ಕೈಕಂಬ: ಎಡಪದವು- ಕುಪ್ಪೆಪದವು – ಮುತ್ತೂರು ಮೂಲಕ ಬಂಟ್ವಾಳ ತಾಲೂಕು ಸಂಪರ್ಕಿಸುವ 9.62 ಕೋ.ರೂ. ಅನುದಾನ ದಲ್ಲಿ ನಡೆಯುತ್ತಿರುವ ರಾಜ್ಯ ಹೆದ್ದಾರಿಯ 4ನೇ ಹಂತದ ಅಭಿವೃದ್ಧಿ ಕಾಮಗಾರಿಯು ಆಮೆಗತಿಯಲ್ಲಿ ಸಾಗಿದೆ. ಚರಂಡಿ, ರಸ್ತೆ ಕಾಮಗಾರಿಗಳು ಅರ್ಧದಲ್ಲಿಯೇ ನಿಂತಿವೆ.
2020ರ ಆ. 24ರಂದು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನಡೆದಿದ್ದು, ಈ ಕಾಮಗಾರಿ ಅಮೆಗತಿಯಲ್ಲಿ ಸಾಗುತ್ತಿರುವುದರಿಂದ ಇದು ನಿತ್ಯ ಎದುರಿಸುವ ಸಮಸ್ಯೆಗೆ ಕಾರಣವಾಗಿದೆ. ಮಳೆ ಬಂದರೆ ರಸ್ತೆಯಲ್ಲಿಯೇ ನೀರು ನಿಲ್ಲುವ ಸಾಧ್ಯತೆ ಹೆಚ್ಚಿದೆ.
ಎಡಪದವಿನಿಂದ ಸುಮಾರು 3 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಯಾಗಿ ಚರಂಡಿ ನಿರ್ಮಿಸಲಾಗಿದೆ. ಅದನ್ನು ಕೂಡ ಬಿಟ್ಟು ಬಿಟ್ಟು, ಮಾಡಲಾಗಿದೆ. ಕೊಂದೋಡಿಯಲ್ಲಿ ಚರಂಡಿ ಮೇಲು ಹಾಗೂ ರಸ್ತೆ ಕೆಳಗೆಡೆ ಇದ್ದು ಮಳೆ ಬಂದಲ್ಲಿ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯಲ್ಲಿಯೇ ನಿಲ್ಲುವ ಸಾಧ್ಯತೆ ಹೆಚ್ಚು. ಪದ್ರೆಂಗಿಯಲ್ಲಿಯೂ ರಸ್ತೆ ಡಾಮರು ಕಾಮಗಾರಿ ಅರ್ಧದಲ್ಲಿಯೇ ನಿಲ್ಲಿಸಲಾಗಿದೆ. ಮಾರ್ಚ್‌ನಿಂದ ರಸ್ತೆ ಕಾಮಗಾರಿಗಳು ಅರಂಭಗೊಂಡಿದ್ದು, ಸುಮಾರು 15 ದಿನಗಳ ಕಾಲ ರಸ್ತೆ ಕಾಮಗಾರಿ ನಡೆದಿತ್ತು. ಆದರೆ ಈಗ ಒಂದು ವಾರದಿಂದ ಯಾವುದೇ ಕಾಮಗಾರಿಗಳು ನಡೆದಿಲ್ಲ. ಮಳೆ ಬಂದರೆ ರಸ್ತೆಗಿಂತ ಎತ್ತರದಲ್ಲಿರುವ ಚರಂಡಿಯಲ್ಲಿ ನೀರು ಹರಿಯದೇ ರಸ್ತೆಯಲ್ಲಿಯೇ ನಿಲ್ಲಲಿದೆ. ಮಳೆ ಬರುವ ಮುಂಚೆ ಈ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಸಿಬೇಕಾಗಿರುವುದು ಅಗತ್ಯವಾಗಿದೆ. ಚರಂಡಿಯಲ್ಲಿ ರಸ್ತೆಯ ನೀರು ಹರಿಯುವಂತೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಮಳೆಗಾಲದ ಮುನ್ನ ಕಾಮಗಾರಿ ಪೂರ್ಣ
ಎಡಪದವು -ಕುಪ್ಪೆಪದವು -ಮುತ್ತೂರು -ಬಂಟ್ವಾಳ ತಾಲೂಕು ಸಂಪರ್ಕಿಸುವ ರಾಜ್ಯ ಹೆದ್ದಾರಿ ಕಾಮಗಾರಿಗಳು ಕೆಲವೆಡೆ ನೀರು ಪೈಪ್ ಹೊಡೆದ ಕಾರಣ ಕಾಮಗಾರಿಯನ್ನು ಒಂದೆರೆಡು ದಿನ ನಿಲ್ಲಿಸಲಾಗಿತ್ತು. ನೀರು ಪೈಪ್‌ಗ್ಳಿದ್ದ ಕಾರಣ ಚರಂಡಿ ಕಾಮಗಾರಿಗಳಿಗೂ ಕೂಡ ಸ್ವಲ್ಪ ತೊಂದರೆಯಾಗಿತ್ತು. ಪದ್ರೆಂಗಿಯಲ್ಲಿ ಜೆಸಿಬಿ ಮೂಲಕ ಕಾಮಗಾರಿಗಳು ನಡೆಯುತ್ತಿದೆ. ರಸ್ತೆಯ ಬದಿಗಳಲ್ಲಿ ಜಲ್ಲಿಕಲ್ಲು ಹಾಕಲಾಗುತ್ತಿದೆ. ರಸ್ತೆ ಕಾಮಗಾರಿಯನ್ನು ಮಳೆಗಾಲ ಮುಂಚೆ ಶೀಘ್ರ ಮುಗಿಸುವ ಪ್ರಯತ್ನ ನಮ್ಮದಾಗಿದೆ ಎಂದು ಪಿಬಿಐ ಕನ್‌ಸ್ಟ್ರಕ್ಷನ್‌ನ ಎಂಜಿನಿಯರ್ ವೇಣುಕುಮಾರ್ ತಿಳಿಸಿದ್ದಾರೆ
ವಾರದೊಳಗೆ ಮೊದಲ ಹಂತದ ಕಾಮಗಾರಿ ಪೂರ್ಣ
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಈ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಎಡಪದವಿನಿಂದ 2 ಕಿ.ಮೀ. ತನಕ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಒಂದು ವಾರದೊಳಗೆ ಮುಗಿಯಲಿದೆ. ಅದು ಪೂರ್ಣಗೊಂಡ ಅನಂತರ ಮುಂದಿನ ಹಂತದ ಕಾಮಗಾರಿ ಆರಂಭಿಸಲಾಗುತ್ತದೆ.
–ಸಂಜೀವ ಕುಮಾರ್ ನಾಯಕ್, ಪಿಡಬ್ಲ್ಯುಡಿ ಎಂಜಿನಿಯರ್