Advertisement

ಸಂವಿಧಾನಬದ್ಧ ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯ: ಪುರುಷೋತ್ತಮ ಮಾಸ್ತರ್‌

03:45 AM Feb 05, 2017 | |

ಬದಿಯಡ್ಕ: ಗಡಿನಾಡು ಕಾಸರಗೋಡಿನ ಅಲ್ಪಸಂಖ್ಯಾಕ ಕನ್ನಡಿಗರಿಗೆ ಸಂವಿಧಾನಬದ್ಧ ಹಕ್ಕುಗಳಿಗಾಗಿ ಹೋರಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದು ದೌರ್ಭಾಗ್ಯ. ಆದರೂ ಹಕ್ಕು ಸಂರಕ್ಷಣೆಗಾಗಿ ಅನವರತ ಹೋರಾಟಕ್ಕೆ ಬದ್ದ ಎಂದು ಹಿರಿಯ ಕನ್ನಡ ಹೋರಾಟಗಾರ, ಕನ್ನಡ ಸಮನ್ವಯ ಸಮಿತಿ ಅಧ್ಯಕ್ಷ ಪುರುಷೋತ್ತಮ ಮಾಸ್ತರ್‌ ಹೇಳಿದರು.

Advertisement

ವಿವಿಧ ಕನ್ನಡ ಪರ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ವಿವಿಧ ಗ್ರಾ.ಪಂ. ಸಹಿತ ಆಡಳಿತ ಕಚೇರಿಗಳಿಗೆ ಹಮ್ಮಿಕೊಂಡಿರುವ ಹಕ್ಕೊತ್ತಾಯ ಪ್ರತಿಭಟನ ಮೆರವಣಿಗೆ ಮತ್ತು ಸಭೆ ಅಂಗವಾಗಿ ಶನಿವಾರ ಅಪರಾಹ್ನ ಬದಿಯಡ್ಕ ಗ್ರಾ. ಪಂ. ಕಾರ್ಯಾಲಯದ ಎದುರು ನಡೆಸಿದ ಸಾರ್ವಜನಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಭಾಷಾವಾರು ಪ್ರಾಂತ್ಯ ರಚನೆಯಿಂದ ಅನ್ಯಾಯಕ್ಕೊಳಗಾದ ಗಡಿನಾಡಿನ ಕನ್ನಡಿಗರ ಸತತ ನಿರ್ಲಕ್ಷÂ ತೀವ್ರ ಹತಾಶೆಗೊಳಪಡಿಸಿವೆ. ಮಂಜೇಶ್ವರ ಮತ್ತು ಕಾಸರಗೋಡು ತಾಲೂಕುಗಳ ಎಲ್ಲ ಸ್ಥಳೀಯಾಡಳಿತ ಕಚೇರಿಗಳಲ್ಲಿ ಕನ್ನಡ ಬಲ್ಲ ನೌಕರರನ್ನು ನೇಮಿಸಬೇಕೆಂಬ ವರದಿಯನ್ನು ಮೂಲೆಗುಂಪು ಮಾಡಿರುವುದು ಅನ್ಯಾಯ ಎಂದರು.

ಗಡಿನಾಡ ಕನ್ನಡಿಗರ ತಾಳ್ಮೆ ಪರೀಕ್ಷಿಸುವ ಸರಕಾರ ಅಗತ್ಯ ಪ್ರಾತಿನಿಧ್ಯ ನೀಡದಿದ್ದಲ್ಲಿ ಬೀದಿಗಿಳಿದು ಹೋರಾಡಬೇಕಾಗುತ್ತದೆ. ಗ್ರಾ.ಪಂ. ಸಹಿತ ಆಡಳಿತ ಕಚೇರಿಗಳಲ್ಲಿ ಕನ್ನಡಿಗ ನೌಕರರು, ಅಧಿಕಾರಿಗಳನ್ನು ನೇಮಿಸಿ ಇಲ್ಲಿಯ ಕನ್ನಡಿಗರ ಶಾಸನಬದ್ಧ ಹಕ್ಕುಗಳಿಗೆ ಬೆಲೆ ನೀಡಬೇಕು ಎಂದು ಅವರು ತಿಳಿಸಿದರು.

