡೆ ನೋವಿನಿಂದ ಬಳಲುತ್ತಿದ್ದು, ಇದಕ್ಕಾಗಿ ಸುಮಾರು 1 ತಿಂಗಳು ನೋವು ನಿವಾರಕ ಮಾತ್ರೆಯನ್ನು ಸೇವಿಸಿದ್ದಾರೆ.
ಇದಾಗಿಯೂ ಮಹಿಳೆ ನೋವು ನಿವಾರಣೆಯಾಗದ ಹಿನ್ನೆಲೆ ಯಲ್ಲಿ ಬೇರೆ ವೈದ್ಯರನ್ನು ಸಂಪರ್ಕಿಸಿದ್ದು, ಈ ವೇಳೆ ನಡೆಸಲಾದ ತಪಾಸಣೆಯಲ್ಲಿ ಶಸ್ತ್ರ ಚಿಕಿತ್ಸೆಯಲ್ಲಿ ಎಡವಟ್ಟಿನಿಂದಾಗಿ ಹಲ್ಲುಗಳ ಕೆಲವೊಂದು ಅಂಶ ಮೂಲಸ್ಥಳದಲ್ಲಿ ಉಳಿದುಕೊಂಡಿದೆ. ಇದರಿಂದಾಗಿ ಇನ್ನೊಂದು ಹಲ್ಲಿನ ನರಗಳಿಗೂ ಪೆಟ್ಟಾಗಿದೆ. ಇದರಿಂದಾಗಿ ನಿರಂತರವಾಗಿ ನರಳುವಂತಾಗಿದೆ ಎನ್ನುವುದು ತಿಳಿಯುತ್ತಿದಂತೆ ಮಹಿಳೆಯು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಮಹಿಳೆಯ ಆರೋಪವನ್ನು ನಿರಾಕರಿಸಿದ ದಂತ ವೈದ್ಯ, “ಸಂವೇದನಾ ಶೀಲ ಹಲ್ಲುಗಳ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆ ಶಸ್ತ್ರ ಚಿಕಿತ್ಸೆ ಉತ್ತಮ ರೀತಿಯಲ್ಲಿ ಆಗಿತ್ತು. ಆದರೆ ಮಹಿಳೆಯು ವೈದ್ಯರ ಆಹಾರ ಕ್ರಮ ಅನುಸರಿಸಿಲ್ಲ ಹಾಗೂ ಕಾಲಕಾಲಕ್ಕೆ ತಪಾಸಣೆಗೆ ಬಾರದ ಕಾರಣ ಸಮಸ್ಯೆ ಎದುರಿಸುವಂತಾಗಿದೆ’ ಎಂದು ವಾದ ಮಂಡಿಸಿದ್ದಾರೆ. ಆದರೆ ಮಂಡಿಸಿರುವ ವಾದಗಳಿಗೆ ಸರಿಯಾದ ದಾಖಲೆ ನೀಡಲು ದಂತ ವೈದ್ಯ ವಿಫಲರಾಗಿದ್ದಾರೆ. ಎರಡು ಕಡೆಯ ವಾದ ವಿವಾದ ಆಲಿಸಿದ ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶರು, ಮಹಿಳೆಯ ಶಸ್ತ್ರ ಚಿಕಿತ್ಸೆ ಮಾಡಿರುವ ವೈದ್ಯರು ಸಣ್ಣ ಹಲ್ಲಿನ ಚೂರು ದವಡೆಯಲ್ಲಿ ಉಳಿಸಿರುವುದರಿಂದ ಇನ್ನೊಂದು ಹಲ್ಲಿನ ನರಗಳಿಗೆ ಪೆಟ್ಟಾಗಿದೆ ಎನ್ನುವುದನ್ನು ಕರ್ನಾಟಕ ದಂತ ವೈದ್ಯರ ಮಂಡಳಿ ದೃಢಪಡಿಸಿದೆ.
ಈ ಹಿನ್ನೆಲೆ ಯಲ್ಲಿ ದವಡೆ ಹಲ್ಲಿನ ಶಸ್ತ್ರ ಚಿಕಿತ್ಸೆಗೆ ಪಡೆದುಕೊಂಡ 14,000 ರೂ., ದವಡೆ ಹಲ್ಲಿನ ಸಣ್ಣ ಸಣ್ಣ ತುಂಡುಗಳನ್ನು ಅಲ್ಲಿಯೇ ಉಳಿಸಿ, ಇನ್ನೊಂದು ಹಲ್ಲು ಹಾನಿಗೊಳಿಸಿರುವುದಕ್ಕೆ 1 ಲಕ್ಷ ರೂ. ದಂಡ ಪರಿಹಾರ, ಕಾನೂನು ವ್ಯಾಜ್ಯದ ಬಾಬ್ತು 5000 ರೂ. ಸೇರಿದಂತೆ ಒಟ್ಟು 1.19 ಲಕ್ಷ ರೂ ಜುಲೈ 6ರೊಳಗೆ ಪಾವತಿಸುವಂತೆ ತೀರ್ಪು ನೀಡಿದೆ.