Advertisement

15 ಹೊಸ ಪಾರ್ಕ್‌ಗಳ ನಿರ್ಮಾಣ, ವಾರದೊಳಗೆ ಸರ್ವೇ

07:57 PM Aug 03, 2021 | Team Udayavani |

ಮಹಾನಗರ: ನಗರದಲ್ಲಿ ಖಾಲಿ ಇರುವ ಸಾರ್ವಜನಿಕ ಜಾಗಗಳನ್ನು ಬಳಸಿಕೊಂಡು ಹೊಸ ಉದ್ಯಾನಗಳನ್ನು ನಿರ್ಮಿಸಲು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯಯೋಜನೆ ರೂಪಿಸುತ್ತಿದ್ದು, ಪ್ರಥಮ ಹಂತದಲ್ಲಿ 15 ಉದ್ಯಾನಗಳ ನಿರ್ಮಾಣವನ್ನು ಕೈಗೆತ್ತಿಗೊಳ್ಳಲು ನಿರ್ಧರಿಸಲಾಗಿದೆ.

Advertisement

ಅಭಿವೃದ್ದಿಯು ಸೇರಿದಂತೆ ವಿವಿಧ ಕಾರಣಗಳಿಂದಾಗಿ ನಗರದಲ್ಲಿ ಹಸುರು ಪರಿಸರ ಮರೆಯಾಗುತ್ತಿದೆ. ಉದ್ಯಾನಗಳ ಜಾಗಗಳು ಒತ್ತುವರಿಯಾಗಿವೆ ಇಲ್ಲವೆ ಅನ್ಯ ಉದ್ದೇಶಗಳಿಗೆ ಬಳಕೆಯಾಗಿವೆ. ಪರಿಣಾಮ ನಗರ ನಿವಾಸಿಗಳಿಗೆ ವಿರಾಮ ಮತ್ತು ವ್ಯಾಯಾಮಕ್ಕೆ ಸಾರ್ವಜನಿಕ ಪ್ರದೇಶದ ಕೊರತೆ ಕಾಡುತ್ತಿದೆ. ಇದನ್ನು ಮನಗಂಡು ಶಾಸಕ ವೇದವ್ಯಾಸ ಕಾಮತ್‌ ಅವರು ನಗರದಲ್ಲಿ ಅವಕಾಶವಿರುವ ಕಡೆಗಳಲ್ಲಿ ಉದ್ಯಾನಗಳ ನಿರ್ಮಾಣ ಪ್ರಸ್ತಾವವನ್ನು ಮುಡಾಕ್ಕೆ ಸಲ್ಲಿಸಿದ್ದರು. ಮುಡಾ ಅಧ್ಯಕ್ಷ ರವಿಶಂಕರ್‌ ಮಿಜಾರು ಅವರು ಈ ಪ್ರಸ್ತಾವನೆ ಪರಿಗಣಿಸಿ ಕಾರ್ಯಗತಗೊಳಿಸಲು ಮುಂದಾಗಿದ್ದಾರೆ.

ಮಿಯಾವಾಕಿ ಉದ್ಯಾನ:

ಮಂಗಳೂರು ನಗರದಲ್ಲಿ 5 ಸೆಂಟ್ಸ್‌ಗಿಂತ ಕಡಿಮೆ ಇರುವ ಖಾಲಿ ಜಾಗಗಳಲ್ಲಿ ಮಿಯಾವಾಕಿ ಮಾದರಿಯ ಉದ್ಯಾನಗಳನ್ನು ನಿರ್ಮಿಸಿ ಹಸುರು ಸೌಂದರ್ಯವನ್ನು ಹೆಚ್ಚಿಸುವುದು ಕಾರ್ಯಯೋಜನೆ ಯಲ್ಲಿ ಸೇರಿದೆ. ಇದನ್ನು ವೈಶಿಷ್ಠಪೂರ್ಣವಾಗಿ ನಿರ್ಮಿ ಸಲು ಮುಡಾ ಅಧ್ಯಕ್ಷರು ಚಿಂತನೆ ನಡೆಸಿದ್ದಾರೆ.

