Advertisement

ಕಲಾಕ್ಷೇತ್ರ ಮಾದರಿಯಲ್ಲಿ 4 ಕಲಾಕ್ಷೇತ್ರಗಳ ನಿರ್ಮಾಣ: ಸಚಿವ ಸುನೀಲ್‌

08:34 PM Feb 02, 2022 | Team Udayavani |

ಬೆಂಗಳೂರು: ರವೀಂದ್ರ ಕಲಾಕ್ಷೇತ್ರ ಮಾದರಿಯಲ್ಲಿ ನಗರದ ಹೊರವಲಯದಲ್ಲಿ ನಾಲ್ಕು ಕಲಾಕ್ಷೇತ್ರಗಳನ್ನು ನಿರ್ಮಿಸಲು ಸರ್ಕಾರ ಚಿಂತನೆ ನಡೆಸುತ್ತಿದ್ದು, ಈಗಾಗಲೇ ಜಾಗ ಹುಡುಕುವ ಕೆಲಸ ನಡೆಯುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ಕುಮಾರ್‌ ತಿಳಿಸಿದರು.

Advertisement

ನಗರದ ಹೊರ ವಲಯದಲ್ಲಿರುವ ಕಲಾಗ್ರಾಮದಲ್ಲಿ ಬುಧವಾರ ಸುವರ್ಣ ಸಮುಚ್ಚಯ ನವೀಕೃತಗೊಂಡ ಸಭಾಂಗಣ ಹಾಗೂ “ನಾಟಕ ಬೆಂಗಳೂರು’ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರದ ಹೃದಯ ಭಾಗದಲ್ಲಿರುವ ಕಲಾಕ್ಷೇತ್ರದಲ್ಲಿಯೇ ಎಲ್ಲರೂ ಕಾರ್ಯಕ್ರಮ ನಡೆಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಲೇ ನಗರದ ಹೊರ ವಲಯದಲ್ಲಿ ಕಲಾಕ್ಷೇತ್ರಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಹೆಚ್ಚಿನ ಕಲಾವಿದರಿಗೆ ಅನುಕೂಲವಾಗಲಿದೆ. ಇನ್ನಿತರ ಬೇರೆ ಸಂದರ್ಭಗಳಲ್ಲಿಯೂ ಬಳಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಕರ್ನಾಟಕ ಸುವರ್ಣ ಮಹೋತ್ಸವ ಅಂಗವಾಗಿ 2006ರಲ್ಲಿ ಸಭಾಂಗಣವನ್ನು ಉದ್ಘಾಟಿಸಲಾಗಿತ್ತು. ಈ ಸಭಾಂಗಣವು ಕಳೆದ ಮೂರು ವರ್ಷಗಳ ಹಿಂದೆ ಬೆಂಕಿ ಬಿದ್ದು ಹಾಳಾಗಿತ್ತು. ಇದೀಗ 1.25 ಕೋಚಿ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಗೋವಾದಲ್ಲಿ ಬಿಜೆಪಿ 30 ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿಯಲಿದೆ : ಪ್ರಭು ಚವ್ಹಾಣ್

ರವೀಂದ್ರ ಕಲಾಕ್ಷೇತ್ರ, ಕಲಾಗ್ರಾಮ ಮತ್ತು ಜಿಲ್ಲಾ ರಂಗಮಂದಿರಗಳ ನಿರ್ವಹಣೆ ಕುರಿತು ಸರ್ಕಾರ ಮತ್ತು ಇಲಾಖೆಗೆ ಹಲವು ಸಲಹೆಗಳು ಬಂದಿವೆ. ಈ ಎಲ್ಲಾ ಸಲಹೆಗಳನ್ನು ಚರ್ಚಿಸಿ ಯಾವ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.

