Advertisement

ವ್ಯಸನ ಮುಕ್ತ ಸಮಾಜದಿಂದ ರಾಮರಾಜ್ಯ ನಿರ್ಮಾಣ: ಅಂಗಾರ

10:46 PM Oct 02, 2019 | mahesh |

ಸುಳ್ಯ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ತಾಲೂಕು ಧ.ಗ್ರಾ.ಯೋ.ಬಿ.ಸಿ. ಟ್ರಸ್ಟ್‌, ನವಜೀವನ ಸಮಿತಿಗಳು, ಪ್ರಗತಿ ಬಂಧು-ಸ್ವಸಹಾಯ ಸಂಘಗಳ ಒಕ್ಕೂಟ ಇದರ ಸಹಯೋಗದೊಂದಿಗೆ 150ನೇ ಗಾಂಧಿಜಯಂತಿ ಪ್ರಯುಕ್ತ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧೀ ಸ್ಮೃತಿ ಪ್ರಯುಕ್ತ ವ್ಯಸನಮುಕ್ತರ ಸಮಾವೇಶ ಬುಧವಾರ ಚೆನ್ನಕೇಶವ ದೇವಾಲಯದ ಮುಂಭಾಗ ನಡೆಯಿತು.

Advertisement

ಸಮಾರಂಭ ಉದ್ಘಾಟಿಸಿದ ಶಾಸಕ ಎಸ್‌.ಅಂಗಾರ ಮಾತನಾಡಿ, ವ್ಯಸನ ಮುಕ್ತ ಸಮಾಜದ ನಿರ್ಮಾಣ ಅತ್ಯಂತ ಆವಶ್ಯಕ. ಗಾಂಧೀಜಿ ಅವರು ಈ ಸಂದೇಶ ಕೊಟ್ಟು ಶತಮಾನ ಸಮೀಪಿಸಿದರೂ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ನಮ್ಮ ಆಡಳಿತ ವ್ಯವಸ್ಥೆ ಸಫಲವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಅಧಿಕಾರದ ಲಾಲಸೆ. ಆದರೆ ಧರ್ಮಸ್ಥಳದ ಧರ್ಮಾಧಿಕಾರಿ ಅವರ ನೇತೃತ್ವದಲ್ಲಿ ಜನಜಾಗೃತಿ ವೇದಿಕೆ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಅವಿರತ ಶ್ರಮಿಸುತಿದ್ದು, ಓರ್ವ ಜನಪ್ರತಿನಿಧಿಯಾಗಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪೂರ್ಣ ಬೆಂಬಲ ನೀಡುತ್ತೇನೆ. ಜತೆಗೆ ಪಾನಮುಕ್ತ ರಾಜ್ಯಕ್ಕಾಗಿ ಮುಖ್ಯಮಂತ್ರಿ ಗಮನಕ್ಕೆ ತರುತ್ತೇನೆ ಎಂದರು.

ಅರಂಬೂರು ಪರಿವಾರಕಾನ ಮದರ್‌ ತೆರಸಾ ಚರ್ಚ್‌ ಧರ್ಮಗುರು ಫಾ| ಜೋಸೆಫ್‌ ಪುದಕುಯಿಲ್‌ ಮಾತನಾಡಿ, ದುಶ್ಚಟ ಮುಕ್ತ ಎನ್ನುವುದು ಭಾಷಣದಿಂದ ಸಾಧ್ಯವಿಲ್ಲ. ನಮ್ಮನ್ನು ನಾವು ತಿದ್ದುವ ಮೂಲಕ ನಮ್ಮ ಬದುಕು ಎಲ್ಲರಿಗೆ ಪ್ರೇರಣೆ ಆಗುವ ತರಹ ಮುನ್ನಡೆಯಬೇಕು
ಎಂದು ಹೇಳಿದರು.