ನಗರದಲ್ಲಿ 60 ವಾರ್ಡ್‌ಗಳಿಗೆ ಪ್ರಸ್ತುತ ಇರುವ ಪ್ರಧಾನ ಉದ್ಯಾನವೆಂದರೆ ಕದ್ರಿಪಾರ್ಕ್‌ ಮಾತ್ರ. ಪಿಲಿಕುಳ ನಿಸರ್ಗಧಾಮ ಉದ್ಯಾನದ ಪರಿಕಲ್ಪನೆಗಿಂತ ಪ್ರವಾಸಿ ಮತ್ತು ಶೈಕ್ಷಣಿಕ ತಾಣವಾಗಿ ಹೆಚ್ಚು ಗುರುತಿಸಿಕೊಂಡಿದೆ. ಇವುಗಳನ್ನು ಹೊರತುಪಡಿಸಿದರೆ ಪುರಭವನದ ಮುಂಭಾಗದ ಗಾಂಧಿ ಪಾರ್ಕ್‌, ಬಾವುಟಗುಡ್ಡೆಯ ಟ್ಯಾಗೋರ್‌ ಪಾರ್ಕ್‌, ನೆಹರೂ ಮೈದಾನದ ಬಳಿ ಇರುವ ಕಾರ್ಪೋರೆಶನ್‌ ಬ್ಯಾಂಕ್‌ ಪ್ರವರ್ತಿತ ಉದ್ಯಾನ, ಮಣ್ಣಗುಡ್ಡ ಪಾರ್ಕ್‌, ವೆಲೆನ್ಸಿಯಾ ಪಾರ್ಕ್‌, ಜೆಪ್ಪು ಮಾರುಕಟ್ಟೆ ಬಳಿಯ ಉದ್ಯಾನ ಸಹಿತ ಕೆಲವು ಕಿರು ಉದ್ಯಾನಗಳಿವೆ. ದೊಡ್ಡಗಾತ್ರದ ಉದ್ಯಾನಗಳಿಗೆ ಮಂಗಳೂರಿನಲ್ಲಿ ಜಾಗದ ಸಮಸ್ಯೆ ಇದೆ. ಇದಕ್ಕೆ ಪರ್ಯಾಯವಾಗಿ ಅಲ್ಲಲ್ಲಿ ಮಿನಿ ಉದ್ಯಾನಗಳನ್ನು ಅಭಿವೃದ್ದಿಪಡಿಸಬಹುದಾಗಿದೆ. ಇಂತಹ ಪ್ರಯತ್ನಗಳು ನಗರದಲ್ಲಿ ಕೆಲವೆಡೆ ಆರಂಭವಾಗಿದೆ. ಬಿಜೈನ ವಿವೇಕಾನಂದ ಮಿನಿ ಪಾರ್ಕ್‌, ಕರಂಗಲ್ಪಾಡಿ ಆರೈಸ್‌ ಆವೇಕ್‌ ಮಿನಿ ಪಾರ್ಕ್‌ ಇದಕ್ಕೊಂದು ಮಾದರಿಯಾಗಿವೆ. ಸಣ್ಣ ವಾಕಿಂಗ ಟ್ರಾÂಕ್‌ಗಳನ್ನು ನಿರ್ಮಿಸಿ ಸಂಜೆ, ಬೆಳಗಿನ ಹೊತ್ತು ಸ್ಥಳೀಯ ನಿವಾಸಿಗಳು ಒಂದಷ್ಟು ಹೊತ್ತು ವಿರಾಮ, ವ್ಯಾಯಾಮಗಳಿಗೆ ಇವು ಉಪಯಕ್ತವಾಗಿ ಪರಿಣಾಮಿಸಿವೆ. ಉರ್ವಸ್ಟೋರ್‌ನಲ್ಲಿ ಜಿಲ್ಲಾ ಪಂಚಾಯತ್‌ ಬಳಿ ಮಿಯಾವಾಕಿ ಉದ್ಯಾನ ನಿರ್ಮಾಣವಾಗಿದೆ. ಕದ್ರಿ ಸಿಟಿ ಆಸ್ಪತ್ರೆ ಬಳಿ ಮಿನಿಪಾರ್ಕ್‌ ತಲೆಯೆತ್ತಿದೆ.

