Advertisement
1950, ಜನವರಿ 26ಈ ದಿನ ಭಾರತದ ಪಾಲಿಗೆ ಅವಿಸ್ಮರಣೀಯವಾಗಿತ್ತು. ಒಂದು ವಾರದಿಂದ ಇಡೀ ದೇಶ ಹೊಸ ಸಂಭ್ರಮಾಚರಣೆಯ ತಾಲೀಮಿನಲ್ಲಿತ್ತು. 1947ರ ಆ.15ರಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ ಇಡೀ ದೇಶ ಸಂಪೂರ್ಣವಾಗಿ ಸರಕಾರದ ಹಿಡಿತಕ್ಕೆ ಬಂದಿರಲಿಲ್ಲ. ಅಲ್ಲದೆ ಈ ಎರಡೂವರೆ ವರ್ಷಗಳ ಕಾಲ, ಸರಕಾರ ಹೇಗಿರಬೇಕು, ಭಾರತದ ಸಂವಿಧಾನ ಏನನ್ನು ಒಳಗೊಂಡಿರಬೇಕು ಎಂಬ ಬಗ್ಗೆಯಷ್ಟೇ ತಯಾರಿ ನಡೆದಿತ್ತು. ಆದರೆ ಜ.26ಕ್ಕೆ ಸರಿಯಾಗಿ ಎರಡು ತಿಂಗಳ ಹಿಂದೆ, ಅಂದರೆ ನ.26ರಂದು ದೇಶದ ಸಂವಿಧಾನವನ್ನು ಅಂಗೀಕರಿಸಲಾಗಿತ್ತು. ಆದರೆ ಇದನ್ನು 1950ರ ಜ.26ರಂದು ಇಡೀ ದೇಶಕ್ಕೇ ಅನ್ವಯವಾಗುವಂತೆ ಒಪ್ಪಿಕೊಳ್ಳಲಾಯಿತು. ಅಂದು ಇದಷ್ಟೇ ಘಟನೆ ನಡೆಯಲಿಲ್ಲ. ಅಂದು ಬೆಳಗ್ಗೆಯೇ ದೇಶದ ಗವರ್ನರ್ ಜನರಲ್ ಆಗಿದ್ದ ರಾಜಗೋಪಾಲಚಾರಿ ಅವರು, ನಿಯೋಜಿತ ರಾಷ್ಟ್ರಪತಿಯಾಗಿದ್ದ ಡಾ| ಬಾಬು ರಾಜೇಂದ್ರ ಪ್ರಸಾದ್ ಅವರಿಗೆ ಪ್ರಮಾಣವಚನ ಬೋಧಿಸಿದ್ದರು. ಬಳಿಕ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಹರಿಲಾಲ್ ಕಾನಿಯಾ ಅವರು ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ಪ್ರಮಾಣ ಸ್ವೀಕರಿಸಿದರು.
Related Articles
ಇಂದಿಗೂ ಗಣರಾಜ್ಯೋತ್ಸವವನ್ನು ಎಲ್ಲದಕ್ಕಿಂತ ಹೆಚ್ಚಾಗಿ ಸಂವಿಧಾನ ಜಾರಿಯಾದ ದಿನವೆಂದೇ ಗುರುತಿಸುತ್ತೇವೆ. ಡಾ| ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನೆಯಾಗಿದ್ದು, ಇದನ್ನು ಜ.26ರಂದು ಅಧಿಕೃತವಾಗಿ ಜಾರಿ ಮಾಡಲಾಯಿತು. ವಿಶೇಷವೆಂದರೆ, ವಿವಿಧ ಕಾರಣಗಳಿಗಾಗಿ ಭಾರತ ವೈವಿಧ್ಯಮಯವಾಗಿದ್ದು, ಸಂವಿಧಾನವೂ ಅಷ್ಟೇ ಆಸಕ್ತಿಕರ ಅಂಶಗಳನ್ನು ಒಳಗೊಂಡಿದೆ ಎಂದರೆ ತಪ್ಪಾಗಲಾರದು.
