ಶಿರಸಿ: ಫೆಬ್ರುವರಿ ತಿಂಗಳಿನಿಂದ ಶಾಲೆಗಳನ್ನು ಇಡೀ ದಿನ ನಡೆಸುವ ಕುರಿತು ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎಸ್. ಪ್ರಸನ್ನಕುಮಾರ ತಿಳಿಸಿದ್ದಾರೆ.
ಅವರು ನಗರದ ಲಯನ್ಸ್ ಭವನದಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಿಕ್ಷಕರ ಸಂಘದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕೋವಿಡ್ ಕಾರಣದಿಂದ ಶೈಕ್ಷಣಿಕ ಪ್ರಗತಿಯಲ್ಲಿ ವ್ಯತ್ಯಾಸ ಉಂಟಾಗಿದೆ. ಸದ್ಯ 6ನೇ ತರಗತಿಯಿಂದ ವಿದ್ಯಾಗಮ ನಡೆಯುತ್ತಿದೆ.
ಫೆಬ್ರುವರಿಯಿಂದ ನಿರಂತರ ಶಾಲೆ ಪ್ರಾರಂಭಿಸುವ ಕುರಿತು ಸರ್ಕಾರ ಆದೇಶಿಸಿದೆ. ಅದೇ ರೀತಿ ಫೆಬ್ರುವರಿ ಕೊನೇ ಮೇ ಅಂತ್ಯದ ತನಕವೂ ಶಾಲೆ ಮುಂದುವರಿಸುವ ಕುರಿತೂ ಸಮಾಲೋಚನೆ ನಡೆಸಲಾಗುತ್ತಿದೆ ಎಂದರು. ಜೂನ್‌ನಲ್ಲಿ ಎಸ್ಸೆಸ್ಸಲ್ಸಿ ಪರೀಕ್ಷೆ ನಡೆಯಲಿದ್ದು, ಜುಲೈನಿಂದ ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ ಎಂದರು.
ಇದನ್ನೂ ಓದಿ:ಗ್ರಾಮೀಣ ಭಾಗದ ಸಮಸ್ಯೆ ನಿವಾರಣೆಗೆ ಒತ್ತು ಕೊಡಿ
ಸಂಘಗಳು ಕೇವಲ ಬೇಡಿಕೆ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಕೊಡಬೇಕು ಎಂದ ಅವರು, ಅತಿಥಿ ಶಿಕ್ಷಕರ ಸಮಸ್ಯೆ ಕೂಡ ಶೀಘ್ರ ಬಗೆ ಹರಿಸಲಾಗುತ್ತದೆ ಎಂದರು. ಡಿಡಿಪಿಐ ದಿವಾಕರ ಶೆಟ್ಟಿ ಮಾತನಾಡಿ, ಇಲಾಖೆ ಹಾಗೂ ಶಿಕ್ಷಕರ ನಡುವೆ ಸಂಘಗಳು ಜೊತೆಯಾಗಿರಬೇಕು ಎಂದರು. ಸಂಘದ ಅಧ್ಯಕ್ಷ ನಾರಾಯಣ ನಾಯ್ಕ, ಬಿಇಓ ಸದಾನಂದ ಸ್ವಾಮಿ, ಎನ್.ಆರ್. ಹೆಗಡೆ, ಎಂ.ಎಸ್. ಹೆಗಡೆ, ನೌಕರರ ಸಂಘದ ಜಿಲ್ಲಾಧ್ಯಕ್ಷ ಶ್ರೀಕೃಷ್ಣ ಕಾಮಕರ್ ಇತರರು ಇದ್ದರು.