ಕರ್ನಾಟಕ ಸಮಿತಿ ಅಧ್ಯಕ್ಷ, ನ್ಯಾಯವಾದಿ ಮುರಳೀಧರ ಬಳ್ಳುಕುರಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಡಿನಾಡು ಕಾಸರಗೋಡಿನ ಕನ್ನಡ ಮನಸ್ಸುಗಳು ಅರಳಿದಾಗ ಸಮಸ್ಯೆ ಬಗೆಹರಿಯಬಲ್ಲವು. ಹಕ್ಕು ಸಂರಕ್ಷಣೆಗೆ ಬೀದಿಗಿಳಿದು ಹೋರಾಡಬೇಕಾದ ಅನಿವಾರ್ಯತೆ ಬಂದೊದಗಿದೆ. 

Advertisement

ಕಾಸರಗೋಡಿನ ಎಲ್ಲ ಸರಕಾರಿ ಕಚೇರಿಗಳಲ್ಲಿ ಕನ್ನಡ ಬಲ್ಲ ನೌಕರರು ಮತ್ತು ಕನ್ನಡದಲ್ಲೇ ಸುತ್ತೋಲೆ, ಅರ್ಜಿ ಸಲ್ಲಿಸುವಿಕೆ ಆಗಬೇಕೆಂಬ ಸರಕಾರದ ನಿರ್ದೇಶನವಿದ್ದರೂ ಅದು ಅನುಷ್ಠಾನಗೊಳ್ಳದಿರುವುದರಲ್ಲಿ ಕನ್ನಡಿಗರ ಪ್ರಶ್ನಿಸುವಿಕೆಯ ಕೊರತೆಯಿದೆ. ಈ ಬಗ್ಗೆ ಗಟ್ಟಿ ಧ್ವನಿಯ ಬೇಡಿಕೆ ಬರಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ್‌.ವಿ. ಭಟ್‌, ಬಿ.ವಿ. ಕಕ್ಕಿಲ್ಲಾಯ, ಜಯರಾಮ ಮಂಜತ್ತಾಯ ಎಡನೀರು, ಕರ್ನಾಟಕ ಗಮಕ ಕಲಾ ಪರಿಷತ್ತು ಗಡಿನಾಡ ಘಟಕದ ಅಧ್ಯಕ್ಷ ಶಂಕರನಾರಾಯಣ ಭಟ್‌ ಟಿ., ಬ್ಲಾಕ್‌ ಪಂಚಾಯತ್‌ ಸದಸ್ಯ ಅವಿನಾಶ್‌ ರೈ, ವೆಂಕಟರಮಣ ಕೆದಿಲಾಯ, ಮೊಹಮ್ಮದಾಲಿ ಪೆರ್ಲ, ವಿ.ಬಿ. ಕುಳಮರ್ವ, ಪ್ರಭಾವತಿ ಕೆದಿಲಾಯ ಮೊದಲಾದವರು ಮಾತನಾಡಿದರು.

ಸಾರ್ವಜನಿಕ ಸಭೆಗೆ ಮೊದಲು ಬದಿಯಡ್ಕ ಕ್ಯಾಂಪ್ಕೋ ಪರಿಸರದಿಂದ ಬೃಹತ್‌ ಮೆರವಣಿಗೆ ಬದಿಯಡ್ಕ ಪ್ರಧಾನ ರಸ್ತೆಯಲ್ಲಿ ಸಾಗಿ ಗ್ರಾ.ಪಂ. ಎದುರು ಸಮಾರೋಪಗೊಂಡಿತು.

ಮೆರವಣಿಗೆಯನ್ನು ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್‌ ಉದ್ಘಾಟಿಸಿದರು. ಸಾರ್ವಜನಿಕ ಸಭೆ ಬಳಿಕ ಗ್ರಾ. ಪಂ. ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್‌ ಅವರಿಗೆ ಮನವಿ ಸಮರ್ಪಿಸಲಾಯಿತು. ಡಾ| ಬೇ.ಸಿ. ಗೋಪಾಲಕೃಷ್ಣ ಭಟ್‌ ಸ್ವಾಗತಿಸಿ, ಸಂಯೋಜಕ ರೋಹಿತ್‌ ಕುಮಾರ್‌ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next