Advertisement

ಕಾಶಿಪಟ್ಣ: ಏಕಕಾಲದಲ್ಲಿ 3 ಕಡೆ ಕಟ್ಟ ನಿರ್ಮಾಣ

11:24 PM Jan 04, 2020 | mahesh |

ವೇಣೂರು: ಮೂಡುಬಿದಿರೆ ಧವಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 100ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಕಾಶಿಪಟ್ಣ ಗ್ರಾಮದ 3 ಕಡೆಗಳಲ್ಲಿ ನದಿ ಹಾಗೂ 2 ಕಿರುನದಿಗಳಿಗೆ ಸಾಂಪ್ರದಾಯಿಕ ಕಟ್ಟವನ್ನು ನಿರ್ಮಿಸುವ ಮೂಲಕ ಜಲ ಸಾಕ್ಷರತೆಯ ಮಹತ್ಕಾರ್ಯವನ್ನು ನಡೆಸಿದರು.

Advertisement

ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್‌ರವರ ನೇತೃತ್ವದಲ್ಲಿ ಕಾಶಿಪಟ್ಣ ಗ್ರಾ.ಪಂ. ಅಧ್ಯಕ್ಷ ಸತೀಶ್‌ ಕೆ. ಕಾಶಿಪಟ್ಣ ಅವರ ಅಧ್ಯಕ್ಷತೆಯಲ್ಲಿ ಗ್ರಾಮದ ಮಜ್ಜಾರು, ತಿಮರಡ್ಡ ಹಾಗೂ ಪರಮ್ಮ ಬೈಸರಡ್ಡದಲ್ಲಿ ಸಾಂಪ್ರದಾಯಿಕ ಕಟ್ಟ ನಿರ್ಮಿಸಲಾಯಿತು.

ಸ್ತ್ರೀ ಶಕ್ತಿ ಸಂಘಟನೆ ಸಾಥ್‌
ಕಾಶಿಪಟ್ಣ ಗ್ರಾ.ಪಂ. ಉಪಾಧ್ಯಕ್ಷೆ ಮಮತಾ ಅವರ ನೇತೃತ್ವದಲ್ಲಿ ಕಾಶಿಪಟ್ಣದ ಸ್ತ್ರೀ ಶಕ್ತಿ ಸಂಘಟನೆಯ ಸುಮಾರು 12ಕ್ಕೂ ಅಧಿಕ ಮಂದಿ ಮಹಿಳೆಯರು ವಿದ್ಯಾರ್ಥಿಗಳ ಈ ಮಹತ್ವಕಾರ್ಯಕ್ಕೆ ಕೈಜೋಡಿಸಿದರು. ಅಲ್ಲದೆ ಸ್ಥಳೀಯ ನಾಗಕರಿಕರು ಹಾಗೂ ಗ್ರಾಮ ಪಂಚಾಯತ್‌ ಸದಸ್ಯರು ಪಾಲ್ಗೊಂಡಿದ್ದರು.

ಗೋಣಿಚೀಲಕ್ಕೆ ಮರಳನ್ನು ತುಂಬಿಸಿದ ವಿದ್ಯಾರ್ಥಿಗಳು ಅದನ್ನು ಸರತಿಸಾಲಿನಲ್ಲಿ ನಿಂತ ವಿದ್ಯಾರ್ಥಿಗಳ ಕೈಯಿಂದ ಕೈಗೆ ನೀಡಿ ಕಟ್ಟಕಟ್ಟುವಲ್ಲಿಗೆ ಸಾಗಿಸಲಾಯಿತು. ಮರಳು ತುಂಬಿದ ಗೋಣಿಚೀಲವನ್ನು ನದಿಗೆ ಅಡ್ಡಲಾಗಿ ಎರಡು ಕಡೆಗಳಲ್ಲಿ ಒಂದರ ಮೇಲೆ ಒಂದರಂತೆ ವಿಮುಖವಾಗಿ ಇಟ್ಟು ಅದರ ಮಧ್ಯ ಭಾಗಕ್ಕೆ ಮಣ್ಣನ್ನು ತುಂಬಿಸಲಾಯಿತು. ಮುಂಜಾನೆ ಪ್ರಾರಂಭಗೊಂಡ ಈ ಕಾರ್ಯ ಮಧ್ಯಾಹ್ನದ ಹೊತ್ತಿಗೆ ಪೂರ್ಣಗೊಂಡಿತು.

