ಬೀದರ: ಬಾಬಾ ಸಾಹೇಬ್ ಅಂಬೇಡ್ಕರ ರಚಿತ ಸಂವಿಧಾನ ಭಾರತೀಯರ ರಾಜ್ಯಾಂಗ ಧರ್ಮವಾಗಿದೆ ಎಂದು ಹಿರಿಯ ಸಾಹಿತಿ ಚಂದ್ರಪ್ಪಾ ಹೆಬ್ಟಾಳಕರ ಹೇಳಿದರು.
ನಗರದ ಮಾತೋಶ್ರೀ ರಮಾಬಾಯಿ ಪ್ರೌಢಶಾಲೆಯಲ್ಲಿ ಮಾನವ ಬಂಧುತ್ವ ವೇದಿಕೆ ಗಣರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸಂವಿಧಾನದ ಆಶಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಾಂಗದ
ಅಡಿಯಲ್ಲಿ ಆಡಳಿತ ನಡೆಸಬೇಕಿದೆ. ಸಂವಿಧಾನ ಹಕ್ಕು, ಕರ್ತವ್ಯ ಮತ್ತು ಅಂಬೇಡ್ಕರರ ದೇಶ ಪ್ರೇಮ ಪ್ರತಿಯೊಬ್ಬರಲ್ಲಿ ಮೂಡುವಂತಹ ವಾತಾವರಣ ನಿರ್ಮಿಸಬೇಕು ಎಂದರು.
ಸಾಹಿತಿ ಸುಬ್ಬಣ್ಣ ಕರಕನಳ್ಳಿ ಮಾತನಾಡಿ, ಸಂವಿಧಾನದ ಸಮಕ್ಷಮದಲ್ಲಿ ಮಂತ್ರಿ ಸ್ಥಾನ ಪಡೆದು ಸಂವಿಧಾನದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವವರು ಮೊದಲು ಸಂವಿಧಾನ ಓದಲಿ. ಸಂವಿಧಾನದ ಮೂಲಕ ಸಮಾನ ಪ್ರಜಾ ಪ್ರಭುತ್ವದ ದೀಕ್ಷೆ ಪಡೆದ 125 ಕೋಟಿ ಭಾರತೀಯರು ಸಮಾನ ಸ್ಥಾನ, ಸಮಾನ ಪ್ರಗತಿ, ಸಮಾನ ಸಂರಕ್ಷಣೆ ಪಡೆಯುವುದು ಹಕ್ಕಾಗಿದೆ ಎಂದು ಹೇಳಿದರು.
ವೇದಿಕೆಯ ಜಿಲ್ಲಾ ಸಂಚಾಲಕ ಮಹೇಶ ಗೋರನಾಳಕರ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಸ್ವೀಕರಿಸಬೇಕು. ಆಹಾರ, ನೀರು ಹೇಗೆ ಮುಖ್ಯವೋ ಶಿಕ್ಷಣ ಅಷ್ಟೆ ಪ್ರತಿ ಮನುಷ್ಯನಿಗೆ ಮುಖ್ಯ. ಇಂದಿನ ವಿದ್ಯಾರ್ಥಿಗಳು ಮುಂದೆ ದೇಶ ಆಳುವ ಪ್ರಜೆಗಳು ಮತ್ತು ಪ್ರತಿನಿಧಿಗಳು ಆಗಿದ್ದಾರೆ ಎಂದರು.
ಸಂಸ್ಥೆಯ ಅಧ್ಯಕ್ಷೆ ಪ್ರೇಮಲಾ ಡಾಂಗೆ ಮಾತನಾಡಿ, ತಂದೆ-ತಾಯಿಗಳು ಕಷ್ಟಪಟ್ಟು ಮಕ್ಕಳಿಗೆ ಶಿಕ್ಷಣ ಕಲಿಸುತ್ತಿದ್ದಾರೆ. ಮಕ್ಕಳು ತಂದೆ-ತಾಯಿಗಳಿಗೆ ಕೀರ್ತಿ ತರುವ ಮತ್ತು ಸಮಾಜದಲ್ಲಿ ಉನ್ನತ ಸ್ಥಾನ ಮಾನಕ್ಕೆ ಕೊಂಡೊಯ್ಯುವ ಕಾರ್ಯ ಮಾಡಬೇಕು ಎಂದು ಹೇಳಿದರು. ಮುಖ್ಯಶಿಕ್ಷಕ ಬಸವರಾಜ ಮಸಕಲೆ, ಶಾಖಾ ಜಗನಾಥ, ಪ್ರಾಂಶುಪಾಲ ಮಂಗಲಾ ದರ್ಜೆ ಇದ್ದರು. ಪ್ರಾಣೇಶ ಭಾಗವತ ನಿರೂಪಿಸಿದರು. ಶಾಮರಾವ್ ಮೋರ್ಗಿಕರ್ ವಂದಿಸಿದರು. ವೇದಿಕೆ ಪ್ರಮುಖರಾದ ಅರುಣ ಪಟೇಲ್, ಅಮರ ಅಮಲಾಪೂರ, ಶಿವಕುಮಾರ ಗುನ್ನಳ್ಳಿ ಇದ್ದರು.