Advertisement
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರಾಹಿ ನದಿಗೆ ಅಡ್ಡಲಾಗಿ ಶಂಕರನಾರಾಯಣ ಗ್ರಾಮದ ಸೌಡದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಉಡುಪಿ ಲೋಕೋಪಯೋಗಿ ಇಲಾಖೆಯಿಂದ ಮೇ 23ಕ್ಕೆ ಆನ್ ಲೈನ್ ಮೂಲಕ ಟೆಂಡರ್ ಕರೆಯಲಾಗಿದೆ. ಟೆಂಡರ್‌ನಲ್ಲಿ ಭಾಗವಹಿಸಲು ಒಂದು ತಿಂಗಳ ಕಾಲಾವಕಾಶವಿದ್ದು, ಜೂ.23ರಂದು ಟೆಂಡರ್ ಪ್ರಕ್ರಿಯೆ ಅಂತ್ಯವಾಗಲಿದೆ.
Related Articles
Advertisement
ಕಳೆದ ಚುನಾವಣೆ ಸಂದರ್ಭದಲ್ಲಿ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟರು ಸೌಡ – ಶಂಕರನಾರಾಯಣ ಸೇತುವೆ ಮಾಡಿಕೊಡುವ ಭರವಸೆ ನೀಡಿದ್ದು, ಅದರಂತೆ ಸೇತುವೆಗೆ ಅನುದಾನ ಮಂಜೂರಾಗಿ, ಟೆಂಡರ್ ಕರೆಯಲಾಗಿದೆ. ಕೊಟ್ಟ ಮಾತು ಉಳಿಸಿಕೊಂಡ ಶಾಸಕರಿಗೆ ಈ ಭಾಗದ ಜನರು ಕೃತಜ್ಞತೆ ಸಲ್ಲಿಸಿದ್ದಾರೆ.
10 ಕಿ.ಮೀ. ಹತ್ತಿರ
ಸೌಡ ಸೇತುವೆಯಾದರೆ ಪ್ರಮುಖವಾಗಿ ಉಪ ನೋಂದಣಿ ಕಚೇರಿ ಸಹಿತ ಹತ್ತು ಹಲವು ಸರಕಾರಿ ಕಚೇರಿಗಳನ್ನು ಹೊಂದಿರುವ ಶಂಕರನಾರಾಯಣಕ್ಕೆ ಬರಲು ಹಾರ್ದಳ್ಳಿ-ಮಂಡಳ್ಳಿ, ಮೊಳಹಳ್ಳಿ, ಹೊಂಬಾಡಿ – ಮಂಡಾಡಿ, ಯಡಾಡಿ – ಮತ್ಯಾಡಿ, ಕೊರ್ಗಿ, ಜಪ್ತಿ, ಹೆಸ್ಕಾತ್ತೂರು ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಇನ್ನು ಸೌಡ ಭಾಗದ ಜನರು ಕುಂದಾಪುರ ಹಾಗೂ ಉಡುಪಿಗೆ ಬರಲು 10ರಿಂದ 12 ಕಿ.ಮೀ. ಹತ್ತಿರವಾಗಲಿದೆ. ಮಚ್ಚಟ್ಟು, ಸಿದ್ದಾಪುರ, ಹೊಸಂಗಡಿ, ಉಳ್ಳೂರು-74 ಭಾಗದ ಜನರಿಗೆ ಮಣಿಪಾಲ, ಉಡುಪಿಗೆ ತೆರಳಲು ಸಹ ಪ್ರಯೋಜನವಾಗಲಿದೆ.
ಭರವಸೆ ಈಡೇರಿಸಿದ್ದೇನೆ
ಚುನಾವಣೆ ಸಂದರ್ಭದಲ್ಲಿ ಗೆದ್ದರೆ ನಾನು ಅಲ್ಲಿನ ಜನರಿಗೆ ಸೇತುವೆ ಮಾಡಿಕೊಡುವ ಭರವಸೆ ನೀಡಿದ್ದೆ. ಅದರಂತೆ ಈಗ ಅನುದಾನ ಮಂಜೂರಾಗಿ, ಟೆಂಡರ್‌ಗೆ ಹೋಗಿದೆ. ಅದೆಲ್ಲ ಪ್ರಕ್ರಿಯೆ ಮುಗಿದು, ಆದಷ್ಟು ಬೇಗ ಕಾಮಗಾರಿಗೆ ಚಾಲನೆ ಸಿಗಲಿದೆ. ಆಗ ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇನೆ. – ಬಿ.ಎಂ. ಸುಕುಮಾರ್ ಶೆಟ್ಟಿ, ಶಾಸಕರು
ಟೆಂಡರ್ ಪ್ರಕ್ರಿಯೆ
ಮೇ 23ಕ್ಕೆ ಟೆಂಡರ್ ಕರೆಯಲಾಗಿದೆ. ಟೆಂಡರ್‌ನಲ್ಲಿ ಭಾಗವಹಿಸಲು ಗುತ್ತಿಗೆದಾರರಿಗೆ ಒಂದು ತಿಂಗಳ ಕಾಲಾವಕಾಶವಿದೆ. ಟೆಂಡರ್ ಕಾರ್ಯ ಮುಗಿದ ಬಳಿಕ ಮುಂದಿನ ಪ್ರಕ್ರಿಯೆ ನಡೆಯಲಿದೆ. – ದುರ್ಗಾದಾಸ್, ಸಹಾಯಕ ಕಾರ್ಯ ಪಾಲಕ ಎಂಜಿನಿಯರ್, ಕುಂದಾಪುರ ಲೋಕೋಪಯೋಗಿ ಇಲಾಖೆ
ಸುದಿನ ವರದಿ
ಸೌಡ- ಶಂಕರ ನಾರಾಯಣ ಸೇತುವೆ ಬೇಡಿಕೆ ಬಗ್ಗೆ, ಒಮ್ಮೆ ಘೋಷಣೆಯಾಗಿ ಬಳಿಕ ನನೆಗುದಿಗೆ ಬಿದ್ದ ಕುರಿತು, ವಿಳಂಬದ ಬಗ್ಗೆಯೂ ‘ಉದಯವಾಣಿ ಸುದಿನ’ವು ನಿರಂತರ ವಿಶೇಷ ವರದಿಗಳನ್ನು ಪ್ರಕಟಿಸಿ, ಗಮನಸೆಳೆದಿತ್ತು.