ಮಹಾಲಿಂಗಪುರ: ಕೊರೊನಾ ಸಂದರ್ಭದಲ್ಲಿ ಎರಡು ವರ್ಷಗಳಿಂದ ಶಾಲಾ ಮಕ್ಕಳ ಕಲಿಕೆಯಲ್ಲಿ ಹಿನ್ನಡೆಯಾಗಿತ್ತು. ಮಕ್ಕಳ ಕಲಿಕೆ ಉತ್ತಮ ಪಡಿಸಲು ಈ ವರ್ಷವನ್ನು ಕಲಿಕಾ ಚೇತರಿಕೆ ವರ್ಷವನ್ನಾಗಿ ಮಾಡಲಾಗಿದೆ ಎಂದು ಜಮಖಂಡಿ ಶಿಕ್ಷಣ ಸಂಯೋಜಕ ಶ್ರೀಶೈಲ ಬುರ್ಲಿ ಹೇಳಿದರು.
ಚಿಮ್ಮಡ ಸರಕಾರಿ ಹೆಣ್ಣು ಮಕ್ಕಳ ಮಾದರಿ ಶಾಲೆಯ ಸಭಾ ಭವನದಲ್ಲಿ ಶಿಕ್ಷಕರಿಗಾಗಿ ಕಲಿಕಾ ಚೇತರಿಕೆ ಪ್ರಗತಿ ಪರಿಶೀಲನಾ ಸಭೆಯನ್ನು ಶಿಕ್ಷಕರ ಹಿಮ್ಮಾಹಿತಿ ನಮೂನೆ ವಿತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ದಿನನಿತ್ಯ ಚಟುವಟಿಕೆಗಳಲ್ಲಿ ತೊಡುಗುವ ಮೂಲಕ ಕಲಿಕೆಯನ್ನು ಸಾ ಧಿಸಲು ನಿರಂತರ ಪ್ರಯತ್ನ ನಡೆದಿದೆ. ತರಗತಿ ಅಭಿವೃದ್ಧಿ ಮಾಡುವುದು ,ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡುವುದು ಆದ್ಯ ಕರ್ತವ್ಯವಾಗಿದೆ. ಶಿಕ್ಷಕರಿಗೆ ಬೋಧನೆಯಲ್ಲಿ ಬರುವ ತೊಂದರೆಗಳು ಸಮಸ್ಯೆ ನಿವಾರಿಸಿಕೊಳ್ಳಲು ಸಮಾಲೋಚನಾ ಸಭೆ ಸಹಕಾರಿಯಾಗಲಿದೆ ಎಂದರು.
ಚಿಮ್ಮಡ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಮಾದರಿ ಶಾಲೆಯ ಮುಖ್ಯಗುರುಗಳಾದ ಆರ್. ಎಸ್. ರೋಣದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಕಲಿಕೆಯಲ್ಲಿ ತೊಡಗಲು ಪೂರಕ ಚಟುವಟಿಕೆ ಹಮ್ಮಿಕೊಂಡು ಕಲಿಕಾ ಚೇತರಿಕೆ ಮಾಡಲಾಗುತ್ತಿದೆ. ಎಲ್ಲ ಸಾಮರ್ಥ್ಯಗಳನ್ನು ಕ್ರೋಢಿಕರಿಸಿ ಹೊಸ ರೂಪದಲ್ಲಿ ಬಂದಿರುವ ಕಲಿಕಾ ಚೇತರಿಕೆ ಅಲ್ಲಗಳೆಯಬಾರದು.
ಸಂದರ್ಭಕ್ಕೆ ಹೊಂದಿಕೊಂಡು ಶಿಕ್ಷಕರು ಕೆಲಸ ಮಾಡಬೇಕು. 4-5ನೇ ತರಗತಿ ಇಲಾಖೆಯ ಜೀವಾಳ. ನಾವು ಸಮುದಾಯಕ್ಕೆ ಉತ್ತರ ಕೊಡಬೇಕಿದೆ ಎಂದರು. ಶಿಕ್ಷಣ ಸಂಯೋಜಕ ಬಿ.ಎಂ. ಹಳೇಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಲಿಕಾ ಚೇತರಿಕೆ ಹಾಳೆಗಳು ಹಾಗೂ ಪಠ್ಯಪುಸ್ತಕಗಳನ್ನೂ ಬಳಸಿ ಶಿಕ್ಷಕರು ಪಾಠ ಬೋಧನೆ ಮಾಡಬೇಕು ಎಂದರು.
ರಬಕವಿ-ಬನಹಟ್ಟಿ ತಾಲೂಕು ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ, ಬನಹಟ್ಟಿ ಶಿಕ್ಷಕರ ಸೊಸೈಟಿ ಉಪಾಧ್ಯಕ್ಷ ವಿಜಯಕುಮಾರ ಹಲಕುರ್ಕಿ, ರಾಜ್ಯ ಸರಕಾರಿ ನೌಕರರ ಸಂಘದ ರಬಕವಿ-ಬನಹಟ್ಟಿ ತಾಲೂಕು ಘಟಕದ ನಾಮನಿರ್ದೇಶಿತ ಸದಸ್ಯ ಆರ್.ವ್ಹಿ.ಲಮಾಣಿ, ಎಸ್.ಎ. ಬಿರಾದಾರ, ಪಿ.ಕೆ. ಹುದ್ದಾರ, ಎಂ.ಐ. ಚಿತ್ರಬಾನುಕೋಟೆ, ಬಿ.ಎಸ್.ಹಲಗಿ ಇನ್ನಿತರರು ಇದ್ದರು.
ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಶೈಲ ಡವಳಟ್ಟಿ, ಶ್ರೀಶೈಲ ಯಡವನ್ನವರ, ವೀರಭದ್ರಪ್ಪ ಎನ್.ಎ., ರಾಘವೇಂದ್ರ ತೇಲಿ, ಸುಜಾತ ಜಾಧವ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದರು. ಚಿಮ್ಮಡ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ದಾಕ್ಷಾಯಿಣಿ ಮಂಡಿ ಸ್ವಾಗತಿಸಿದರು. ರಬಕವಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಎ.ಕೊಕಟನೂರ ವಂದಿಸಿದರು.