ಕೊರಟಗೆರೆ: ದೇಶದಲ್ಲೇ ಅತಿ ಹೆಚ್ಚು ಪೊಲೀಸ್ ಠಾಣೆ ಮತ್ತು ವಸತಿ ಗೃಹ ನಿರ್ಮಾಣ ಮಾಡುತ್ತಿರುವ ರಾಜ್ಯ ಕರ್ನಾಟಕ ಆಗಿದ್ದು, ಮುಂದಿನ 5 ವರ್ಷಗಳಲ್ಲಿ ಶೇ.75 ರಷ್ಟು ವಸತಿಗೃಹಗಳ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ಗೃಹ ಸಚಿವ ಬಸವರಾಜು ಬೊಮ್ಮಾಯಿ ಹೇಳಿದರು.
ಪಟ್ಟಣದಲ್ಲಿ 1.5 ಕೋಟಿ ರೂ. ವೆಚ್ಚದ ಸುಸರ್ಜಿತ ಜನಸ್ನೇಹಿ ಪೊಲೀಸ್ ಠಾಣೆ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರಕಾರದ ಪ್ರಸ್ತುತ ಆಯವ್ಯಯದಲ್ಲಿ ಪೊಲೀಸ್ ಇಲಾಖೆಯ ಗೃಹ ನಿರ್ಮಾಣಕ್ಕೆ 5 ಸಾವಿರ ಕೋಟಿ ಮೀಸಲಿಡಲಾಗಿದೆ. 2020ರಿಂದ 2025ರವರೆಗೆ ಶೇ.75ರಷ್ಟು ಗೃಹ ನಿರ್ಮಾಣ ದೂರದೃಷ್ಟಿ ಹೊಂದಲಾಗಿದೆ ಎಂದರು.
ಪೊಲೀಸರ ಅನುಕೂಲತೆಗೆ ತಕ್ಕಂತೆ ಜನಸ್ನೇಹಿ ಪೊಲೀಸ್ ಠಾಣೆಯನ್ನು ಆಧುನಿಕವಾಗಿ ನಿರ್ಮಾಣ ಮಾಡಲಾಗುತ್ತಿದೆ. ಇದರ ಉದ್ದೇಶ ರಾಜ್ಯದಲ್ಲಿ ಅಪರಾಧ ಕಡಿಮೆಯಾಗಿ ಸಾಮಾನ್ಯ ಜನರಿಗೆ ನ್ಯಾಯ ಸಿಗುವಂತಾಗ ಬೇಕು ಎಂದು ತಿಳಿಸಿದರು. ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆಗೆ ಬೆದರಿಕೆ ಕರೆಯ ಬಗ್ಗೆ ಪರಿಶೀಲನೆನಡೆಸಲು ಐಜಿಗೆ ದೂರು ನೀಡಲಾಗಿದೆ.
ದೂರಿನಂತೆ ತನಿಖೆಯನ್ನು ನಡೆಸಲಾಗುತ್ತದೆ. ಇದರ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮಾತನಾಡಿ, ಕ್ಷೇತ್ರದ ಜನಸಾಮಾನ್ಯರ ಭದ್ರತೆ ಗಾಗಿ ಕೋಳಾಲದಲ್ಲಿ ಪೊಲೀಸ್ ಠಾಣೆಯನ್ನು ಪ್ರಾರಂಭ ಮಾಡಲಾಗಿದೆ. ಅದೇ ರೀತಿ ಪಟ್ಟಣ ದಲ್ಲಿ ಇತ್ತೀಚೆಗೆ ಆರಕ್ಷಕ ನಿರೀಕ್ಷಕರ ಕಚೇರಿ ಯನ್ನು ನಿರ್ಮಿಸಲಾಗಿದೆ.
ಬಹಳ ವರ್ಷದಿಂದ ಹಳೆಯದಾಗಿದ್ದ ಕೊರಟಗೆರೆ ಪೊಲೀಸ್ ಠಾಣೆಯನ್ನು ನವೀನ ಮಾದರಿಯಲ್ಲಿ ಆಧುನಿ ಕತೆಯಿಂದ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ, ಮಾಜಿ ಸಚಿವ ಸೊಗಡುಶಿವಣ್ಣ, ಎಡಿ ಜಿಪಿ ಅಮರ್‌ಕುಮಾರ್‌ಪಾಂಡೆ, ಆರಕ್ಷಕ ಮಹಾ ನಿರೀಕ್ಷಕ ಶರತ್‌ಚಂದ್ರ,
ಜಿಲ್ಲಾ ಪೊಲೀಸ್ ಅಧೀ ಕ್ಷಕ ಡಾ.ಕೆ.ವಂಸಿಕೃಷ್ಣ, ಮಧುಗಿರಿ ಡಿವೈಎಸ್ಪಿ ಪ್ರವೀಣ್. ಸಿಪಿಐ ನದಾಫ್, ಪಿಎಸ್‌ಐ ಮುತ್ತು ರಾಜು, ನವೀನ್, ಗುತ್ತಿಗೆದಾರ ಎಂ.ವಿ. ಶ್ರೀನಿವಾಸ್. ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರಕೆರೆಶಂಕರ್, ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ, ಬಿಜೆಪಿ ತಾಲೂಕು ಅಧ್ಯಕ್ಷ ಪವನಕುಮಾರ್ ಇದ್ದರು.