ವಿಜಯಪುರ: ವಿಶ್ವದಲ್ಲೇ ಲಿಖೀತ ಸಂವಿಧಾನ ಹೊಂದಿರುವ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹಿರಿಮೆ ಭಾರತಕ್ಕಿದೆ ಎಂದು ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಡಾ| ಬಿ.ಆರ್. ಅಂಬೇಡ್ಕರ್ ಅವರ 127ನೇ ಜಯಂತಿ ನಿಮಿತ್ತ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಮಾತನಾಡಿದ ಅವರು, ಸಂವಿಧಾನ ಜನತೆಗೆ ಸಮಾನತೆ ಒದಗಿಸಿದೆ ಎಂದರು.
ಭಾರತದ ಪ್ರತಿಯೊಬ್ಬ ಪ್ರಜೆಗೆ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಸಮಾನತೆಯನ್ನು ಸಂವಿಧಾನ ನೀಡಿದ್ದು, ಈ ರಾಷ್ಟ್ರ ಕಂಡಿರುವ ಪ್ರತಿಯೊಬ್ಬ ಮೇಧಾವಿ ನಾಯಕರ ಆದರ್ಶಗಳು ಮತ್ತು ಆಲೋಚನೆಗಳು ಇದರಲ್ಲಿ ಅಡಗಿವೆ. ವಿಶೇಷವಾಗಿ ಡಾ| ಅಂಬೇಡ್ಕರ್ ಅವರ ಕೊಡುಗೆ ಅವಿಸ್ಮರಣೀಯ ಹಾಗೂ ಅನುಕರಣೀಯ ಎಂದರು.
ಭಾರತದ ಗೌರವಯುತ ಸಂವಿಧಾನದಿಂದಾಗಿ ವಿಶ್ವದಲ್ಲಿ ಪ್ರಗತಿಸಾಗಿಸುತ್ತಿದ್ದೇವೆ. ಇನ್ನೂ ಸಾಧಿಸಬೇಕಾದ ಸಾಧನೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರು ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು.
ಸಂವಿಧಾನದ ಘನತೆ ಧ್ಯೇಯೋದ್ದೇಶ ಎತ್ತಿ ಹಿಡಿಯಬೇಕಿದೆ. ಸಂವಿಧಾನದಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಯ ಪ್ರತಿಫಲವಾಗಿ ಈ ದೇಶದ ಮುಂಚೂಣಿ ಬ್ಯಾಂಕ್ ಆಗಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಸ್ಥಾಪನೆಯಾಗಿದೆ.
ಮೇಧಾವಿ ಜ್ಞಾನಿಯಾಗಿದ್ದ ಡಾ| ಬಿ.ಆರ್. ಅಂಬೇಡ್ಕರ್ ಅವರು ವಿಶ್ವದಶ್ರೇಷ್ಠ ಜ್ಞಾನಿ ಎನಿಸಿದ್ದರು. ಇಂಥ ಮಹಾನ್ ನಾಯಕರ ಎಲ್ಲರ ಬದುಕಲ್ಲಿ ಆದರ್ಶಗಳಾಗಲಿ ಎಂದರು. ಜಿಪಂ ಸಿಇಒ ಎಂ.ಸುಂದರೇಶಬಾಬು, ಎಸ್ಪಿ ಪ್ರಕಾಶ ನಿಕ್ಕಂ, ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳು ಇದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ವಂದಿಸಿದರು.
ಇದಕ್ಕೂ ಮುನ್ನ ನಗರದ ಡಾ| ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣನವರ, ಜಿಪಂ ಸಿಇಒ ಎಂ.ಸುಂದರೇಶಬಾಬು, ಎಸ್ಪಿ ನಿಕ್ಕಂ ಪ್ರಕಾಶ, ಸಮಾಜದ ಮುಖಂಡರಾದ ಅಭಿಷೇಕ ಚಕ್ರವರ್ತಿ, ಮಹೇಶ ಕ್ಯಾತನ್, ಸುಶಿಲೇಂದ್ರ ಮಾನಕರ, ಗಣೇಶ ಕಬಾಡೆ, ಪ್ರದೀಪ ಕ್ಯಾತನ್, ಬಾಬು ಪ್ರಭಾಕರ, ಹಾಜಿಲಾಲ್ ಕಬಾಡೆ, ಶ್ರೀಶೈಲ ಮಾನಕರ, ಬಿ.ಎಚ್. ನಾಡಗೇರಿ, ಬಸಂತ ಗುಣದಾಳ, ಕೊರಪ್ಪ ಚಲವಾದಿ, ಬಿ.ಟಿ. ವಾಗೊರೆ, ಪ್ರಕಾಶ ಕಟ್ಟಿಮನಿ, ಡಿ.ಸಿ. ಹರಿಜನ ಇದ್ದರು.