Advertisement

ಸುಸಜ್ಜಿತ ಮಾದರಿ ಶಾಲೆ ನಿರ್ಮಾಣಕ್ಕೆ ನಿರ್ಣಯ

12:32 PM May 17, 2022 | Team Udayavani |

ಚಿತ್ರದುರ್ಗ: ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮಾದರಿ ಶಾಲೆ ನಿರ್ಮಾಣಕ್ಕೆ ಮಂಡಳಿಯ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

Advertisement

ನಗರದ ತಮಟಕಲ್ಲು ರಸ್ತೆಯಲ್ಲಿರುವ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಂಡಳಿ ಅಧ್ಯಕ್ಷ ಎನ್‌.ಇ. ಜೀವನಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿಯ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ 2021-22 ನೇ ಸಾಲಿನ ವಾರ್ಷಿಕ ಆಡಳಿತ ವರದಿ, 2022-23 ನೇ ಸಾಲಿನ ಕ್ರಿಯಾ ಯೋಜನೆ ಹಾಗೂ 2015-16 ರಿಂದ 2020-21ನೇ ಸಾಲಿನ ವರಗಿನ ವಾರ್ಷಿಕ ಲೆಕ್ಕಪತ್ರಗಳ ತಪಾಸಣಾ ವರದಿಗಳನ್ನು ಅನುಮೋದಿಸಿ, ಇತರೆ ವಿಷಯಗಳನ್ನು ಚರ್ಚಿಸಲಾಯಿತು.

ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ಮಾದರಿ ಶಾಲೆಗಳನ್ನು ನಿರ್ಮಿಸುವ ಕುರಿತು ವಿಧಾನ ಪರಿಷತ್‌ ಶಾಸಕ ಕೆ.ಎಸ್.ನವೀನ್‌ ಸಭೆಯಲ್ಲಿ ವಿಷಯ ಮಂಡಿಸಿದರು. ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶದಲ್ಲಿ ಮಾದರಿ ಶಾಲೆ ನಿರ್ಮಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಂದ ವರದಿ ಪಡೆದುಕೊಂಡು, ಸೂಕ್ತ ಸ್ಥಳ ಆಯ್ಕೆ ಮಾಡಿ ಶಾಲೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪಂಗಡ, ಹಿಂದುಳಿದ ವರ್ಗದವರು ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಮಾದರಿ ಶಾಲೆ ನಿರ್ಮಿಸುವಂತೆ ಸಲಹೆ ನೀಡಿದರು. ಮುಂದಿನ ದಿನಗಳಲ್ಲಿ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯ ಎಲ್ಲಾ ತಾಲೂಕಿನಲ್ಲಿಯೂ ಮಾದರಿ ಶಾಲೆ ನಿರ್ಮಿಸಲು ಯೋಜನೆ ರೂಪಿಸಬೇಕು ಎಂದರು.

Advertisement

ಕಾಮಗಾರಿಗಳ ಪರಿಶೀಲನೆಗೆ ತಂಡ ರಚನೆ

ಮಂಡಳಿ ಅನುದಾನದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಯನ್ನು ಮಂಡಳಿ ಅಧ್ಯಕ್ಷರು ಒಬ್ಬರೇ ಮಾಡಲು ಕಷ್ಟ ಸಾಧ್ಯ. ಈ ಹಿನ್ನಲೆಯಲ್ಲಿ ಮಂಡಳಿ ಕಾರ್ಯದರ್ಶಿ ಒಳಗೊಂಡಂತೆ ಅಧಿಕಾರಿಗಳ ತಂಡ ರಚಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಸಭೆಯಲ್ಲಿ ತಿಳಿಸಿದರು. ಮಂಡಳಿ ಅನುದಾನದಿಂದ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ನಾಮ ಫಲಕದಲ್ಲಿ ಕಡ್ಡಾಯವಾಗಿ ಮಂಡಳಿ ಹೆಸರು ನಮೂದಿಸುವಂತೆ ಅಧ್ಯಕ್ಷಕರು ಸೂಚನೆ ನೀಡಿದರು.

5 ಕೋಟಿ ನಬಾರ್ಡ ಅನುದಾನಕ್ಕೆ ಬೇಡಿಕೆ

ಈ ಹಿಂದೆ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಗೆ ನಬಾರ್ಡ್‌ನಿಂದ ಅನುದಾನ ತರಲಾಗಿತ್ತು. ಇದೇ ರೀತಿ ಪ್ರತಿ ಕ್ಷೇತ್ರಕ್ಕೆ 5 ಕೋಟಿ ರೂ. ಅನುದಾನವನ್ನೂ ನಬಾರ್ಡ್‌ನಿಂದ ತರಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಚಿತ್ರದುರ್ಗ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಸಭೆಯಲ್ಲಿ ಸಲಹೆ ನೀಡಿದರು.

