ಮುಂಡಗೋಡ: ಹಲವಾರು ದಶಕಗಳ ಕನಸಾಗಿರುವ ಮುಂಡಗೋಡ ಬಸ್ ಡೀಪೊ ನಿರ್ಮಾಣ ಕಾಮಗಾರಿಗೆ ಶೀಘ್ರದಲ್ಲಿ ಚಾಲನೆ ನೀಡಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ.
ಹಿಂದುಳಿದ ತಾಲೂಕು ಎನಿಸಿರುವ ಮುಂಡಗೋಡ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಬಸ್‌ಗಳು ಅಕ್ಕಪಕ್ಕದ ತಾಲೂಕಿನ ಸಾರಿಗೆ ಡೀಪೋಗಳಿಂದ ಸಂಚರಿಸುತ್ತವೆ. ಇಲ್ಲಿಗೂ ಒಂದು ಸಾರಿಗೆ ಡೀಪೊ ನಿರ್ಮಾಣವಾದರೆ ತಾಲೂಕಿನ ಜನರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎನ್ನಲಾಗುತ್ತಿತ್ತು.
ಸಾರಿಗೆ ಘಟಕ ನಿರ್ಮಾಣಕ್ಕೆ ಜಾಗೆ: ಕೆಎಸ್‌ಆರ್‌ಟಿಸಿ ಬಸ್ ಘಟಕ ನಿರ್ಮಾಣ ಮಾಡಲು ಪಟ್ಟಣದ ಹೊರವಲಯದ ಎಪಿಎಂಸಿ ಪಕ್ಕದಲ್ಲಿ ಜಾಗೆ ಗುರ್ತಿಸಲಾಗಿದೆ. ಸಾರಿಗೆ ಘಟಕ ನಿರ್ಮಾಣಕ್ಕೆ ಅವಶ್ಯವಿರುವ ಸುಮಾರು 12ಎಕರೆಯಷ್ಟು ಭೂಮಿಯನ್ನು ಮಾಜಿ ಶಾಸಕ ವಿ.ಎಸ್. ಪಾಟೀಲ ಮಂಜೂರಿ ಪಡೆದು ಕಂಪೌಂಡ ನಿರ್ಮಿಸಿದ್ದರು. ಆದರೆ ನಂತರ ಯಾರೂ ಹೆಚ್ಚಿನ ಆಸಕ್ತಿ ವಹಿಸಿರಲಿಲ್ಲ.
ಶೀಘ್ರದಲ್ಲಿಯೇ ಕಾಮಗಾರಿ: ಇದೀಗ ಹುಬ್ಬಳ್ಳಿ ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿರುವ ಮಾಜಿ ಶಾಸಕ ವಿ.ಎಸ್. ಪಾಟೀಲರು ಮುಂಡಗೋಡದಲ್ಲಿ ಬಸ್ ಡೀಪೊ ನಿರ್ಮಿಸಲು ಮತ್ತೆ ಮುಂದಾಗಿದ್ದಾರೆ ಎನ್ನಲಾಗಿದೆ.
ಈಗಾಗಲೇ ಬಸ್ ಡೀಪೊ ನಿರ್ಮಾಣಕ್ಕೆ ಚಾಲನೆ ನೀಡಲು ಸಕಲ ಸಿದ್ಧತೆ ಮಾಡಲಾಗಿದ್ದು, ಶಾಸಕ ಶಿವರಾಮ ಹೆಬ್ಟಾರ ಉಸ್ತುವಾರಿ ಸಚಿವರಾದ ನಂತರ ಕೆಲವೇ ದಿನಗಳಲ್ಲಿ ಚಾಲನೆ ದೊರೆಯಲಿದೆ. ಇಲ್ಲಿ ಬಸ್ ಡಿಪೋ ನಿರ್ಮಾಣವಾದರೆ ತಾಲೂಕಿನ ಎಲ್ಲ ಗ್ರಾಮಗಳಿಗೂ ಬಸ್ ಸೌಲಭ್ಯ ಸಿಗುವ ಮೂಲಕ ಹೆಚ್ಚಿನ ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.