Advertisement

ಹರಿಶ್ಚಂದ್ರ ಘಾಟ್ ಮಾದರಿ ಚಿತಾಗಾರ ನಿರ್ಮಾಣ

12:08 AM Jun 27, 2019 | mahesh |

ಸುಬ್ರಹ್ಮಣ್ಯ : ಶ್ಮಶಾನವೆಂದರೆ ಪಾಳುಬಿದ್ದ ಪ್ರದೇಶ. ಸೂತಕದ ಛಾಯೆಗೆ ಇಂಬು ನೀಡುವಂತಹ ವಾತಾವರಣ, ಮೂಲ ಸೌಕರ್ಯಗಳ ಕೊರತೆ ಎನ್ನುವ ಚಿತ್ರಣ ಕಣ್ಮುಂದೆ ಬರುವುದು ಸಹಜ. ಆದರೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಇಂಜಾಡಿ ಬಳಿ ನಿರ್ಮಾಣಗೊಂಡಿರುವ 58.06 ಲಕ್ಷ ರೂ. ವೆಚ್ಚದ ಚಿತಾಗಾರ ಹಲವು ವೈಶಿಷ್ಟ್ಯಗಳಿಂದ ಕೂಡಿದೆ.

Advertisement

ಶವಸಂಸ್ಕಾರಕ್ಕೆ ಜಾಗವಿದ್ದರೂ ಸರಿ ಯಾದ ವ್ಯವಸ್ಥೆ ಸುಬ್ರಹ್ಮಣ್ಯ ನಗರದಲ್ಲಿ ಇರಲಿಲ್ಲ. ಇದೀಗ ದೇವಸ್ಥಾನದ ವತಿಯಿಂದ ಸುಸಜ್ಜಿತ ರುದ್ರಭೂಮಿ ನಿರ್ಮಾಣವಾಗಿದೆ. ಜೂ. 27ರಂದು ಮುಕ್ತಧಾಮದ ಲೋಕಾರ್ಪಣೆ ನಡೆಯಲಿದೆ. ಈ ಮೂಲಕ ಕೊನೆಗೂ ಜೀವನ್ಮುಕ್ತಿ ನೀಡುವ ಮುಕ್ತಿಧಾಮಕ್ಕೆ ಮುಕ್ತಿ ದೊರಕಿದೆ.

ಧ್ಯಾನಸ್ಥ ಶಿವನಿದ್ದಾನೆ ಇಲ್ಲಿ!
ಇಂಜಾಡಿ ಬಳಿ ಹರಿಶ್ಚಂದ್ರ ಘಾಟ್ ಮಾದರಿಯಲ್ಲಿ ನಿರ್ಮಾಣ ಗೊಂಡಿರುವ ರುದ್ರಭೂಮಿ ಯಲ್ಲಿ ಸುಖಾಸೀನ ವಿಶ್ರಾಂತಿ ಭಂಗಿಯಲ್ಲಿರುವ 6 ಅಡಿ ಎತ್ತರದ ಧ್ಯಾನಸ್ಥ ಶಿವನ ವಿಗ್ರಹವಿದೆ. ಆವರಣದೊಳಗೆ 4 ಅಡಿ ಎತ್ತರದ ಶಿವ ಪೀಠ, ಹಿಂಭಾಗದಲ್ಲಿ 12 ಅಡಿ ಎತ್ತರದ ಕೈಲಾಸ, 28 ಅಡಿ ಎತ್ತರದ ತ್ರಿಶೂಲ, ಡಮರುಗ, 6 ಅಡಿ ಎತ್ತರದ ಹರಿಶ್ಚಂದ್ರ ಮೂರ್ತಿ ಹಾಗೂ 4 ಅಡಿ ಎತ್ತರದ ಪೀಠ ನಿರ್ಮಾಣಗೊಂಡಿದೆ.

