ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್‌ರ 62ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಸರ್ಕಾರಿ ಶಾಲೆ ಮಕ್ಕಳನ್ನು ಕೇಂದ್ರಕ್ಕೆ ಆಹ್ವಾನಿಸಿ ಅಂಬೇಡ್ಕರ್ ಚಿಂತನೆಗಳನ್ನು ತಲುಪಿಸುವ ವಿಶಿಷ್ಟ ಕಾರ್ಯಕ್ರಮ ನಡೆಸಿತು.
ಬಿ.ಎಂ.ಗಿರಿರಾಜ್ ನಿರ್ದೇಶನದ “ಭಾರತ ಭಾಗ್ಯವಿಧಾತ’ ದೃಶ್ಯರೂಪಕ ಪ್ರದರ್ಶನದ ಮೂಲಕ ಅಂಬೇಡ್ಕರ್‌ರ ಜೀವನಗಾಥೆ ಪರಿಚಯ ಮಾಡಿತು. ಅಂಬೇಡ್ಕರ್‌ರ ಬಹುಬಗೆ ಛಾಯಾಚಿತ್ರಗಳನ್ನು ಮಕ್ಕಳು ಕುತೂಹಲದಿಂದ ವೀಕ್ಷಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಕೇಂದ್ರ ಊರೂರಿನತ್ತ ಅಂಬೇಡ್ಕರ್, ಕಾಲೇಜುಗಳತ್ತ ಅಂಬೇಡ್ಕರ್ ಚಿಂತನೆಗಳನ್ನು ಪಸರಿಸುತ್ತಿದೆ. ಅದರ ಮುಂದುವರಿದ ಭಾಗವಾಗಿ ಶಾಲಾ ಮಕ್ಕಳನ್ನು ಕೇಂದ್ರಕ್ಕೆ ಆಹ್ವಾನಿಸಿ ಅಂಬೇಡ್ಕರ್ ಚಿಂತನೆಗಳನ್ನು ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರದ ಸಂಯೋಜಕ ಡಾ.ಎಸ್.ನರೇಂದ್ರಕುಮಾರ್ ತಿಳಿಸಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಈ.ಧನಂಜಯ ಎಲಿಯೂರು ಅವರೊಂದಿಗೆ ಮಕ್ಕಳು ಸಂವಾದ ನಡೆಸಿದರು. ಸಮಾರಂಭ ಉದ್ಘಾಟಿಸಿದ ಮೈಸೂರು ವಿವಿ ಪ್ರಭಾರ ಕುಲಪತಿ ಪೊ›.ಸಿ.ಬಸವರಾಜು, ಸಾಮಾಜಿಕ ನ್ಯಾಯವನ್ನು ನುಂಗುತ್ತಿರುವ ಖಾಸಗೀಕರಣ, ಜಾಗತೀಕರಣ, ಉದಾರೀಕರಣವನ್ನು ಸಂವಿಧಾನದ ಚೌಕಟ್ಟಿಗೆ ತರಬೇಕು. ಖಾಸಗಿ ವಲಯದಲ್ಲಿ ದಲಿತರು, ಶೋಷಿತರು, ಬಡವರಿಗೆ ಪ್ರಾತಿನಿಧ್ಯ ಕೊಡಲು ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕೆಂದರು.
ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ, ರಾಜಕೀಯ ಪ್ರಜಾಪ್ರಭುತ್ವವನ್ನು ಸಂವಿಧಾನದಲ್ಲಿ ಕೊಡಲಾಗಿದ್ದರೂ ಈವರೆಗೂ ಅನುಷ್ಠಾನಕ್ಕೆ ಬಂದಿಲ್ಲ. ದೇಶದ ಸಂಪತ್ತು ಸಮಾನವಾಗಿ ಹಂಚಿಕೆಯಾಗಿಲ್ಲ. ದಲಿತರು, ಶೋಷಿತರು ಇಂದಿಗೂ ಶೋಷಣೆಯಲ್ಲಿಯೇ ಬದುಕುತ್ತಿದ್ದಾರೆ ಎಂದು ಹೇಳಿದರು.
ಸಂವಿಧಾನದ ಬಗ್ಗೆ ಸಾಮಾನ್ಯ ತಿಳವಳಿಕೆ ಇಲ್ಲದೇ ಕೆಲವರು ಮಾತನಾಡುತ್ತಿದ್ದಾರೆ. ಸಂವಿಧಾನದ ಮೂಲ ಆಶಯವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂಬುದನ್ನು ಮಾತನಾಡುವವರು ತಿಳಿದುಕೊಳ್ಳಬೇಕು ಎಂದರು. ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಎನ್.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಮಾನಸ ಗಂಗೋತ್ರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಅಲ್ಲದಾಸಯ್ಯ ಮತ್ತಿತರರು ಉಪಸ್ಥಿತರಿದ್ದರು.