ಬೆಂಗಳೂರು: ಸರ್ಕಾರ ಬೆಂಗಳೂರಿನಲ್ಲಿಯೇ ಫಿಲ್ಮ್ ಸಿಟಿ ನಿರ್ಮಾಣ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಭರವಸೆ ನೀಡಿದ್ದಾರೆ. ಈ ಮೂಲಕ ದೇವಿಕಾರಾಣಿ ರೋರಿಕ್ ಎಸ್ಟೇಟ್‌ನಲ್ಲಿ ಚಿತ್ರನಗರಿ ಮಾಡುವ ತೀರ್ಮಾನವನ್ನು ಕೈ ಬಿಟ್ಟಿದೆ ಎಂಬ ಮುನ್ಸೂಚನೆ ನೀಡಿದ್ದಾರೆ. ಭಾನುವಾರ ಭಾರತೀಯ ವಿದ್ಯಾಭನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನಟ ಅಂಬರೀಶ್ ಅವರಿಗೆ ಮರಣೋತ್ತರವಾಗಿ 2019ನೇ ಸಾಲಿನ ಪದ್ಮಭೂಷಣ ಡಾ.ಬಿ.ಸರೋಜದೇವಿ ರಾಷ್ಟ್ರೀಯ ಪ್ರಶಸ್ತಿಯನ್ನು ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸರ್ಕಾರ ಈಗಾಗಲೇ ಫಿಲ್ಮ್ ಸಿಟಿ ನಿರ್ಮಾಣಕ್ಕಾಗಿ ಬೆಂಗಳೂರಿನ ಮೂರ್ನಾಲ್ಕು ಕಡೆ ಸ್ಥಳ ಪರಿಶೀಲನೆ ಮಾಡಿದೆ. ಆದರೆ ಅವುಗಳಲ್ಲಿ ಜಾಗದ ತಕರಾರು ಇದೆ. ಇದನ್ನು ಹೋಗಲಾಡಿಸಿ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿಯೇ ಫಿಲ್ಮ್ ಸಿಟಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಫಿಲ್ಮ್ ಸಿಟಿಯನ್ನು ಮೈಸೂರಿನಲ್ಲಿ ನಿರ್ಮಾಣ ಮಾಡುವ ಘೋಷಣೆ ಮಾಡಿದ್ದರು. ಆ ನಂತರ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿಯವರು ರಾಮನಗರದಲ್ಲಿ ಫಿಲ್ಮ್ ಯುನಿವರ್ಸಿಟಿ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದರು.
ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಮುಖ್ಯಮಂತ್ರಿ ಯಡಿಯೂರಪ್ಪ ಫಿಲ್ಮ್ ಸಿಟಿಯನ್ನು ಬೆಂಗಳೂರಿಗೆ ಹೊಂದಿಕೊಂಡಿರುವ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ರೋರಿಕ್ ಎಸ್ಟೇಟ್‌ನಲ್ಲಿ ಮಾಡುವುದಾಗಿ ಘೋಷಣೆ ಮಾಡಿದ್ದರು. ಇದಕ್ಕೆ ಪರಿಸರವಾದಿಗಳಿಂದ ಸಾಕಷ್ಟು ವಿರೋಧ ವ್ಯಕ್ತವಾಯಿತು. ಅಲ್ಲದೇ ಅದು ಆನೆ ಕಾರಿಡಾರ್ ಆಗಿರುವುದರಿಂದ ಅಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶವಿಲ್ಲ ಎಂದು ಹೇಳಲಾಗುತ್ತಿರುವುದರಿಂದ ರಾಜ್ಯ ಸರ್ಕಾರ ರೋರಿಕ್ ಎಸ್ಟೆಟ್‌ನಲ್ಲಿ ಫಿಲ್ಮ್ ಸಿಟಿ ಯೋಜನೆ ಪ್ರಸ್ತಾಪ ಕೈ ಬಿಟ್ಟು ಪರ್ಯಾಯ ಸ್ಥಳ ಹುಡುಕುತ್ತಿರುವ ಸೂಚನೆಯನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡುವ ತೀರ್ಮಾನ ಕೈಗೊಂಡಿದೆ. ಈ ಬಗ್ಗೆ ಯಡಿಯೂರಪ್ಪ ಅವರ ಜತೆ ಚರ್ಚೆ ನಡೆಸಲಾಗಿದೆ. ದೊಡ್ಡ ಕಂಪನಿಗಳು ಕೂಡ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಮುಂದೆ ಬಂದಿವೆ. ಶೀಘ್ರದಲ್ಲೇ ಚಿತ್ರನಗರಿ ಕನಸು ಈಡೇರಲಿದೆ ಎಂದು ತಿಳಿಸಿದರು. ಅಂಬರೀಶ್ ಅವರು ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜಕೀಯ ರಂಗದಲ್ಲೂ ಹೆಸರು ಮಾಡಿದ್ದಾರೆ. ಕಾವೇರಿ ವಿಚಾರದಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತಾವು ಅಧಿಕಾರಕ್ಕೆ ಅಂಟಿಕೊಂಡವರಲ್ಲ ಎಂಬುದನ್ನು ತೋರ್ಪಡಿಸಿದರು ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ಸುಮಲತಾ ಅಂಬರೀಶ್, ಈ ಪ್ರಶಸ್ತಿಯನ್ನು ಕನ್ನಡ ಚಿತ್ರರಂಗಕ್ಕೆ ಮತ್ತು ಅಂಬರೀಶ್ ಅವರ ಅಭಿಮಾನಿಗಳಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.
