ಕಲಬುರಗಿ: ನೆರೆಯ ಆಂಧ್ರಪ್ರದೇಶ ಶ್ರೀಶೈಲಂ ಮಲ್ಲಿಕಾರ್ಜುನ ಸುಕ್ಷೇತ್ರದಲ್ಲಿ ಶೀಘ್ರದಲ್ಲಿ ಸುಸಜ್ಜಿತವಾದ ಕರ್ನಾಟಕ ಅತಿಥಿ ಗೃಹ ನಿರ್ಮಾಣವಾಗಲಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ನಗರ ಸಾರಿಗೆ ಬಸ್ ನಿಲ್ದಾಣ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿಥಿ ಗೃಹ ನಿರ್ಮಾಣವಾಗಲು ಆಂಧ್ರಪ್ರದೇಶದ ಸಿಎಂ ಜತೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಶೀಘ್ರದಲ್ಲೇ ಮಾತುಕತೆ ನಡೆಸಲಿದ್ದಾರೆ ಎಂದರು.
ಶ್ರೀಶೈಲದಲ್ಲಿ ಈ ಮುಂಚೆ ಇದ್ದ ಕರ್ನಾಟಕ ಅತಿಥಿ ಗೃಹ (ಯಾತ್ರಿಕ ನಿವಾಸ) ದ ಕಟ್ಟಡ ಹಳೆಯದಾಗಿದ್ದರಿಂದ ನೆಲಸಮಗೊಳಿಸಿ ಹೊಸದಾದ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಅಡಿಗಲ್ಲು ನೆರವೇರಿಸಲಾಗಿದೆ. ಆದರೆ ಆಂಧ್ರಪ್ರದೇಶ ಸರ್ಕಾರ ಈ ಮೊದಲಿನ ಜಾಗ ಬದಲು ಬೇರೆಡೆ ನಿರ್ಮಿಸಲು ಪ್ರಸ್ತಾಪಿಸಿ ಅತಿಥಿ ಗೃಹಕ್ಕೆ ತಡೆಯೊಡ್ಡಿದೆ. ಆದರೆ ಬೇರೆಡೆ ನಿರ್ಮಾಣಕ್ಕೆ ಕರ್ನಾಟಕ ಭಕ್ತರ ವಿರೋಧವಿದೆ. ಹೀಗಾಗಿ ಉಭಯ ರಾಜ್ಯಗಳ ನಡುವೆ ಮಾತುಕತೆ ನಡೆದು ಸಮಸ್ಯೆ ಬಗೆಹರಿದ ನಂತರ ಯಾತ್ರಿಕ ನಿವಾಸ ನಿರ್ಮಾಣ ಕಾರ್ಯ ಮುಂದುವರೆಯಲಿದೆ ಎಂದು ವಿವರಣೆ ನೀಡಿದರು.
ಮಾತುಕತೆ ನಡೆಸುವ ಕುರಿತಾಗಿ ಈಗಾಗಲೇ ಸಿಎಂ ಗಮನಕ್ಕೆ ತರಲಾಗಿದೆ. ಹೀಗಾಗಿ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಆಂಧ್ರಪ್ರದೇಶದ ಸಿಎಂ ಜಗನ್ ರೆಡ್ಡಿ ಜತೆಗೆ ಮಾತುಕತೆ ನಡೆಸಲಿದ್ದಾರೆ ಎಂದರು.
ಶೀಘ್ರ ಮಾತುಕತೆ ನಡೆದು ಹೊಸ ಅತಿಥಿ ಗೃಹ ನಿರ್ಮಾಣ ಕ್ಕೆ ಹಸಿರು ನಿಶಾನೆ ದೊರಕಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: Sringeri: ಶೃಂಗೇರಿ ಶ್ರೀ ಶಾರದ ಪೀಠದ ನೂತನ ಸಿಇಒ ಆಗಿ ಪಿ.ಎ.ಮುರಳಿ ನೇಮಕ