ಗೋಡೆಗಳಲ್ಲಿ ವರ್ಲಿ ಚಿತ್ರ
ಆವರಣದ ಒಳಗೆ ಉದ್ಯಾನ ನಿರ್ಮಿಸಲಾಗಿದೆ. ಸುತ್ತಲೂ ಕೂರಲು ಅನುಕೂಲವಾದ ತೆರೆದ ಪ್ರಾಂಗಣ ಸಹಿತ ಮೂಲ ಸೌಕರ್ಯ ಒದಗಿಸಲಾಗಿದೆ. ನೆಲಕ್ಕೆ ಇಂಟರ್‌ಲಾಕ್‌ ಅಳವಡಿಸಲಾಗಿದೆ. ಆವರಣದ ಗೋಡೆಗಳಲ್ಲಿ ವರ್ಲಿ ಚಿತ್ರಗಳನ್ನು ರಚಿಸಲಾಗಿದೆ. ವಿದ್ಯುತ್‌, ಅನಿಲ, ಕೊಟ್ಟಿಗೆ ಸಹಿತ ಎಲ್ಲ ರೀತಿಯ ಚಿತಾಗಾರ ಕುಲುಮೆಗಳನ್ನು ಒಂದೇ ಸೂರಿನಡಿ ಒದಗಿಸಲಾಗಿದೆ. ಉಳ್ಳಾಲದ ಬಾಲು ಆರ್ಟ್ಸ್ ಮುಕ್ತಿಧಾಮದ ಗಾರ್ಡನ್‌, ವರ್ಲಿ ಚಿತ್ತಾರ ನಿರ್ಮಿಸಲಿದ್ದಾರೆ.

ದೇಗುಲದ ಮುತುವರ್ಜಿ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಧುನಿಕ ಶವಾಗಾರದ ಆವಶ್ಯಕತೆ ಕುರಿತು ಹಲವು ವರ್ಷಗಳಿಂದ ಬೇಡಿಕೆಗಳಿದ್ದವು. ಆದರೆ ಈಡೇರುವ ಲಕ್ಷಣ ಇರಲಿಲ್ಲ. ಇದು ವೆರೆಗೆ ಉರುವಲು ಚಿತಾಗಾರಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಿತ್ತು. ಇದನ್ನು ಮನಗಂಡ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಸುಸಜ್ಜಿತ ಮುಕ್ತಿಧಾಮ ನಿರ್ಮಿಸಲು ನಿರ್ಧರಿಸಿತ್ತು.

Advertisement

ಸುಡುವುದು ಸವಾಲಾಗಿತ್ತು
ಸುಬ್ರಹ್ಮಣ್ಯ ಗ್ರಾ.ಪಂ. ವ್ಯಾಪ್ತಿಯ ಇಂಜಾಡಿ ಬಳಿ ಒಂದು ಎಕ್ರೆ ಭೂಮಿಯಲ್ಲಿ ಕೇವಲ 10 ಸೆಂಟ್ಸ್‌ನಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿ ಇತ್ತು. ಶವಗಳನ್ನು ಉರುವಲಿಂದ ಸುಡಲಾಗುತ್ತಿತ್ತು. ರುದ್ರ ಭೂಮಿ ಗಿಡ-ಗಂಟಿಗಳಿಂದ ತುಂಬಿತ್ತು. ನೀರು, ರಸ್ತೆ ಸಂಪರ್ಕವಿಲ್ಲದ ಇಲ್ಲಿ ಪೊದೆ ಸರಿಸಿ ಕಟ್ಟಿಗೆ ರಾಶಿ ಹಾಕಿ ಶವ ಸಂಸ್ಕಾರ ನಡೆಸಬೇಕಿತ್ತು. ಶವ‌ ಬೂದಿಯಾಗುವ ತನಕ ಕಾಯುವ ಸ್ಥಿತಿ ಇರಲಿಲ್ಲ. ಅರೆಬೆಂದ ಶವಗಳು ಕಂಡು ಬರುತ್ತಿದ್ದವು.

