Advertisement

ಸಂವಿಧಾನ ಅರಿತರೆ ಅಪರಾಧ ಮುಕ್ತ ದೇಶ

05:02 PM Nov 27, 2018 | Team Udayavani |

ದಾವಣಗೆರೆ: ಪ್ರತಿಯೊಬ್ಬರು ಸಂವಿಧಾನವನ್ನು ಓದಿಕೊಂಡರೆ ದೇಶ ಅಪರಾಧ ಮುಕ್ತ ದೇಶವಾಗಿ ಬದಲಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ. ಅಂಬಾದಾಸ್‌ ಕುಲಕರ್ಣಿ ಅಭಿಪ್ರಾಯಪಟ್ಟರು.

Advertisement

ರೋಟರಿ ಬಾಲಭವನದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮುಸ್ಲಿಂ ಜನಾಂಗಕ್ಕೆ ಕುರಾನ್‌, ಕ್ರಿಶ್ಚಿಯನ್ನರಿಗೆ ಬೈಬಲ್‌ ಈ ರೀತಿ ವಿವಿಧ ಜನಾಂಗಕ್ಕೆ ಒಂದೊಂದು ಗ್ರಂಥವಿದ್ದರೂ, ಭಾರತದ ಸಂವಿಧಾನ ಮಾತ್ರ ದೇಶದ ಎಲ್ಲಾ ವರ್ಗದ ಜನರ ಪವಿತ್ರ ಗ್ರಂಥವಾಗಿದೆ. ಕನ್ನಡ, ಹಿಂದಿ, ಉರ್ದು, ಆಂಗ್ಲ ಮುಂತಾದ ಭಾಷೆಗಳಲ್ಲಿ ಇದೆ. ಹಾಗಾಗಿ ದೇಶದ ಪ್ರತಿಯೊಬ್ಬರು ಭಾರತದ ಸಂವಿಧಾನ ಓದಿ ಅರ್ಥಮಾಡಿಕೊಂಡು ಮುನ್ನಡೆಯಬೇಕು. ಆಗ ದೇಶ ಅಪರಾಧ ಮುಕ್ತ ದೇಶವಾಗಲಿದೆ ಎಂದರು.

1915ಕ್ಕೂ ಮುಂಚೆ ಕಾನೂನು ದಿನಾಚರಣೆ ಆಚರಿಸಲಾಗುತ್ತಿತ್ತು. ತದನಂತರ ಈ ದಿನಾಚರಣೆಯನ್ನು ಸಂವಿಧಾನ ದಿನವಾಗಿ ಆಚರಿಸಲಾಯಿತು. ನೆಹರು ದೇಶದ ಪ್ರಧಾನಮಂತ್ರಿ ಆಗಿದ್ದ ಸಂದರ್ಭದಲ್ಲಿ ಭಾರತ ಸಂವಿಧಾನದ ಕರಡು ತಯಾರಿಯ ಜವಾಬ್ದಾರಿ ನಿರ್ವಹಿಸಿದ ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ 1949ರ ನ. 26ರಂದು ಸಂವಿಧಾನವನ್ನು ಸಂಪೂರ್ಣವಾಗಿ ತಯಾರು ಮಾಡಿ ಶೋಷಿತರ, ದಮನಿತರ, ಎಲ್ಲಾ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವಲ್ಲಿ ಯಶಸ್ವಿಯಾದರು ಎಂದು ತಿಳಿಸಿದರು.

ಪ್ರತಿಯೊಬ್ಬರಿಗೂ ಸಮಾನತೆ, ಮೂಲಭೂತ ಹಕ್ಕು, ಕರ್ತವ್ಯಗಳನ್ನು ಸಂವಿಧಾನ ದೊರಕಿಸಿಕೊಟ್ಟಿದೆ. ಅಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಬೇಕು. ಆಗ ಸಮಾಜದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಯುತ್ತದೆ ಎಂದು ಹೇಳಿದರು.

