Advertisement

Ram Mandir ನಿರ್ಮಾಣದಿಂದ ಚುನಾವಣೆ ಸನ್ನಿವೇಶ ಬದಲಾಗಲ್ಲ: ಬೇಳೂರು

08:49 PM Jan 03, 2024 | Shreeram Nayak |

ಶಿವಮೊಗ್ಗ: ರಾಮ ಮಂದಿರ ನಿರ್ಮಾಣಕ್ಕೆ ನಾವ್ಯಾರೂ ವಿರೋಧ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಅವರನ್ನು ಕರೆದಿಲ್ಲ. ಅವರು ಕರೆದಿಲ್ಲ ಎಂದರೆ ಬೇಡ. ನಾವು ಎಲ್ಲಿರುತ್ತೇವೆಯೋ ಅಲ್ಲಿಂದಲೇ “ಓ ರಾಮ ಕಾಪಾಡಪ್ಪ’ ಅಂತ ಕೈ ಮುಗಿತೀವಿ. ಅದರಲ್ಲಿ ತಪ್ಪೇನಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ಉದ್ಘಾಟನೆಗೊಳ್ಳುತ್ತಿರುವುದು ಸಂತೋಷ. ನಾವು ಕೂಡ ರಾಮನ ಭಕ್ತರೇ. ಅವರು ಚುನಾವಣೆ ಸಮಯದಲ್ಲಿ ಮನೆ- ಮನೆಗೆ ಮಂತ್ರಾಕ್ಷತೆ ಕೊಡುತ್ತಾರೆ ಕೊಡಲಿ. ನೀವು ದೇವರನ್ನು, ದೇವಸ್ಥಾನವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುವ ಬದಲು ಇಲ್ಲಿನ ಶಿಕ್ಷಣದ ಬಗ್ಗೆ ಗಮನ ಕೊಡಿ. ಎಷ್ಟು ಶಿಕ್ಷಣ ಸಂಸ್ಥೆಗಳು ಹಾಳಾಗಿದೆ. ರಾಮ ಮಂದಿರ ನಿರ್ಮಾಣ ವಿಚಾರದಿಂದ ಚುನಾವಣೆಯಲ್ಲಿ ಯಾವ ವಾತಾವರಣವೂ ಬದಲಾಗುವುದಿಲ್ಲ ಎಂದರು.

ನಿಗಮ ಮಂಡಳಿ ಕುರಿತು ಪ್ರತಿಕ್ರಿಯಿಸಿದ ಅವರು, ನಿಗಮ ಮಂಡಳಿಗಳಿಗೆ ಶಾಸಕರು, ಮುಖಂಡರು, ಕಾರ್ಯಕರ್ತರಿಗೆ ಕೊಡುವ ಬಗ್ಗೆ ತೀರ್ಮಾನ ಆಗಿದೆ. ಕಾರ್ಯಕರ್ತರು, ಮುಖಂಡರು, ಶಾಸಕರು ಎಲ್ಲರಿಗೂ ಕೊಡಬೇಕು. ಸಿಎಂ, ಡಿಸಿಎಂ ದೆಹಲಿಗೆ ಹೋಗಿದ್ದಾರೆ. ಇನ್ನು ಎರಡು ಮೂರು ಬಾರಿ ದೆಹಲಿಗೆ ಹೋಗಿ ಬಂದರೆ ನೇಮಕ ಆಗಬಹುದು. ನಾನು ನನಗೆ ನಿಗಮ ಮಂಡಳಿ ಕೊಡಿ ಅಂತ ಕೇಳಿಲ್ಲ. ಹಿರಿಯ ಶಾಸಕರಿಗೆ ಕೊಡಿ ಎಂದು ಹೇಳಿದ್ದೇನೆ ಎಂದರು.

ಹುಬ್ಬಳ್ಳಿ ಕರಸೇವಕನ ಬಂಧನ ಕುರಿತು ಬಿಜೆಪಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿ ವಿಪಕ್ಷವಾಗಿ ಪ್ರತಿಭಟನೆ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ಅವರು ಎಲ್ಲದಕ್ಕೂ ಪ್ರತಿಭಟನೆ ಮಾಡ್ತಾರೆ. ನಮ್ಮ ಕಾಲದಲ್ಲಿ ಗೂಂಡಾ ರಾಜ್ಯ ಆಗಿತ್ತಾ, ಯಾರ ಕಾಲದಲ್ಲಿ ಗೂಂಡಾ ರಾಜ್ಯ ಆಗಿತ್ತು. ಗೂಂಡಾ ರಾಜ್ಯ ಆಗಿದ್ದಕ್ಕೇ ಜನ ಬಿಜೆಪಿಯನ್ನು 65 ಕ್ಕೆ ತಂದು ಕೂರಿಸಿದ್ದಾರೆ ಎಂದರು.

ಮಧು ಬಂಗಾರಪ್ಪ ಚೆಕ್‌ ಬೌನ್ಸ್‌ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿ, ಕೋರ್ಟ್‌ ನಲ್ಲಿ ತೀರ್ಮಾನ ಆದಾಗ ಆಪಾದನೆ ಬರುತ್ತವೆ. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ನಾನು ಏನು ಮಾತನಾಡಲ್ಲ ಎಂದರು.

Advertisement

ಕೋವಿಡ್‌ ಸಮಯದಲ್ಲಿ 40 ಸಾವಿರ ಕೋಟಿ ರೂ. ಹಗರಣ ಆಗಿದೆ ಅಂತ ಯತ್ನಾಳ್‌ ಹೇಳಿದ್ದಾರೆ. ಅದರ ಬಗ್ಗೆ ತನಿಖೆ ನಡೆಸಿ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ವಿಜಯೇಂದ್ರ ಹೆಸರು ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಸಲಿ ಎಂದರು.

ನಾನೂ ಆಕಾಂಕ್ಷಿ
ಲೋಕಸಭೆ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, ಲೋಕಸಭೆ ಸ್ಥಾನಕ್ಕೆ ಸ್ಪರ್ಧಿಸಲು ಹಲವರು ಆಕಾಂಕ್ಷಿಗಳು ಇದ್ದಾರೆ. ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಸಂಗಮೇಶ್ವರ ಹಾಗೂ ಬೇಳೂರು ಗೋಪಾಲಕೃಷ್ಣ ಮೂವರು ಕುಳಿತು ಚರ್ಚಿಸುವಂತೆ ಹೇಳಿದ್ದಾರೆ. ಮೂರು ಜನ ಕುಳಿತು ಚರ್ಚೆ ಮಾಡಿ ಪಟ್ಟಿ ಕೊಡಿ ಅಂದಿದ್ದಾರೆ. ನಾನು ಕೂಡ ಆಕಾಂಕ್ಷಿಯೇ. ಹೆಸರು ಕೊಟ್ಟ ಮೇಲೆ ಸರ್ವೇ ಮಾಡಿ ಸೂಕ್ತ ಅಭ್ಯರ್ಥಿಗೆ ಕೊಡುತ್ತೆವೆ ಎಂದು ಹೈಕಮಾಂಡ್‌ ಹೇಳಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next