ಚಿತ್ರದುರ್ಗ: ಸರ್ಕಾರದಿಂದ ರಾಜ್ಯದಲ್ಲಿ 6 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಮಕ್ಕಳು ಹೆಚ್ಚಿರುವ ಮಾದರಿ ಶಾಲೆ, ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಹೆಚ್ಚಿನ ಶಾಲಾ ಕೊಠಡಿ ನಿರ್ಮಿಸಬೇಕು ಎಂದು ಆರ್ಥಿಕ ಇಲಾಖೆ ಸರ್ಕಾರದ ಕಾರ್ಯದರ್ಶಿಗಳು (ವೆಚ್ಚ) ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಪಂ ಆಡಳಿತಾಧಿಕಾರಿ ಡಾ| ಪಿ.ಸಿ. ಜಾಫರ್ ಹೇಳಿದರು.
ಜಿಪಂ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಹಾಗೂ ಮಾಸಿಕ ಕೆಡಿಪಿ ಸಭೆ ನಡೆಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 310 ಶಾಲಾ ಕೊಠಡಿ ನಿರ್ಮಿಸಲು ಕೆ.ಆರ್.ಡಿ.ಎಲ್‌ನಿಂದ ಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ ರೆಡ್ಡಿ ಸಭೆಯಲ್ಲಿ ಮಾಹಿತಿ ನೀಡಿದರು.
2022-23ನೇ ಸಾಲಿನ ಕ್ರಿಯಾಯೋಜನೆಗಳಿಗೆ ಅನುಮತಿ ನೀಡಲಾಗಿದೆ. ನಿಯಮಾನುಸಾರ ಶೀಘ್ರವಾಗಿ ಟೆಂಡರ್ ಕರೆಯಬೇಕು. ಶಾಲಾ-ಕಾಲೇಜುಗಳು ಆರಂಭವಾಗಿದ್ದು, ಜಿಲ್ಲೆಯಲ್ಲಿನ ಅಂಗನವಾಡಿ, ಶಾಲಾ ಕೊಠಡಿಗಳು, ವಿದ್ಯಾರ್ಥಿ ನಿಲಯಗಳ ದುರಸ್ಥಿಗೆ ಆದ್ಯತೆ ನೀಡಬೇಕು ಎಂದು ಜಾಫರ್ ಹೇಳಿದರು.
ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ಸಲ್ಲಿಸಿದ ಪ್ರಸ್ತಾವನೆಗಳಿಗೆ ಅನುಮತಿ ನೀಡಲಾಗಿದೆ. ಈ ಇಲಾಖೆಗಳ ಸಣ್ಣ ಪುಟ್ಟ ರಿಪೇರಿ ಹಾಗೂ ನಿರ್ವಹಣೆ ಕಾರ್ಯಗಳನ್ನು ಅತಿ ಶೀಘ್ರವಾಗಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಕಟ್ಟಡಗಳ ದುರಸ್ತಿಗೆ ಕಳೆದ ವರ್ಷವೂ ಅನುದಾನ ನೀಡಲಾಗಿತ್ತು. ಈ ಅಂಗನವಾಡಿ ಕಟ್ಟಡಗಳ ಮೇಲು ಉಸ್ತವಾರಿಯನ್ನು ಉಚ್ಚ ನ್ಯಾಯಾಲಯ ನೋಡಿಕೊಳ್ಳುತ್ತಿದೆ. ಸಂಬಂಧಪಟ್ಟ ಇಂಜಿನಿಯರಿಂಗ್ ವಿಭಾಗಗಳಿಂದ ಕಾಮಗಾರಿಗಳಿಗೆ ತಾಂತ್ರಿಕ ಅನುಮೋದನೆ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಯಾಲಿಸ್ ಒಳಗಾಗುವವರ ಪ್ರಮಾಣ ಹೆಚ್ಚಾಗುತ್ತಿದೆ. ಸಿಬ್ಬಂದಿ ಹಾಗೂ ಅಗತ್ಯ ವೈದ್ಯಕೀಯ ಯಂತ್ರೋಪಕರಣಗಳ ಖರೀದಿಗೆ ಅನುಮತಿ ನೀಡಲಾಗುವುದು. ಬಾಕಿ ಇರುವ ಹೊಸದಾಗಿ ಪಡಿತರ ಚೀಟಿಗೆ ಅರ್ಜಿಗಳನ್ನು ವಿಲೇವಾರಿ ಮಾಡಿ. ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಿದ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಬೆಳೆ ಹಾನಿ ಬಗ್ಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ವಿಮಾ ಯೋಜನೆಗಳ ಬಾಕಿ ಹಣವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ಡಾ| ಕೆ. ನಂದಿನಿದೇವಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ನಗರಾಭಿವೃದ್ಧಿ ಇಲಾಖೆಯಿಂದ ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಮಳೆಗಾಲದ ಆರಂಭಕ್ಕೂ ಮುನ್ನ ಚಂಡಿಗಳ ಹೂಳು ತೆಗೆಯುವ ಕೆಲಸವಾಗಬೇಕು. ಅರಣ್ಯ ಇಲಾಖೆ ಸಾಮಾಜಿಕ ಅರಣ್ಯ ಯೋಜನೆಯಡಿ ಜೂನ್ 5 ರ ಪರಿಸರ ದಿನಾಚರಣೆಗೆ ಸಾಕಷ್ಟು ಪ್ರಮಾಣದಲ್ಲಿ ಗಿಡ ನೆಡುವ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಸಿಜೇರಿಯನ್ ಆಧಾರಿತ ಹೆರಿಗೆ ಪ್ರಮಾಣದ ಸಂಖ್ಯೆ ಹೆಚ್ಚಿದೆ. ಇದರ ತಡೆಗೆ ಅಕಾರಿಗಳು ಕ್ರಮ ಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆಗಳು, ಸ್ತ್ರೀರೋಗ ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಕೂಡ ಸಿಜೇರಿಯನ್ ಹೆರಿಗೆ ಪ್ರಮಾಣ ಹೆಚ್ಚಿರುವುದು ಕಳವಳಕಾರಿಯಾಗಿದೆ ಎಂದು ಡಾ| ಪಿ.ಸಿ. ಜಾಫರ್ ತಿಳಿಸಿದರು.