Advertisement
1. ಇಡೀ ಜಗತ್ತಿನಲ್ಲೇ ಅತ್ಯಂತ ಸುದೀರ್ಘ ಸಂವಿಧಾನ ಹೌದು, ಇಡೀ ಜಗತ್ತಿನಲ್ಲೇ ಯಾವ ದೇಶವೂ ಇಷ್ಟು ಸುದೀರ್ಘವಾದ ಸಂವಿಧಾನವನ್ನು ಒಳಗೊಂಡಿಲ್ಲ. ಇದರಲ್ಲಿ ಪೀಠಿಕೆ, 22 ವಿಭಾಗ, 448 ಪರಿಚ್ಛೇದಗಳು, 15 ಶೆಡ್ನೂಲ್‌ಗಳು, 5 ಅಪೆಂಡಿಕ್ಸ್ ಮತ್ತು 105 ತಿದ್ದುಪಡಿಗಳನ್ನು ಒಳಗೊಂಡಿದೆ. 2. ಹಿಂದಿ-ಇಂಗ್ಲಿಷಿನಲ್ಲಿದೆ
ಸಂವಿಧಾನ ಗ್ರಂಥ ಸುದೀರ್ಘವಾಗಿದ್ದರೂ ಇದನ್ನು ಸಂಪೂರ್ಣವಾಗಿ ಕೈಬರಹ ದಲ್ಲಿಯೇ ಬರೆಯಲಾಗಿತ್ತು. ಅಲ್ಲದೆ ಇದು ಸಂಪೂರ್ಣವಾಗಿ ಹಿಂದಿ ಮತ್ತು ಇಂಗ್ಲಿಷಿ ನಲ್ಲಿದೆ. ಅಲ್ಲದೆ ಇದರಲ್ಲೇ ಸಂವಿಧಾನ ಸಮಿತಿಯ ಸದಸ್ಯರೆಲ್ಲರ ಸಹಿಗಳೂ ಇವೆ. ಅಂದ ಹಾಗೆ ಇದನ್ನು ಚಂದವಾಗಿ ಬರೆದವರು ಪ್ರೇಮ್ ಬೇಹರಿ ನಾರಾಯಣ್ ರಾಯ್‌ಜಾದಾ. ಇದು ಕಾಲಿಗ್ರಾಫ್ ಫಾಂಟ್ ಮಾದರಿಯಲ್ಲಿ ಇದೆ. 3. ಪ್ರತಿಯೊಂದು ಪೇಜ್ ಕೂಡ ಒಪ್ಪ ಓರಣದಲ್ಲಿದೆ
ಸಂವಿಧಾನದ ಪ್ರತಿಯೊಂದು ಪುಟವೂ ಆಕರ್ಷಕ ವಾಗಿದೆ. ಅಂದರೆ, 1946ರಲ್ಲೇ ಸಂವಿಧಾನ ರಚನೆಗೆ ಮುನ್ನುಡಿ ಬರೆಯಲಾಯಿತು. ಅತ್ತ ಪಶ್ಚಿಮ ಬಂಗಾಲದ ಶಾಂತಿ ನಿಕೇತನದಲ್ಲಿರುವ ಪ್ರಸಿದ್ಧ ವಿಶ್ವಭಾರತಿ ಶಾಲೆಯ ನಂದ ಲಾಲ್ ಬೋಸ್ ನೇತೃತ್ವದಲ್ಲಿ ಕಲಾಕಾರರು ಸಂವಿಧಾನದ ಪ್ರತೀ ಪುಟವನ್ನು ಅಂದಗಾಣಿಸುವ ಹೊಣೆ ಹೊತ್ತರು. ಹರಪ್ಪ ನಾಗರಿಕತೆಯಿಂದ ಹಿಡಿದು, ಇಡೀ ದೇಶದ ಇತಿ ಹಾಸವನ್ನು ಪ್ರತೀ ಪುಟದಲ್ಲೂ ಚಿತ್ರರೂಪದಲ್ಲಿ ಬರೆದಿದ್ದಾರೆ. 4. ವಿಶೇಷ ಭದ್ರತೆಯಲ್ಲಿ ಮೂಲಪ್ರತಿಗಳು
ಭಾರತ ಸಂವಿಧಾನದ ಮೂರು ಮೂಲ ಪ್ರತಿಗಳು ಇವೆ. ಇವುಗಳನ್ನು ಸಂಸತ್ತಿನ ಕೇಂದ್ರ ಗ್ರಂಥಾಲಯದಲ್ಲಿ ಇರಿಸಲಾಗಿದೆ. ಮೂರು ಕೊಠಡಿಗಳಲ್ಲಿ ಇವುಗಳನ್ನು ಇಡಲಾಗಿದ್ದು, ಭಾರೀ ಭದ್ರತೆ ಒದಗಿಸಲಾಗಿದೆ. ಸಂವಿಧಾನದ ಮೂಲ ಪ್ರತಿಯು 22 ಇಂಚು ಉದ್ದ ಮತ್ತು 16 ಇಂಚು ಅಗಲವಿದೆ. ಚರ್ಮಕಾಗದ ಮತ್ತು ಹಸ್ತಪ್ರತಿಯಲ್ಲಿ ಬರೆದಿದ್ದು, 251 ಪುಟಗಳಿವೆ. ಹೀಗಾಗಿ ಹೀಲಿಯಂ ಗ್ಲಾಸ್‌ನ ಬಾಕ್ಸ್ ಮಾಡಿ ಇಡಲಾಗಿದೆ. 5. 3 ವರ್ಷಗಳ ಪ್ರಕ್ರಿಯೆ
