ವಾಡಿ: ಕೋಮುವಾದದ ವಿಷ ಬೀಜ ಬಿತ್ತಿ ಅಧಿಕಾರಕ್ಕೇರಲು ಹಪಹಪಿಸುತ್ತಿರುವ ಬಿಜೆಪಿ ಸಂವಿಧಾನದ ಕಗ್ಗೊಲೆ ಮಾಡಲು ಹೊರಟಿದೆ ಎಂದು ಆರೋಪಿಸಿ ದಲಿತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಡಾ| ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದ ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ಹಾಗೂ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಕಾರ್ಯಕರ್ತರು, ಬಿಜೆಪಿ ವಿರುದ್ಧಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕರ ಬಹುಮತವಿಲ್ಲದೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಸರಕಾರ ರಚನೆ ಮಾಡಿರುವ ಯಡಿಯೂರಪ್ಪ ರಾಜ್ಯದ ಜನರ ಕ್ಷಮೆಯಾಚಿಸುವ ಮೂಲಕ ಕೂಡಲೇ ಅಧಿಕಾರದಿಂದ ಪದತ್ಯಾಗ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಹಾಗೂ ವಾಡಿ-ಶಹಾಬಾದ ನಗರ ಯೋಜನೆ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಸೇನ ಮೇನಗಾರ, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಯಾವುದೇ ಪಕ್ಷಕ್ಕೆ ಬಹುಮತವಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ನಡೆಸುವುದಾಗಿ ಘೋಷಿಸಿ ರಾಜ್ಯಪಾಲರಿಗೆ ಪತ್ರ ಸಲ್ಲಿಸಿವೆ. ಅಗತ್ಯ ಸಂಖ್ಯಾಬಲ ಇಲ್ಲದ ಬಿಜೆಪಿ ತರಾತುರಿಯಲ್ಲಿ ಪ್ರಮಾಣವಚನ ಸ್ವೀಕರಿಸಿದೆ. ಬಹುಮತ ಸಾಬೀತಿಗೆ ಕಾಂಗ್ರೆಸ್-ಜೆಡಿಎಸ್ ಶಾಸಕರ ಖರೀದಿಗೆ ಮುಂದಾಗಿರುವ ಬಿಜೆಪಿ, ಸಂವಿಧಾನದ ಕಗ್ಗೊಲೆಗೆ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್-ಜೆಡಿಎಸ್ ಶಾಸಕರು ಹಣಕ್ಕೆ ತಮ್ಮನ್ನು ಮಾರಿಕೊಳ್ಳದೆ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟು ಬಾಬಾಸಾಹೇಬರ ಸಂವಿಧಾನ ರಕ್ಷಿಸಬೇಕು. ಸಂವಿಧಾನ ವಿರೋಧಿಗಳಿಗೆ ಬೆಂಬಲವಾಗಿ ನಿಂತರೆ ನಿಮ್ಮ ವಿರುದ್ಧವೂ ಹೋರಾಟ ನಡೆಸಲಾಗುವುದು ಎಂದು ದಲಿತ ಮುಖಂಡರು ಎಚ್ಚರಿಕೆ ನೀಡಿದರು.
ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ವಿಕ್ರಮ ನಿಂಬರ್ಗಾ, ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸೈದಾಪುರ, ಅಲ್ತಾಫ್ ಸೌದಾಗರ, ಇಂದ್ರಜೀತ ಸಿಂಗೆ, ಹರೀಶ್ಚಂದ್ರ ಕರಣಿಕ, ಶರಣಬಸು ಸಿರೂರಕರ, ಸೂರ್ಯಕಾಂತ ರದ್ದೇವಾಡಿ, ಆನಂದ ಬಡಿಗೇರ, ಗೋಪಾಲ ರಾಠೊಡ, ರಮೇಶ ಬಡಿಗೇರ, ವಿಜಯಕುಮಾರ ಸಿಂಗೆ,
ರಾಹುಲ ಮೇನಗಾರ, ಗೌತಮ ಬೇಡೆಕರ, ವಿಜಯಕುಮಾರ ಯಲಸತ್ತಿ, ಮಲ್ಲಿಕಾರ್ಜುನ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.