ಹಂಪನಕಟ್ಟೆ: ಹಂಪನಕಟ್ಟೆ ಹಳೆ ಬಸ್ ನಿಲ್ದಾಣದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾದ “ಮಲ್ಟಿಲೆವೆಲ್ ಕಾರು ಪಾರ್ಕಿಂಗ್’ ಕಾಮಗಾರಿ ನಿಧಾನವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ವ್ಯಾಪಾರಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ.
6 ತಿಂಗಳುಗಳ ಹಿಂದೆ ಕಾಮಗಾರಿ ಆರಂಭಿಸಲಾಗಿತ್ತಾದರೂ ಕೇವಲ ಆರಂಭಿಕ ತಯಾರಿ ಮಾತ್ರ ಇಲ್ಲಿಯವರೆಗೆ ಆಗಿದೆ. ಆದರೆ, ಕಾಮಗಾರಿಯ ನೆಪದಿಂದ ಬಸ್ ನಿಲ್ದಾಣ ಪೂರ್ಣ ತಗಡು ಶೀಟ್ ಕಟ್ಟಿ ನಿರ್ಬಂಧ ವಿಧಿಸಲಾಗಿದೆ. ಇದರಿಂದಾಗಿ ಸ್ಥಳೀಯ ವ್ಯಾಪಾರಕ್ಕೆ ಸಮಸ್ಯೆ ಆಗಿದೆ.
ಕಾಮಗಾರಿ ಮುಗಿದ ಮೇಲೆ ಎಲ್ಲವೂ ಸರಿಯಾಗಬಹುದು ಎಂದು ಸ್ಥಳೀಯರು ಅಂದುಕೊಂಡಿದ್ದರು. ಆದರೆ ಹಲವು ತಿಂಗಳಿನಿಂದ ಇಲ್ಲಿ ನಿರೀಕ್ಷಿತ ಕಾಮಗಾರಿಯೇ ಆರಂಭವಾಗದೆ ವ್ಯಾಪಾರಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿ ಪೂರ್ಣ ಕೆಲಸ ಪ್ರಾರಂಭಿಸದ ಕಾರಣದಿಂದ ಸದ್ಯ ಪಾರ್ಕಿಂಗ್ ವ್ಯವಸ್ಥೆಯೇ ಅಸ್ತವ್ಯಸ್ಥವಾಗಿದೆ.
ಸ್ಥಳೀಯ ವ್ಯಾಪಾರಕ್ಕೆ ಪೆಟ್ಟು
ಇಲ್ಲಿ ಸ್ಥಳೀಯ ವ್ಯಾಪಾರಕ್ಕೆ ಬಹುದೊಡ್ಡ ಪೆಟ್ಟು ಬಿದ್ದಿದೆ. ಇಲ್ಲಿರುವ ಹೊಟೇಲ್, ಲಾಡ್ಜ್, ಅಂಗಡಿ ಸಹಿತ ವಿವಿಧ ವ್ಯಾಪಾರಸ್ಥರಿಗೆ ಗ್ರಾಹಕರ ಕೊರತೆ ಎದುರಾಗಿದೆ. ಕಾಮಗಾರಿ ಕಾರಣದಿಂದ ಕಾರು, ಬೈಕ್ ನಿಲುಗಡೆಗೆ ಸೂಕ್ತ ಜಾಗವಿಲ್ಲದೆ ಗ್ರಾಹಕರು ಬರುತ್ತಿಲ್ಲ. ಇರುವ ಕೊಂಚ ಜಾಗದಲ್ಲಿ ಅಡ್ಡಾದಿಡ್ಡಿ ಕೆಲವರು ವಾಹನವಿಟ್ಟು ಸಮಸ್ಯೆ ಸೃಷ್ಟಿಸುತ್ತಿದ್ದಾರೆ ಎಂಬುದು ಸ್ಥಳೀಯರ ಆಕ್ಷೇಪ.
ಪಾದಚಾರಿಗಳ ಗೋಳು ಕೇಳುವವರೇ ಇಲ್ಲ
ಈ ಮಧ್ಯೆ, ಹಳೆ ಬಸ್ ಸ್ಟ್ಯಾಂಡ್‌ನ ಒಳಗೆ ಈಗ ಪಾದಚಾರಿಗಳ ಗೋಳು ಕೇಳುವವರೇ ಇಲ್ಲ. ಸೀಮಿತ ಜಾಗದಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಕಾರಣದಿಂದ ಪಾದಚಾರಿಗಳು ಹರಸಾಹಸ ಮಾಡಬೇಕಾದ ಪರಿಸ್ಥಿತಿ ಇದೆ.
ಬೀದಿ ದೀಪವೂ ಮಾಯ!
ಹಂಪನಕಟ್ಟೆ ಹಳೆ ಬಸ್ ನಿಲ್ದಾಣದ ಜಾಗದಲ್ಲಿ ಮೊದಲು ಬೀದಿ ದೀಪದ ವ್ಯವಸ್ಥೆ ಇತ್ತು. ಆದರೆ ಇಲ್ಲಿ ಕಾಮಗಾರಿ ನಡೆಸಿದ ಅನಂತರ ಬೀದಿದೀಪ ಕೂಡ ಮಾಯವಾಗಿದೆ. ರಾತ್ರಿ ಸಮಯದಲ್ಲಿ ಇಲ್ಲಿ ನಡೆದುಕೊಂಡು ಹೋಗುವುದೇ ಕಷ್ಟವಾಗಿದೆ. ಸ್ಥಳೀಯರು ಇದರಿಂದಾಗಿ ಸಮಸ್ಯೆ ಅನುಭವಿಸುತ್ತಿದ್ದಾರೆ.