ಸೌಹಾರ್ದ ಸಮಾಜ ಸ್ಥಾಪಿಸೋಣ
ನೆಕ್ಕಿಲ ತಾಜುಲ್‌ ಹುದಾ ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಕೆ.ವಿ. ನೂರುದ್ದೀನ್‌ ಝಹರಿ ಮಾತನಾಡಿ, ದುಶ್ಚಟಕ್ಕೆ ದಾಸರಾಗುವುದರಿಂದ ಕುಟುಂಬ, ದೇಶ ವ್ಯವಸ್ಥೆಗೆ ಮಾರಕ. ಹಾಗಾಗಿ ಈ ಚಟಗಳಿಂದ ದೂರವಾಗಬೇಕು. ಈ ನಿಟ್ಟಿನಲ್ಲಿ ಡಾ| ವೀರೇಂದ್ರ ಹೆಗ್ಗಡೆ ಅವರು ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ಪಣ ತೊಟ್ಟಿದ್ದು, ಅದಕ್ಕೆ ನಾವೆಲ್ಲರೂ ಕೈ ಜೋಡಿಸಬೇಕು. ಈ ಮೂಲಕ ಸಾಮರಸ್ಯ, ಶಾಂತಿಯ, ಸೌಹಾರ್ದತೆ ಸಮಾಜದ ಸ್ಥಾಪನೆಗೆ ಕಾರಣಕರ್ತರಾಗಬೇಕು ಎಂದರು.

ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ವಿಶ್ವನಾಥ ರೈ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎನ್‌.ಎ. ರಾಮಚಂದ್ರ, ಧ.ಗ್ರಾ.ಯೋ.ಬಿ.ಸಿ. ಟ್ರಸ್ಟ್‌ ಜಿಲ್ಲಾ ನಿರ್ದೇಶಕ ಸತೀಶ್‌ ಶೆಟ್ಟಿ, ಸುಳ್ಯ ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಹರಪ್ರಸಾದ್‌ ತುದಿಯಡ್ಕ, ಧ.ಗ್ರಾ.ಯೋ.ಬಿ.ಸಿ.ಟ್ರಸ್ಟ್‌ ಕೇಂದ್ರ ಒಕ್ಕೂಟದ ಅಧ್ಯಕ್ಷ ಜನಾರ್ದನ ಉಬರಡ್ಕ, ನಾರಾಯಣ ಕೇಕಡ್ಕ ಮತ್ತಿತರರು ಉಪಸ್ಥಿತರಿದ್ದರು.

Advertisement

ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕೊಲ್ಲಮೊಗ್ರು ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಸಿ. ವಸಂತ ಅವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿಶ್ವನಾಥ ಅಮೂcರು ನಿರ್ಣಯ ವಾಚಿಸಿದರು. ಮದ್ಯವರ್ಜನ ಶಿಬಿರಾರ್ಥಿ ಕುಶಾಲಪ್ಪ ಅವರು ಅನಿಸಿಕೆ ವ್ಯಕ್ತಪಡಿಸಿದರು. ಯೋಜನಾಧಿಕಾರಿ ಸಂತೋಷ್‌ ಕುಮಾರ್‌ ರೈ ಸ್ವಾಗತಿಸಿ, ಅಚ್ಯುತ ಅಟೂರು ಮತ್ತು ಬೇಬಿ ವಿದ್ಯಾ ನಿರೂಪಿಸಿದರು.

ನೆಮ್ಮದಿ ಮುಖ್ಯ
ವೇದಮೂರ್ತಿ ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್‌ ಮಾತನಾಡಿ, ಜೀವನದಲ್ಲಿ ಹಣ ಮುಖ್ಯ ಅಲ್ಲ, ನೆಮ್ಮದಿ ಮುಖ್ಯ. ಅದು ದುಶ್ಚಟ ಮುಕ್ತ ಜೀವನದಿಂದ ಸಾಧ್ಯವಿದೆ. ವ್ಯವಸನ ಮುಕ್ತರಾಗಿ ಸುಂದರ ಸಮಾಜದ ನಿರ್ಮಾಣಕ್ಕೆ ನಾವು ಪಣತೊಡಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next