ಮಂಡಳಿಯಿಂದ ನಿರ್ಮಿಸಿರುವ ಚೆಕ್‌ ಡ್ಯಾಂಗಳಲ್ಲಿ ತುಂಬಿರುವ ಹೂಳು ತೆಗೆಯಲು ನರೇಗಾದಲ್ಲಿ ಅವಕಾಶ ಕಲ್ಪಿಸಬೇಕು. ಮಂಡಳಿಯ ವಾರ್ಷಿಕ ಲೆಕ್ಕಪತ್ರ ವರದಿ ಹಾಗೂ ಆಡಿಟ್‌ಗಳನ್ನು ಆಯಾ ವರ್ಷವೇ ಪೂರ್ಣಗೊಳಿಸಬೇಕು. ಇದನ್ನು ವಾರ್ಷಿಕ ಸಭೆಯಲ್ಲಿ ಮಂಡಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಸೂಚಿಸಿದರು.

ಬ್ಯಾಡಗಿ ಶಾಸಕ ವಿರುಪಾಕ್ಷ ಬಳ್ಳಾರಿ ಮಾತನಾಡಿ, ಆಯಾ ವರ್ಷದ ಅನುದಾನವನ್ನು ಆಯಾ ವರ್ಷದಲ್ಲಿಯೇ ಬಳಸಿಕೊಳ್ಳಬೇಕು. ಕಾಮಗಾರಿಗಳ ಅನುಷ್ಠಾನ ತಡವಾದರೆ ಜನರಿಗೆ ಯೋಜನೆಗಳು ತಲುಪುವುದಿಲ್ಲ. ಯೋಜನೆಯ ವೆಚ್ಚವು ಅಧಿಕವಾಗುವುದು. ಅಧಿಕಾರಿಗಳು ಈ ಕುರಿತು ಎಚ್ಚರ ವಹಿಸಬೇಕು ಎಂದರು. ಸಭೆಯಲ್ಲಿ ಮಂಡಳಿ ಕಾರ್ಯದರ್ಶಿ ಅವರಿಗೆ ಆಯವ್ಯಯದ ಅನುದಾನದಲ್ಲಿ ಶೇ.2.5 ರಷ್ಟು ಅನುದಾನವನ್ನು ಕಾಯ್ದಿರಿಸಲು ಅನುಮೋದನೆ ನೀಡಲಾಯಿತು. ರಾಜ್ಯದ ಮುಖ್ಯಮಂತ್ರಿ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು, ಹಣಕಾಸು ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ವರ್ಷಕ್ಕೆ ಒಮ್ಮೆ ಮಂಡಳಿ ಸಭೆಯನ್ನು ಬೆಂಗಳೂರಿನಲ್ಲಿ ಆಯೋಜಿ ಸುವಂತೆ ಸದಸ್ಯರು ಅಧ್ಯಕ್ಷರಿಗೆ ತಿಳಿಸಿದರು.

ಮಂಡಳಿ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ ಹಾಗೂ ಪಂಗಡ, ಅಲೆಮಾರಿ ಜನಾಂಗಳಿಗೆ ಮೂಲಭೂತ ಸೌಕರ್ಯಗಳನ್ನು ಮಂಡಳಿ ನಿಯಮಗಳ ಪ್ರಕಾರ ಕಲ್ಪಿಸಲು ಸಮಾಜ ಕಲ್ಯಾಣ ಇಲಾಖೆಯಿಂದ 10 ಕೊಟಿ ರೂಪಾಯಿಗಳ ಅನುದಾನವನ್ನು ಮಂಜೂರು ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತಿರ್ಮಾನಿಸಲಾಯಿತು.

ಮಂಡಳಿಯ ನಾಮನಿರ್ದೇಶಿತ ಸದಸ್ಯರಾದ ಶ್ಯಾಮಲಾ ಶಿವಪ್ರಕಾಶ್‌, ಸುಧೀರ್‌ ರಾಮಸಾ ಕಾಟಿಗರ್‌, ಕಾರ್ಯದರ್ಶಿ ಡಾ| ಶ್ರೀಧರ ಬಿ.ಭಜಂತ್ರಿ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಜಿಲ್ಲಾಧಿಕಾರಿಗಳ ಪ್ರತಿನಿಗಳು, ಅಧಿಕಾರಿಗಳು ಸಭೆಯಲ್ಲಿದ್ದರು.

45 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮತಿ

ಈ ಬಾರಿ ಆಯವ್ಯಯದಲ್ಲಿ ಸರ್ಕಾರ 45 ಕೋಟಿ ರೂ.ಗಳನ್ನು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಗೆ ನೀಡಿದೆ. ಈ ಅನುದಾನದಲ್ಲಿ 34.15 ಕೋಟಿ ರೂಪಾಯಿಗಳನ್ನು ಬಂಡವಾಳ ವೆಚ್ಚವಾಗಿ, ಮಂಡಳಿಯ ಈ ಹಿಂದೆ ಕೈಗೊಂಡ ಕಾಮಗರಿಗಳಿಗೆ, ವಿಶೇಷ ಘಟಕ ಯೋಜನೆಯಡಿ 7.18 ಕೋಟಿ ರೂಪಾಯಿ ಹಾಗೂ ಗಿರಿಜನ ಉಪಯೋಜನೆಯಡಿ 3.12 ಕೋಟಿ ರೂಪಾಯಿಗಳನ್ನು ಹೊಸ ಕಾಮಗಾರಿಗಳಿಗೆ ವೆಚ್ಚ ಮಾಡಲು ಮಂಡಳಿ ಅಧ್ಯಕ್ಷ ಎನ್‌.ಇ.ಜೀವನಮೂರ್ತಿ ವಿಷಯ ಮಂಡಿಸಿದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next