ಸ್ಥಳೀಯಾಡಳಿತದ ನಿರ್ವಹಣೆ
ಚಿತಾಗಾರದ ಲೋಕಾರ್ಪಣೆ ಗುರುವಾರ ನಡೆಯಲಿದೆ. ಬಳಿಕ ನಿರ್ವಹಣೆಯನ್ನು ಸ್ಥಳೀಯಾಡಳಿತ ವಹಿಸಲಿದೆ. ಅನಂತರ ರಸ್ತೆ, ಕಾವಲುಗಾರರ ವ್ಯವಸ್ಥೆಯಾಗಲಿದೆ.

‘ಉದಯವಾಣಿ’ ವರದಿ ಪ್ರಕಟಿಸಿತ್ತು
ಕುಕ್ಕೆಯಲ್ಲಿ ಶವಸಂಸ್ಕಾರ ವ್ಯವಸ್ಥೆ ಸಮರ್ಪಕ ರೀತಿಯಲ್ಲಿ ನಡೆಯದೆ ಗ್ರಾಮದ ಸ್ವಚ್ಛತೆಗೆ ಧಕ್ಕೆ ಉಂಟಾಗುತ್ತಿತ್ತು. ಜತೆಗೆ ಶವಸಂಸ್ಕಾರದ ವೇಳೆ ಇಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲದೆ ಬಹಳಷ್ಟು ತೊಂದರೆಗಳು ಎದುರಾಗುತ್ತಿದ್ದವು. ನಗರದಲ್ಲಿ ಆಧುನಿಕ ಚಿತಗಾರ ಇಲ್ಲದೆ ಇರುವ ಕುರಿತು ‘ಉದಯವಾಣಿ’ ಹಲವು ಬಾರಿ ವರದಿ ಪ್ರಕಟಿಸಿತ್ತು. ಬಳಿಕ ಎಚ್ಚೆತ್ತುಕೊಂಡ ಸ್ಥಳೀಯಾಡಳಿತ ಶ್ಮಶಾನ ಹೊಂದುವ ಕುರಿತು ಮೂರ್‍ನಾಲ್ಕು ಬಾರಿ ಸಭೆ ನಡೆಸಿ ಸಮಿತಿ ರಚಿಸಿ ಕಾರ್ಯೋನ್ಮುಖವಾಗಿತ್ತು. ಆದರೆ ಅದು ನಿರೀಕ್ಷಿತ ವೇಗದಲ್ಲಿ ನಡೆದಿರಲಿಲ್ಲ. ಈ ನಡುವೆ ದೇವಸ್ಥಾನದ ಈಗಿನ ಆಡಳಿತ ಮಂಡಳಿ ಶ್ಮಶಾನದ ವಿಚಾರದಲ್ಲಿ ಮುತುವರ್ಜಿ ವಹಿಸಿತ್ತು. ತ್ವರಿತವಾಗಿ ಇಲ್ಲಿ ಆಧುನಿಕ ಚಿತಾಗಾರ ನಿರ್ಮಿಸಲು ಉದ್ದೇಶಿಸಿತ್ತು.

ಹಲವು ವರ್ಷಗಳ ಬೇಡಿಕೆನಗರದಲ್ಲಿ ಚಿತಾಗಾರ ಇಲ್ಲದೆ ಬಹಳಷ್ಟು ಸಮಸ್ಯೆಯಾಗುತ್ತಿತ್ತು. ಇದನ್ನು ಮನಗಂಡ ವ್ಯವಸ್ಥಾಪನ ಸಮಿತಿ ಇಲ್ಲಿ ಆಧುನಿಕ ಚಿತಾಗಾರ ನಿರ್ಮಿಸಿದೆ. ಕ್ಷೇತ್ರದಲ್ಲಿ ಹಲವು ವರ್ಷಗಳಲ್ಲಿ ಈಡೇರದ ಕೆಲ ಬೇಡಿಕೆಗಳನ್ನು ಈಡೇರಿಸುವಲ್ಲಿ ಗಮನಹರಿಸಲಾಗಿದೆ.
– ನಿತ್ಯಾನಂದ ಮುಂಡೋಡಿ ಅಧ್ಯಕ್ಷರು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ
Advertisement

Udayavani is now on Telegram. Click here to join our channel and stay updated with the latest news.

Next