ಭಾರತದ ಸಂವಿಧಾನವನ್ನು ಬರೆಯಲು ಸುಮಾರು 3 ವರ್ಷ ತೆಗೆದುಕೊಳ್ಳಲಾಗಿದೆ. ಸಂವಿಧಾನ ರಚನಾ ಸಮಿತಿಯು ಸಮಗ್ರ ಚರ್ಚೆ ನಡೆಸಿ, ಸಂವಿಧಾನದಲ್ಲಿ ಏನಿರಬೇಕು, ಏನನ್ನು ಸೇರಿಸಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಅಂದ ಹಾಗೆ ಡಾ| ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಮಿತಿಯು ಕರಡು ಪ್ರತಿಯೊಂದನ್ನು ಪಾರ್ಲಿಮೆಂಟ್ ಮುಂದೆ ಇಟ್ಟಿತು. ಇದರಲ್ಲಿ ಸುಮಾರು 2 ಸಾವಿರ ತಿದ್ದುಪಡಿ ಮಾಡಲಾಯಿತು. ಅಂದರೆ 1949ರ ನ.11ರಿಂದ ನ.26ರ ವರೆಗೆ ಸುಮಾರು 11 ದಿನಗಳ ಅಧಿವೇಶನ ನಡೆದು ಕಡೆಯ ದಿನ ಸಂವಿಧಾನಕ್ಕೆ ಒಪ್ಪಿಗೆ ನೀಡಲಾಯಿತು. 6. ವಿವಿಧ ರಾಷ್ಟ್ರಗಳಿಂದ ಪ್ರೇರಣೆ
ನಿರ್ದೇಶನ ತಣ್ತೀಗಳನ್ನು ಐರ್ಲೆಂಡ್‌ನಿಂದ, ಸಂಪುಟವನ್ನು ಒಳಗೊಂಡ ಸರಕಾರ ಹೇಗಿರಬೇಕು, ಕೆಳಮನೆಯ ಹೊಣೆಗಾರಿಕೆ ಏನು ಎಂಬುದನ್ನು ಬ್ರಿಟನ್‌ನಿಂದ, ಸುಪ್ರೀಂ, ನಮ್ಮ ಮೂಲಭೂತ ಹಕ್ಕುಗಳು, ಉಪ ರಾಷ್ಟ್ರಪತಿ ಹೊಣೆಗಾರಿಕೆಗಳ ಕುರಿತ ಅಂಶಗಳನ್ನು ಅಮೆರಿಕದಿಂದ, ತುರ್ತುಪರಿಸ್ಥಿತಿಯ ಅಂಶಗಳನ್ನು ಜರ್ಮನಿ, ಸ್ವಾತಂತ್ರ್ಯ, ಸಮಾನತೆಯನ್ನು ಫ್ರಾನ್ಸ್, ಸುಪ್ರೀಂನ ಕಾರ್ಯದ ಬಗ್ಗೆ ಜಪಾನ್‌ದಿಂದ ತೆಗೆದುಕೊಳ್ಳಲಾಗಿದೆ. ಪೀಠಿಕೆಗೆ ಅಮೆರಿಕ ಸಂವಿಧಾನ ಪ್ರೇರಣೆ. 7. ಸಂವಿಧಾನ ಸುಡಲು ಸಿದ್ಧ ಎಂದಿದ್ದ ಅಂಬೇಡ್ಕರ್
ಸಂವಿಧಾನ ರಚನೆಯಾಗಿ ಮೂರು ವರ್ಷಗಳ ತರುವಾಯ, ಸಂವಿಧಾನ ರಚನೆಗೆ ಕಾರಣರಾಗಿದ್ದ ಡಾ| ಬಿ.ಆರ್.ಅಂಬೇಡ್ಕರ್ ಅವರೇ ಅದನ್ನು ಸುಡುವ ಬಗ್ಗೆ ಮಾತನಾಡಿದ್ದರು. 1953ರಲ್ಲಿ ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದ ಅವರು, ನಾನೇ ನನ್ನ ಕೈಯಾರೆ ಸಂವಿಧಾನವನ್ನು ಸುಡಲು ಸಿದ್ಧವಿದ್ದೇನೆ ಎಂದು ಆಕ್ರೋಶ ಭರಿತರಾಗಿ ಹೇಳಿದ್ದರು. ಇದಕ್ಕೆ ಕಾರಣ, ಸಂವಿಧಾನದಲ್ಲಿದ್ದ ಕೆಲವೊಂದು ಅಂಶಗಳನ್ನು ಸರಕಾರ ಈಡೇರಿಸಿರಲಿಲ್ಲ. ಅಲ್ಲದೆ, ರಾಜ್ಯಗಳಲ್ಲಿನ ರಾಜ್ಯಪಾಲರ ಅಧಿಕಾರ ಮತ್ತು ಭಾರತಕ್ಕೆ ಸಂಸದೀಯ ವ್ಯವಸ್ಥೆ ಸರಿಹೊಂದುವುದಿಲ್ಲ ಎಂಬುದಾಗಿತ್ತು. 