Advertisement

ಸದೃಢ ಭಾರತ ನಿರ್ಮಾಣಕ್ಕೆ ಸಂವಿಧಾನ ಸಹಕಾರಿ: ಅಂಬ್ರೆಪ್ಪ

06:57 PM Sep 15, 2022 | Team Udayavani |

ಬೀದರ: ಡಾ| ಅಂಬೇಡ್ಕರ್‌ ರಚಿಸಿದ ಸಂವಿಧಾನದಿಂದಾಗಿ ಭಾರತ ಸದೃಢ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಅಂಬ್ರೆಪ್ಪ ಹೇಳಿದರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಸಿದ್ಧಾರ್ಥ ಪದವಿ ಮಹಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ಭಾರತ ರತ್ನ ಡಾ| ಬಿ.ಆರ್‌. ಅಂಬೇಡ್ಕರ್‌ ಓದು ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದೆ. ಸಂವಿಧಾನವು ಸರ್ವರಿಗೂ ಸಮಾನ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಿದೆ ಎಂದು ತಿಳಿಸಿದರು. ಡಾ| ಅಂಬೇಡ್ಕರ್‌ ಅವರು ಬಹಳ ಕಷ್ಟಪಟ್ಟು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದರು. ಅವರ ಬದುಕು ಎಲ್ಲರಿಗೂ ಮಾದರಿಯಾಗಬೇಕು ಎಂದು ಹೇಳಿದರು.

ಸಾಹಿತಿ ಎಸ್‌.ಬಿ. ಕುಚಬಾಳ್‌ ಮಾತನಾಡಿ, ಇಂದಿನ ಯುವ ಪೀಳಿಗೆ ಡಾ| ಅಂಬೇಡ್ಕರ್‌ ಅವರ ಜೀವನ ಹಾಗೂ ಸಾಧನೆ ಅರಿಯಬೇಕು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಮಾತನಾಡಿ, ವಿದ್ಯಾರ್ಥಿಗಳು, ಯುವಜನರಿಗೆ ಡಾ| ಅಂಬೇಡ್ಕರ್‌ ಅವರ ಜೀವನ ಪರಿಚಯಿಸಲು ಇಲಾಖೆಯಿಂದ ಅಂಬೇಡ್ಕರ್‌ ಓದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವರ್ಷ ಜಿಲ್ಲೆಯಲ್ಲಿ ಐದು ಕಾರ್ಯಕ್ರಮಗಳು ನಡೆಯಲಿವೆ. ಅಂಬೇಡ್ಕರ್‌ ಅವರು ಬಹಳಷ್ಟು ಪದವಿಗಳನ್ನು ಪಡೆದುಕೊಂಡಿದ್ದರು. ನಿತ್ಯ ