Advertisement

ನಂಜಿನ ಕಣ್ಣಿಂದ ನೋಡ್ತಿದ್ದಾರೆ ಸಂವಿಧಾನ

10:46 AM Nov 27, 2017 | Team Udayavani |

ಕಲಬುರಗಿ: ದೇಶದ ಸಂರಕ್ಷಣೆಗೆ ಬರೆದ ಸಂವಿಧಾನವನ್ನೇ ಸಂಘರ್ಷಕ್ಕೀಡುವ ಮಾಡುವಂತಹ ಕೆಲಸ ನಡೆದಿದೆ. ಶೇ.
85ರಷ್ಟಿರುವ ಮೂಲನಿವಾಸಿಗಳನ್ನು ಕೇವಲ ಶೇ.3ರಷ್ಟಿರುವ ರಾಜಕೀಯ ಪ್ರೇರಿತ ಜನರು ಆಳುತ್ತಿದ್ದಾರೆ. ಇದರಿಂದ
ಅಪಾಯ ಖಂಡಿತ ಇದೆ ಎಂದು ದಲಿತ ಹಿರಿಯ ನಾಯಕ ವಿಠ್ಠಲ ದೊಡ್ಡಮನಿ ಹೇಳಿದರು.

Advertisement

ಇಲ್ಲಿನ ಕನ್ನಡ ಭವನದಲ್ಲಿ ರವಿವಾರ ಕಲಬುರಗಿ ವಿಭಾಗ ಪರಿಶಿಷ್ಟ ಜಾತಿ-ಪಂಗಡ ಸರಕಾರಿ ನೌಕರರ ಸಂಘ ಹಾಗೂ ಶ್ರೀನಿಧಿ-ಸುಪ್ರೀತ್‌ ಪ್ರಕಾಶನ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲಿಯವರೆಗೆ ಈ ದೇಶದಲ್ಲಿ ಮೂಲನಿವಾಸಿಗಳು ಒಂದಾಗುವುದಿಲ್ಲವೋ ಅಲ್ಲಿಯವರೆಗೆ ಪದೇ ಪದೇ ಸಂವಿಧಾನದ ಮೇಲೆ, ನಮ್ಮ ನಂಬಿಕೆಗಳ ಮೇಲೆ ಮತ್ತು ನಮ್ಮ ಅಸ್ತಿತ್ವದ ಮೇಲೆ ದಾಳಿಗಳು ನಡೆಯುತ್ತಿರುತ್ತವೆ. ಇವತ್ತು ಸಂವಿಧಾನವನ್ನು ನಂಜಿನ ಕಣ್ಣಿನಿಂದ ನೋಡುವುದನ್ನು ಆರಂಭಿಸಿದ್ದಾರೆ. ಮುಂದೆ ಇದರ ಅವಶ್ಯಕತೆ ಇಲ್ಲ ಎಂದು ಹೇಳುವ ಮನಸ್ಥಿತಿಯ ಜನರು ದೇಶದ ರಾಜಕೀಯ ಚುಕ್ಕಾಣಿ ಹಿಡಿದು ನಮ್ಮನ್ನು ಒಕ್ಕಲೆಬ್ಬಿಸುವ ಅಪಾಯವಿದೆ ಎಂದರು.

ಶ್ರೀನಿಧಿ- ಸುಪ್ರೀತ್‌ ಪ್ರಕಾಶನದ ಮಾಲೀಕ ವಿಠ್ಠಲ್‌ ವಗ್ಗನ್‌ ಮಾತನಾಡಿ, ಇವತ್ತು ಗೋ ಮಧುಸೂಧನ ಮತ್ತು ಪೇಜಾವರ ಶ್ರೀಗಳು ಸಂವಿಧಾನದ ಕುರಿತು ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ. ಮಧುಸೂಧನ ಅವರು ಸಂವಿಧಾನದ ದೆಸೆಯಿಂದ ಪ್ರಜಾಪ್ರತಿನಿಧಿಯಾಗಿ ಆಯ್ಕೆಯಾಗಿ ಅಧಿಕಾರದ ಲಾಭ ಉಂಡು ಈಗ ಈ ರೀತಿ ಮಾತನಾಡುವುದು ಸರಿಯಲ್ಲ. ಇದನ್ನು ಅರ್ಥ ಮಾಡಿಕೊಂಡು ದಲಿತರು ಹಾಗೂ ಹಿಂದುಳಿದವರು ಎಚ್ಚರಿಕೆಯಿಂದ ಮುನ್ನಡೆಯಬೇಕಿದೆ ಎಂದರು. 

ವಕೀಲ ಹಾಗೂ ದಲಿತ ಸಂಘರ್ಷ ಸಮಿತಿಯ ಹಣಮಂತ ಯಳಸಂಗಿ ಮಾತನಾಡಿ, ರಾಜಕೀಯ, ಶಿಕ್ಷಣ ಹಾಗೂ ಆರ್ಥಿಕ ಸಮಾನತೆ ನಮ್ಮ ತಳ ಸಮುದಾಯಕ್ಕೆ ಸಿಕ್ಕಿಲ್ಲ ಎನ್ನುವುದು ಈ ದೇಶದ ದುರಂತಗಳಲ್ಲಿ ಒಂದು. ಸಂವಿಧಾನದಲ್ಲಿ ಪ್ರಧಾನಿಗೂ ಒಂದು ಮತ, ಜನ ಸಾಮಾನ್ಯನಿಗೂ ಒಂದೇ ಮತ ಎಂದು ಹೇಳಲಾಗಿದೆ.
ಎಲ್ಲರಿಗೂ ಅಧಿಕಾರ ನೀಡಿದೆ. ಆದರೆ, ಕೆಲವರು ಮನುಶಾಸನ ತರಲು ಹೊರಟಿದ್ದಾರೆ. ಇದನ್ನು ತಳ ವರ್ಗದ
ಸುಶಿಕ್ಷಿತರು, ವಿಚಾರ ವಂತರು ಹಾಗೂ ಹೋರಾಟಗಾರರು ವಿರೋಧಿಸಬೇಕು ಎಂದರು.

Advertisement

ಡಾ| ಐ.ಎಸ್‌. ವಿದ್ಯಾಸಾಗರ ವಿಷಯ ಮಂಡನೆ ಮಾಡಿದರು. ಬಿ.ಎಚ್‌.ಭಜಂತ್ರಿ, ಬಸಲಿಂಗಪ್ಪಾ ಅಲ್ಲಾಳ, ಶಶಿಕಾಂತ ಹೋಳಲ್ಕರ್‌, ಉದಯಕುಮಾರ ಗಾಯಕವಾಡ ಇತರರು ಇದ್ದರು. 

ಭಾರತ ಸಂವಿಧಾನ ಜಗತ್ತಿನಲ್ಲೇ ಶ್ರೇಷ್ಠ : ಕೆಲವರಿಗೆ ಇಷ್ಟು ದಿನ ಸಂವಿಧಾನದ ಮೇಲೆ ಇಲ್ಲದ ಅನುಮಾನವಿತ್ತು. ಇವತ್ತು ಸಂವಿಧಾನ ಮತ್ತು ಅದನ್ನು ಬರೆದ ಬಾಬಾ ಸಾಹೇಬರ ಮೇಲೆ ಆ ಅನುಮಾನ ಶುರುವಾಗಿದೆ. 1940ರಲ್ಲಿ ಸಂವಿಧಾನ ರಚನಾ ಸಮಿತಿಯ 14ನೇ ಸಭೆಯಲ್ಲಿ ಸಂವಿಧಾನ ರಚನಾ ಸಮಿತಿಯಲ್ಲಿ ಒಬ್ಬರಾಗಿದ್ದ ಕೃಷ್ಣಮಾಚಾರ್ಯ ಅಯ್ಯರ್‌ ಹೇಳಿರುವಂತೆ ಸಮಿತಿಯಲ್ಲಿ ಒಬ್ಬ ಸದಸ್ಯರು ಅನಾರೋಗ್ಯದಿಂದ ಸಾವನ್ನಪ್ಪಿದರು. ಇಬ್ಬರು ವಿದೇಶಕ್ಕೆ ಹೋದರು, ಇನ್ನಿಬ್ಬರು ರಾಜಕೀಯ ಕಾರಣ ನೀಡಿ ಹಿಂದೆ ಸರಿದರು.

ಆಗ ಉಳಿದವರು ಸಂವಿಧಾನ ಡ್ರಾಫ್ಟಿಂಗ್‌ ಸದಸ್ಯರಾದ ಬಾಬಾ ಸಾಹೇಬರೊಬ್ಬರೇ.. ಆದರೂ ಅವರು ಸಂವಿಧಾನ ಬರೆದು ಒಪ್ಪಿಸಿದರು. ಆಸ್ಟಿನ್‌ ಎನ್ನುವ ಸಂವಿಧಾನ ತಜ್ಞ ಮತ್ತು ಸಂಶೋಧಕ ತನ್ನ ಬರಹದಲ್ಲಿ ಭಾರತ ಸಂವಿಧಾನ ಜಗತ್ತಿನ ಎಲ್ಲ ಸಂವಿಧಾನಗಳಿಗಿಂತ ಶ್ರೇಷ್ಠವಾಗಿದೆ ಮತ್ತು ಪ್ರಜಾತಾಂತ್ರಿಕವಾಗಿದೆ ಎಂದು ಬಣ್ಣಿಸಿದ್ದಾರೆ. ಆದರೂ ಇಂದಿನ ಕೆಲವರಿಗೆ ಇದು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವುದು ವಿಷಾಧನೀಯ.
ವಿಠ್ಠಲ್‌ ವಗ್ಗನ್‌, ಶ್ರೀನಿಧಿ- ಸುಪ್ರೀತ್‌ ಪ್ರಕಾಶನದ ಮಾಲೀಕ

Advertisement

Udayavani is now on Telegram. Click here to join our channel and stay updated with the latest news.

Next