Advertisement

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಮಾತನಾಡಿ, ಪ್ರತಿಯೊಬ್ಬರಿಗೂ ಕಡ್ಡಾಯ ಶಿಕ್ಷಣ, ಸಮಾನತೆ, ಕೂಲಿ ನೀಡಿ ಆರ್ಥಿಕ ಮುಗ್ಗಟ್ಟು ನಿವಾರಿಸಿ ಅಕ್ಷರಸ್ಥರನ್ನಾಗಿಸುವ ಆಶೋತ್ತರಗಳನ್ನು ಭಾರತದ ಸಂವಿಧಾನ ಹೊಂದಿದೆ. ಎಲ್ಲರೂ ತಮ್ಮ ಹಕ್ಕು ಮತ್ತು ಕರ್ತವ್ಯ ಸಮರ್ಪಕವಾಗಿ ನಿರ್ವಹಿಸಿದ್ದರೆ ಎಲ್ಲಾ ರೀತಿಯ ನ್ಯಾಯ ಸಿಗುತ್ತಿತ್ತು. ಅದು ಆಗದ ಕಾರಣ ಈ ರೀತಿಯ ಸಂವಿಧಾನ ದಿನಾಚರಣೆ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಕಾರ್ಮಿಕರು, ನೊಂದವರು, ಬಾಲಕರು, ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು, ಪ್ರಕೃತಿ ವಿಕೋಪಕ್ಕೆ ತುತ್ತಾದ ಸರ್ವರಿಗೂ ಉಚಿತವಾಗಿ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತಿದೆ. ಇದರ  ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್‌.ಟಿ. ಮಂಜುನಾಥ್‌ ಮಾತನಾಡಿ, ದೇಶದಲ್ಲಿ ಎಲ್ಲಾ ರೀತಿಯ ವರ್ಗ, ಧರ್ಮ, ಆಚರಣೆಯ ಜನರಿದ್ದು, ಈ ಎಲ್ಲದರ ನಿರ್ವಹಣೆಗೆ ವ್ಯವಸ್ಥಿತ ಚೌಕಟ್ಟನ್ನು ಸಂವಿಧಾನ ಹಾಕಿಕೊಟ್ಟಿದೆ. ಮನೆಯ ನಿರ್ವಹಣೆಯಂತೆ ಇಡೀ ದೇಶವನ್ನು ವ್ಯವಸ್ಥಿತವಾಗಿ ಕೊಂಡೊಯ್ಯಲು ಸಂವಿಧಾನ ಸಹಕಾರಿಯಾಗಿದೆ ಎಂದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌.ಎಚ್‌. ಅರುಣ್‌ಕುಮಾರ್‌ ಮಾತನಾಡಿ, ಸಂವಿಧಾನ ಕಾಪಾಡುವ ಹೊಣೆ ಈ ದೇಶದ ದಮನಿತ ವರ್ಗದವರ ಮೇಲಿದೆ. ದೇಶ ಕೇವಲ ಮಣ್ಣು, ಕಾಡು, ನದಿಗಳಿಂದ ಕೂಡಿಲ್ಲ, ತನ್ನದೇ ಆದ ಪರಂಪರೆ,
ಸಂಸ್ಕೃತಿ, ಧರ್ಮ, ಆಚರಣೆಗಳಿಂದ ಕೂಡಿದೆ. ಇದನ್ನ ಪ್ರತಿಯೊಬ್ಬರು ಅರ್ಥ ಮಾಡಿಕೊಂಡರೆ ಸಂವಿಧಾನ ಆಶಯ ಈಡೇರುತ್ತದೆ ಎಂದು ಹೇಳಿದರು.

ಸಂವಿಧಾನ ಜನರಿಗೆ ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ನೀಡಿದೆ. ಸಮಾಜದಲ್ಲಿ ತುಳಿದಕ್ಕೆ ಒಳಗಾದ ಜನರನ್ನು ಮುಖ್ಯವಾಹಿನಿಗೆ ತರಲು ಮೀಸಲಾತಿ ಸೌಲಭ್ಯ ಕೊಟ್ಟಿದೆ. ಹಾಗಾಗಿ ಸಂವಿಧಾನವನ್ನು ಪ್ರತಿಯೊಬ್ಬರು ಗೌರವಿಸಬೇಕು. ನಮ್ಮ ಹಕ್ಕು ಕೇಳುವ ರೀತಿ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಹೇಳಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನ ಅಧ್ಯಕ್ಷೆ ಜಬೀನಾ ಖಾನಂ ಅಧ್ಯಕ್ಷತೆ ವಹಿಸಿದ್ದರು. ಸಬ್ರಿàನ್‌ ತಾಜ್‌ ಪ್ರಾರ್ಥಿಸಿದರು. ಅನ್ವರ್‌ ಖಾನ್‌ ಸ್ವಾಗತಿಸಿದರು. ಎಂ. ಕರಿಬಸಪ್ಪ ನಿರೂಪಿಸಿದರು. 

ಸಂವಿಧಾನ ಬದಲಾವಣೆ ಸಾಧ್ಯವೇ ಇಲ್ಲ
ಭಾರತದ ಸಂವಿಧಾನವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಾದ ಅಕ್ಷರಸ್ಥರೇ ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಬರೀ ಅಪಸ್ವರ ಬರುವಂತೆ ನಡೆದುಕೊಳ್ಳುತ್ತಿದ್ದಾರೆ. ಸಂವಿಧಾನ ಸಮಾನತೆಯ ಆತ್ಮವಿದ್ದಂತೆ. ಸರ್ವರಿಗೂ ಸಮಬಾಳು, ಸಮಪಾಲು ಕಲ್ಪಿಸುವುದು ಇದರ ಮುಖ್ಯ ಆಶಯವಾಗಿದೆ. ಅದನ್ನು ಅರ್ಥ ಮಾಡಿಕೊಳ್ಳದ ಕೆಲವರು ಸಂವಿಧಾನ ಪ್ರತಿ ಸುಡಲು ಮುಂದಾದ ನಿದರ್ಶನಗಳಿವೆ.

ಸಂವಿಧಾನದ ಮೂಲ ಸ್ವರೂಪ ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಸಂವಿಧಾನ ಗೌರವಿಸಿದರೆ ದೇಶವನ್ನೇ ಗೌರವಿಸಿದಂತೆ. ಸಂವಿಧಾನ ಸುಡುವುದು ದೇಶವನ್ನೇ ಸುಡುವ ಕೆಲಸ. ಇದನ್ನು ಪ್ರತಿಯೊಬ್ಬ ಭಾರತೀಯ ಪ್ರಜೆ ಅರ್ಥಮಾಡಿಕೊಳ್ಳಬೇಕು ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌. ಎಚ್‌. ಅರುಣ್‌ಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next