Advertisement

15 ಉದ್ಯಾನಗಳ ನಿರ್ಮಾಣ :

ನಗರದಲ್ಲಿ ಮಂಗಳೂರು ನಗರದ ದಕ್ಷಿಣ ಹಾಗೂ ಮಂಗಳೂರು ನಗರ ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳನ್ನು ಪರಿಗಣಿಸಿಕೊಂಡು ಪ್ರಥಮ ಹಂತದಲ್ಲಿ ನಾಲ್ಕು ವಾರ್ಡ್‌ಗೊಂದರಂತೆ ಉದ್ಯಾನ ನಿರ್ಮಾಣ ಮಾಡಲು ಮುಡಾ ಕಾರ್ಯಯೋಜನೆ ಸಿದ್ಧಪಡಿಸುತ್ತಿದೆ. ಶಾಸಕ ವೇದವ್ಯಾಸ ಕಾಮತ್‌ ಅವರು ಮಂಗಳೂರು ದಕ್ಷಿಣ ವ್ಯಾಪ್ತಿಯ ಪಾಲಿಕೆ ವಾರ್ಡ್‌ಗಳಲ್ಲಿ ಮಿನಿ ಹಾಗೂ ಮಧ್ಯಮ ಸಹಿತ 40 ಉದ್ಯಾನಗಳ ನಿರ್ಮಾಣ ಪ್ರಸ್ತಾವನ್ನು ಮುಡಾಕ್ಕೆ ಸಲ್ಲಿಸಿದ್ದಾರೆ. ಇದೇ ರೀತಿ ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳಿಂದಲೂ ಉದ್ಯಾನಗಳ ಪ್ರಸ್ತಾವನೆ ಪಡೆದುಕೊಂಡು ಬಳಿಕ ಮುಡಾದಿಂದ ಸರ್ವೇ ನಡೆಸಿ , ಅವಕಾಶಗಳ ಸಾಧ್ಯತೆಗಳನ್ನು ಪರಿಶೀಲಿಸಿ ಆರಂಭಿಕ ಹಂತದಲ್ಲಿ ಪ್ರತಿ ನಾಲ್ಕು ವಾರ್ಡ್‌ಗೆ ಒಂದು ಉದ್ಯಾನವನ್ನು ನಿರ್ಮಿಸಲು ನಿರ್ಧರಿಸಲಾಗಿದೆ.

ಮಂಗಳೂರು ನಗರದಲ್ಲಿ ಸಾಧ್ಯವಿರುವ ಕಡೆಗಳಲ್ಲಿ ಉದ್ಯಾನಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ 40 ಕಡೆ ಅವಕಾಶಗಳನ್ನು ಗುರುತಿಸಿ ಮುಡಾಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಮುಡಾ ಸಭೆಯಲ್ಲಿ ಇದನ್ನು ಪರಿಗಣಿಸಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಇಲ್ಲಿ ಪಾರ್ಕ್‌ಗಳ ನಿರ್ಮಾಣಕ್ಕೆ ಇರುವ ಅವಕಾಶಗಳು ಬಗ್ಗೆ ಸರ್ವೇ ನಡೆಸಿ ಮುಂದಿನ ಕ್ರಮವಾಗಲಿದೆ. ವೇದವ್ಯಾಸ ಕಾಮತ್‌, ಶಾಸಕರು

ಮನಪಾ ವ್ಯಾಪ್ತಿಯಲ್ಲಿ ಮುಡಾದಿಂದ ಉದ್ಯಾನಗಳ ನಿರ್ಮಾಣ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಶಾಸಕ ವೇದವ್ಯಾಸ ಕಾಮತ್‌ ಅವರು ಈಗಾಗಲೇ ಕೆಲವು ಪಾರ್ಕ್‌ಗಳ ಪ್ರಸ್ತಾವನೆ ನೀಡಿದ್ದಾರೆ. ಪಾಲಿಕೆಯ ಎಲ್ಲ 60 ವಾರ್ಡ್‌ಗಳಲ್ಲಿ ಸರ್ವೇ ನಡೆಸಿ, ಸಾಧ್ಯತೆಗಳನ್ನು ಪರಿಶೀಲಿಸಿ ಆರಂಭಿಕ ಹಂತದಲ್ಲಿ ಕೆಲವು ಪಾರ್ಕ್‌ಗಳ ನಿರ್ಮಾಣವನ್ನು ಕೈಗೆತ್ತಿಗೊಳ್ಳಲಾಗುವುದು.ರವಿಶಂಕರ್‌ ಮಿಜಾರ್‌ ,ಅಧ್ಯಕ್ಷರು, ಮುಡಾ

 

 -ಕೇಶವ ಕುಂದರ್‌

 

Advertisement

Udayavani is now on Telegram. Click here to join our channel and stay updated with the latest news.

Next