ಪಿಡಿಒ ವಾಸುದೇವ ಕೆ.ಜಿ., ಕಾಶಿಪಟ್ಣ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪಿ.ಎಚ್‌. ಅಬ್ದುಲ್‌ ರಹಿಮಾನ್‌, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್‌ ಕೆ. ಸಾಲ್ಯಾನ್‌, ಶಿಬಿರಾಧಿಕಾರಿ ರಾಹುಲ್‌, ಸಹ ಶಿಬಿರಾಧಿಕಾರಿ ಸುದೀಪ್‌, ಕಾಶಿಪಟ್ಣ ಗ್ರಾ.ಪಂ. ಸದಸ್ಯರು ಹಾಗೂ ಊರ ನಾಗರಿಕರು ನೀರಿಂಗಿಸುವ ಈ ಮಹತ್ಕಾರ್ಯಕ್ಕೆ ಕೈಜೋಡಿಸಿದರು.

Advertisement

ನೀರಿಂಗಿಸುವ ಮಹತ್ಕಾರ್ಯ
ಕಾಶಿಪಟ್ಣ ಗ್ರಾ.ಪಂ. ಅಧ್ಯಕ್ಷ ಸತೀಶ್‌ ಕೆ. ಅವರು ಮಾತನಾಡಿ, ಬೇಸಗೆ ಕಾಲ ಬಂತೆಂದರೆ ಸಾಕು ಎಲ್ಲೆಡೆ ನೀರಿನ ಹಾಹಾಕಾರ ಪ್ರಾರಂಭವಾಗುತ್ತದೆ. ಹಿಂಗಾರು ಮಳೆಯ ವೇಳೆ ತುಂಬಿ ಹರಿಯುತ್ತಿರುವ ನದಿ, ತೋಡುಗಳಲ್ಲಿ ನೀರಿನ ಹರಿವಿನ ಪ್ರಮಾಣ ಏಕಾಏಕಿ ಕಡಿಮೆಯಾಗುತ್ತದೆ. ಈಗಾಗಲೇ ಕೆಲವೊಂದು ನದಿಗಳಲ್ಲಿ ಸಂಪೂರ್ಣ ಒಳಹರಿವು ಕ್ಷೀಣವಾಗಿದೆ. ಹೀಗಾಗಿ ನೀರಿನ ಸಂರಕ್ಷಣೆ ಮತ್ತು ಜಲಜಾಗೃತಿ ಇಂದಿನ ಅಗತ್ಯ. ಈ ನಿಟ್ಟಿನಲ್ಲಿ ಧರಣೇಂದ್ರ ಕುಮಾರ್‌ ಅವರ ಮಾರ್ಗದರ್ಶನದಂತೆ ಗ್ರಾಮದಲ್ಲಿ ನೀರಿಂಗಿಸುವ ಮಹತ್ಕಾರ್ಯ ನಡೆಸಲಾಗುತ್ತಿದೆ ಎಂದರು.

ವಿದ್ಯಾರ್ಥಿಗಳ ಸಹಕಾರ
ನಾರಾವಿ ಜಿ.ಪಂ. ವ್ಯಾಪ್ತಿಯಲ್ಲಿ ಕಳೆದ ಬಾರಿ 8ಕ್ಕೂ ಅ ಧಿಕ ಕಟ್ಟಗಳನ್ನು ನಿರ್ಮಿಸಲಾಗಿತ್ತು. ಅದರ ಪ್ರಯೋಜನ ಪಡೆದಿದ್ದ ಸ್ಥಳೀಯರು ಈ ಬಾರಿಯೂ ಕಟ್ಟ ನಿರ್ಮಿಸುವಂತೆ ಬೇಡಿಕೆ ಇರಿಸಿದ್ದಾರೆ. ಒಂದೇ ಕಡೆಯಲ್ಲಿ ಸತತ ಮೂರು ಬಾರಿ ಕಟ್ಟ ನಿರ್ಮಿಸುವುದರಿಂದ ಸ್ಥಳೀಯವಾಗಿ ನಿಷ್ಕ್ರಿಯವಾಗಿರುವ ಕೊಳವೆಬಾವಿ, ತೆರೆದ ಬಾವಿಗಳಿಗೆ ಮರುಜೀವ ಲಭಿಸುತ್ತದೆ. ಈ ಬಾರಿ 50 ಕಡೆಗಳಲ್ಲಿ ವಿವಿಧ ಕಾಲೇಜುಗಳ ಎನ್ನೆಸ್ಸೆಸ್‌ ವಿದ್ಯಾರ್ಥಿಗಳ ಸಹಕಾರ ಪಡೆದು ಕಟ್ಟ ನಿರ್ಮಿಸುವ ಯೋಜನೆ ಇದೆ.
 -ಪಿ. ಧರಣೇಂದ್ರ ಕುಮಾರ್‌, ಜಿ.ಪಂ. ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next