Advertisement

ಭಾಷೆ ಮತ್ತು ಸಂಸ್ಕೃತಿ ಮುಖ್ಯ ಯಾವುದೇ ನಾಗರಿಕ ಸಮಾಜ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ಭಾಷೆ ಮತ್ತು ಸಂಸ್ಕೃತಿ ಬಹಳ ಪ್ರಮುಖವಾದ ಸಂಗತಿ. ಭಾಷೆ ಮತ್ತು ಸಂಸ್ಕೃತಿ ಉತ್ತಮವಾಗಿ ನಡೆದರೆ, ನಾಗರಿಕ ಸಮಾಜ ಕೂಡ ಚೆನ್ನಾಗಿರುತ್ತದೆ. ಈ ಕಾರಣದಿಂದಲೇ ಎಲ್ಲಾ ಕಾಲಘಟ್ಟದಲ್ಲಿಯೂ ಕಲೆ, ಸಂಸ್ಕೃತಿಗೆ ಇಲಾಖೆ ಒತ್ತು ನೀಡುತ್ತಾ ಬಂದಿದೆ. ಕಲಾಗ್ರಾಮದ ಮೂಲಕ ಮತ್ತಷ್ಟು ಕಲಾವಿದರಿಗೆ ಅನುಕೂಲವಾಗಬೇಕು. ಯುವ ಪೀಳಿಗೆಯ ಕಲಾವಿದರು ಹೊಸತನದಿಂದ ಕಲಾ ಸಂಸ್ಕೃತಿಯನ್ನು ಬೆಳೆಸಬೇಕಿದೆ ಎಂದು ಹೇಳಿದರು.

ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಇಲಾಖೆ ಕೂಡ “ಅಮೃತ ಭಾರತಿಗೆ ಕನ್ನಡದ ಆರತಿ” ಎಂಬ ಶೀರ್ಷಿಕೆಯಡಿ ವರ್ಷಪೂರ್ತಿ ಕಾರ್ಯಕ್ರಮ ನಡೆಸಲಾಗುತ್ತದೆ. ಕೊರೊನಾದಿಂದ ಕಾರ್ಯಕ್ರಮ ಆರಂಭಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಕಾರ್ಯಕ್ರಮವನ್ನು ಆರಂಭಿಸಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್‌.ರಂಗಪ್ಪ, ಜಂಟಿ ನಿರ್ದೇಶಕ ಬಲವಂತರಾವ್‌ ಪಾಟೀಲ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಿರ್ದೇಶಕ ಟಿ.ಎಸ್‌. ನಾಗಾಭರಣ. ರಂಗ ನಿರ್ದೇಶಕ ಬಿ.ವಿ. ರಾಜಾರಾಂ ಉಪಸ್ಥಿತರಿದ್ದರು.

ಕಲಾಕ್ಷೇತ್ರಕ್ಕೆ ಬಾಡಿಗೆ ಹೆಚ್ಚಳ ಮಾಡದಂತೆ ಒತ್ತಾಯ
ರವೀಂದ್ರ ಕಲಾಕ್ಷೇತ್ರಕ್ಕೆ 5ರಿಂದ 10 ಸಾವಿರ ರೂ.ಗಳಿಗೆ ಬಾಡಿಗೆ ಹೆಚ್ಚಳ ಮಾಡಲಾಗುತ್ತಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಕಲಾವಿದರ ದೃಷ್ಟಿಯಿಂದ ಬಾಡಿಗೆ ಹೆಚ್ಚಳ ಮಾಡದಂತೆ ಕಲಾವಿದರು ಸಚಿವ ಸುನೀಲ್‌ಕುಮಾರ್‌ ಅವರಿಗೆ ಮನವಿ ಮಾಡಿದರು.

ಪ್ರಸ್ತುತ 3 ಸಾವಿರ ರೂ.ಗಳಿಗೆ ಕಲಾಕ್ಷೇತ್ರವನ್ನು ಕಲಾ ಚಟುವಟಿಕೆಗಳಿಗೆ ನೀಡಲಾಗುತ್ತಿದೆ. ಬಾಡಿಗೆ ಹೆಚ್ಚಳ ಮಾಡಿದರೆ, ಕಲಾವಿದರಿಗೆ ಅನ್ಯಾಯವಾಗಲಿದೆ. ರವೀಂದ್ರ ಕಲಾಕ್ಷೇತ್ರ ಕೇವಲ ಸರ್ಕಾರದಿಂದ ಮಾತ್ರ ನಿರ್ವಹಣೆಯಾಗುತ್ತಿಲ್ಲ. ಶಿವಾಜಿ ಗಣೇಶನ್‌ನಿಂದ ಹಿಡಿದು ಮಹಾನ್‌ ಕಲಾವಿದರ ಕೊಡುಗೆ ಕೂಡ ಸಾಕಷ್ಟಿದೆ ಎಂದು ಹಿರಿಯ ಕಲಾವಿದ ನಾಗರಾಜಮೂರ್ತಿ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next