8. ಭಾರತ ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರ
ಸಂವಿಧಾನದ ಪೀಠಿಕೆಯಲ್ಲೇ ಭಾರತ ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರ ಎಂದು ಘೋಷಿಸಲಾಗಿದೆ. 1976ರಲ್ಲಿ 42ನೇ ತಿದ್ದುಪಡಿಯಾಗಿ ಸಮಾಜವಾದಿ ಮತ್ತು ಜಾತ್ಯತೀತ ಎಂಬ ಪದಗಳನ್ನು ಪೀಠಿಕೆಯಲ್ಲಿ ಸೇರಿಸಲಾಯಿತು. ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು, ದೇಶದಲ್ಲಿ ತುರ್ತು ಪರಿ ಸ್ಥಿತಿ ಘೋಷಿಸಿದ್ದ ಸಂದರ್ಭದಲ್ಲಿ ಈ ಎರಡು ಪದಗಳನ್ನು ಸೇರ್ಪಡೆ ಮಾಡಿದರು. 9. ಸಂವಿಧಾನದ ಮೇಲೆ ಸಹಿ
1950ರ ಜ.24ರಂದು ಸಂವಿಧಾನದ ಪ್ರತಿಗಳ ಮೇಲೆ 616 ಮಂದಿ ಸಹಿ ಹಾಕಿದರು. ಹಿಂದಿ ಮತ್ತು ಇಂಗ್ಲಿಷ್ ಪ್ರತಿಗಳೆರಡರ ಮೇಲೆ ಅಸೆಂಬ್ಲಿಯ 308 ಮಂದಿ ಸಹಿ ಹಾಕಿದರು. ಕಡೆಗೆ ಸಹಿ ಹಾಕಿದವರು ಫಿರೋಜ್ ಗಾಂಧಿ. ಇವರು ದೇವನಾಗರಿ ಮತ್ತು ರೋಮನ್‌ನಲ್ಲಿ ಸಹಿ ಹಾಕಿದರೆ, ಅಬ್ದುಲ್ ಕಲಾಂ ಅಜಾದ್, ಉರ್ದುವಿನಲ್ಲಿ, ಪುರುಷೋತ್ತಮ ದಾಸ್ ಟಂಡನ್ ಅವರು ದೇವನಾಗರಿಯಲ್ಲಿ ಸಹಿ ಹಾಕಿದರು. ಉಳಿದಂತೆ ಎಲ್ಲರೂ ಇಂಗ್ಲಿಷ್‌ನಲ್ಲೇ ಸಹಿ ಮಾಡಿದರು. 10. ಭಾರತ ಮತ್ತು ಇಂಡಿಯಾ
ನಮ್ಮ ಸಂವಿಧಾನವೇ ದೇಶಕ್ಕೆ ಭಾರತ ಮತ್ತು ಇಂಡಿಯಾ ಎಂಬ ಹೆಸರುಗಳನ್ನು ನೀಡಿದೆ. ಸಂವಿಧಾನದ ಮೊದಲ ಪರಿಚ್ಛೇದದಲ್ಲಿಯೇ ಇಂಡಿಯಾ, ಅಂದರೆ ಭಾರತವು ರಾಜ್ಯಗಳನ್ನು ಒಳಗೊಂಡ ದೇಶ ಎಂದು ಕರೆಯಲಾಯಿತು. ವಿಶೇಷವೆಂದರೆ, ನಮ್ಮ ಸಂವಿಧಾನವನ್ನು ಇಂದಿಗೂ ಜೀವಂತ ಸಂವಿಧಾನ ಎಂದು ಕರೆಯಲಾಗುತ್ತಿದೆ. ಇದಕ್ಕೆ ಕಾರಣ, ಕಾಲಕಾಲಕ್ಕೆ ಸಂವಿಧಾನದಲ್ಲಿ ತಿದ್ದುಪಡಿ ತರುವ ಅವಕಾಶವನ್ನು ನೀಡಲಾಗಿದೆ. ಹೀಗಾಗಿಯೇ ಇದುವರೆಗೆ 105 ತಿದ್ದುಪಡಿಗಳಾಗಿವೆ.