Advertisement

ಹೆಮ್ಮಾಡಿ –ಕಟ್ಟು: ಮಣ್ಣಿನ ತಡೆ ದಂಡೆ ನಿರ್ಮಾಣ ಅಗತ್ಯ

02:27 AM May 17, 2019 | sudhir |

ಹೆಮ್ಮಾಡಿ: ಇಲ್ಲಿನ ಕಟ್ಟು ಭಾಗದಲ್ಲಿ ಹಿಂದೆಲ್ಲ ಸಮೃದ್ಧ ಫಸಲು ತೆಗೆಯುತ್ತಿದ್ದ ಹತ್ತಾರು ಎಕರೆ ಗದ್ದೆಗಳು ಈಗ ಹಡಿಲು ಬಿದ್ದಿವೆ. ಹಲವು ವರ್ಷಗಳಿಂದ ಇಲ್ಲಿನ ರೈತರು ಗದ್ದೆಗಳಿಗೆ ಉಪ್ಪು ನೀರಿನ ಹಾವಳಿ ಬರದಂತೆ ತಡೆಯಲು ಮಣ್ಣಿನ ತಡೆ ದಂಡೆಗೆ ಬೇಡಿಕೆಯಿಟ್ಟಿದ್ದರೂ, ಇನ್ನೂ ಈಡೇರಿಲ್ಲ.

Advertisement

ಉಪ್ಪು ನೀರಿನಿಂದಾಗಿ ಕಟ್ಟು ಭಾಗದ ರೈತರಿಗೆ ಈ ವರ್ಷ ಒಂದೇ ಒಂದು ಬೆಳೆ ಬೆಳೆಯಲೂ ಸಾಧ್ಯವಾಗಿಲ್ಲ. 2 ವರ್ಷಗಳ ಹಿಂದೊಮ್ಮೆ ಹೆಮ್ಮಾಡಿ ಗ್ರಾ.ಪಂ. ನಿಂದ ಇದೇ ಭಾಗದಲ್ಲಿ ತುಸು ಮಣ್ಣಿನ ತಡೆ ದಂಡೆ ನಿರ್ಮಿಸಲಾಗಿತ್ತು. ಆದರೆ ಅದು ಇನ್ನಷ್ಟು ವಿಸ್ತರಿಸಿದರೆ ಮಾತ್ರ ಅನುಕೂಲವಾದೀತು ಎನ್ನುವುದು ಇಲ್ಲಿನ ರೈತರ ಅಭಿಪ್ರಾಯ.

400 ಮೀ. ವಿಸ್ತರಣೆ

2 ವರ್ಷದ ಹಿಂದೆ ಸ್ವಲ್ಪ ದೂರದವರೆಗೆ ಮಣ್ಣಿನ ದಂಡೆಯನ್ನು ನಿರ್ಮಿಸಲಾಗಿತ್ತು. ಆದರೆ ಇದರಿಂದ ಇಲ್ಲಿನ ರೈತರಿಗೆ ಪ್ರಯೋಜನಕ್ಕಿಂತ, ತೊಂದರೆಯೇ ಹೆಚ್ಚು. ಇನ್ನು ಸುಮಾರು 400 ಮೀಟರ್‌ನಷ್ಟು ಮಣ್ಣಿನ ತಡೆದಂಡೆಯನ್ನು ನಿರ್ಮಿಸಿದರೆ ಗದ್ದೆಗೆ ಉಪ್ಪು ನೀರು ಬರದಂತೆ ತಡೆಯಬಹುದು ಎನ್ನುತ್ತಾರೆ ಕೃಷಿಕ ನರಸಿಂಹ.

ಎಕರೆಗಟ್ಟಲೆ ಗದ್ದೆ ಹಡಿಲು ಇಲ್ಲಿ ಒಂದು ಬದಿ ಸೇವಂತಿಗೆ ಬೆಳೆಯುತ್ತಾರೆ. ಆದರೆ ರಸ್ತೆಯ ಈ ಕಡೆ ಉಪ್ಪು ನೀರಿನ ಸಮಸ್ಯೆಯಿಂದಾಗಿ ಸೇವಂತಿ ಬೆಳೆ ಸಹಿತ ಯಾವುದೇ ಕೃಷಿ ಮಾಡಲು ಆಗುತ್ತಿಲ್ಲ. ಇಲ್ಲಿ ಸುಮಾರು 75 ಮನೆಗಳಿದ್ದು, 50 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಭತ್ತದ ಕೃಷಿ ಮಾಡಲಾಗುತ್ತಿತ್ತು. ಆದರೆ ಈಗ ಉಪ್ಪು ನೀರಿನ ಸಮಸ್ಯೆಯಿಂದಾಗಿ ಆ ಗದ್ದೆಗಳಲ್ಲಿ ಕೃಷಿ ಮಾಡದೇ ಹಡಿಲು ಬಿಡಲಾಗಿದೆ.

ಮನವಿ ಕೊಟ್ಟಿದ್ದರೆ ಪರಿಶೀಲನೆ

ಇಲ್ಲಿ ಎರಡು ಬೆಳೆ ಬೆಳೆಯಲು ಸಾಧ್ಯವಿಲ್ಲ. ಆದರೆ ಈಗ ಇಲ್ಲಿ ಒಂದು ಬೆಳೆ ಕೂಡ ಬೆಳೆಯಲು ಕಷ್ಟವಾಗುತ್ತಿದೆ. ಈ ಸಲವಾದರೂ 400 ಮೀ.ನಷ್ಟು ಮಣ್ಣಿನ ದಂಡೆ ವಿಸ್ತರಿಸಿದರೆ ಈ ಭಾಗದ ರೈತರಿಗೆ ಪ್ರಯೋಜನವಾಗಲಿದೆ. ಪ್ರತಿ ಸಲವೂ ಪಂಚಾಯತ್‌ಗೆ ಈ ಬಗ್ಗೆ ಮನವಿ ಕೊಟ್ಟಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. – ನರಸಿಂಹ ಕಟ್ಟು, ಕೃಷಿಕರು ಈ ಬಗ್ಗೆ ಪಂಚಾಯತ್‌ಗೆ ಈ ಹಿಂದೆ ಮನವಿ ಕೊಟ್ಟಿದ್ದರೆ, ಅದನ್ನು ಪರಿಶೀಲಿಸಿ, ಕ್ರಿಯಾ ಯೋಜನೆಯಲ್ಲಿ ಸೇರಿಸಲಾಗುವುದು. ಆ ಬಳಿಕ ಉದ್ಯೋಗ ಖಾತರಿ ಅಥವಾ ಬೇರೆ ಯಾವುದರ ಮೂಲಕವಾದರೂ ಮಣ್ಣಿನ ತಡೆ ದಂಡೆ ವಿಸ್ತರಣೆಗೆ ಪ್ರಯತ್ನಿಸಲಾಗುವುದು.
– ಮಂಜಯ್ಯ ಬಿಲ್ಲವ,ಹೆಮ್ಮಾಡಿ ಗ್ರಾ.ಪಂ. ಪಿಡಿಒ
– ಪ್ರಶಾಂತ್ ಪಾದೆ
Advertisement
Advertisement

Udayavani is now on Telegram. Click here to join our channel and stay updated with the latest news.

Next