ಮಂಡ್ಯ ಹುಡುಗರಿಗೆ ಹೇಳಿ ಕಲ್ಲಿನಲ್ಲಿ ಹೊಡಿಸ್ತೀನಿ!: “ನನಗೆ ಅಂಬರೀಶ್ ಅಂದ್ರೆ ತುಂಬಾ ಇಷ್ಟ. ಅವನು ನನ್ನ ಅಕ್ಕ-ಅಕ್ಕ ಅಂತ ಕರೆಯುತ್ತಿದ್ದ. ನಾನು ಅವನ ಜತೆ ಆಗಾಗ ಮಾತನಾಡುವಾಗ ಸುಮಲತಾ ಅವರನ್ನು ಹೊಗಳುತ್ತಿದ್ದೆ. ಆತ ತಮಾಷೆಗಾಗಿ ನೀನು ನನ್ನ ಹೊಗಳದೇ ಅವಳನ್ನು ಹೊಗಳುತ್ತಾ ಇರು. ಒಂದ್ ದಿವಸ ನಮ್ಮ ಮಂಡ್ಯ ಹುಡುಗರಿಗೆ ಹೇಳಿ ನಿನಗೆ ಕಲ್ಲಿನಲ್ಲಿ ಹೊಡಿಸ್ತೀನಿ ಎನ್ನುತ್ತಿದ್ದ’ ಎಂದು ಹಿರಿಯ ನಟಿ ಸರೋಜಾದೇವಿ ಅವರು ಅಂಬರೀಶ್ ಅವರೊಂದಿಗಿನ ಸನ್ನಿವೇಶಗಳನ್ನು ಮೆಲಕು ಹಾಕಿದರು. “ನೀನು ಪ್ರಶಸ್ತಿಗಳನ್ನು ಬರೀ ನಟಿಯರಿಗೆ ಮಾತ್ರ ಕೊಡು. ಯಾಕೆ ಗಂಡಸರಿಗೆ ಕೊಡುವುದಿಲ್ಲ ?’ ಎಂದು ತಮಾಷೆ ಮಾಡುತ್ತಿದ್ದ. ವಿಧಿಯಾಟ ಈಗ ಪ್ರಶಸ್ತಿಯನ್ನು ಆತನೇ ಪಡೆಯುವಂತಾಗಿದೆ ಎಂದು ಹೇಳಿದರು.
ಶ್ರೀರಂಗಪಟ್ಟಣ ನಮ್ಮ ತಾಯಿ ಊರು. ಚಿಕ್ಕವನಿದ್ದಾಗಲೇ ನಾನು ದಿನಕ್ಕೆ ಮೂರು ಸಿನಿಮಾ ನೋಡ್ತಾ ಇದ್ದೆ. ಈಗ ಕೆಲಸದ ಒತ್ತಡದಿಂದಾಗಿ ಸಿನಿಮಾ ನೋಡಲು ಆಗುತ್ತಿಲ್ಲ. ಅಂಬರೀಶ್ ಅವರ ನಾಗರ ಹೊಳೆ, ನಾಗರ ಹಾವು, ಚಕ್ರವ್ಯೂಹ, ರಂಗನಾಯಕಿ ಸೇರಿದಂತೆ ಹಲವು ಸಿನಿಮಾಗಳನ್ನು ನೋಡಿದ್ದೇನೆ.
-ಡಾ.ಸಿ.ಎನ್.ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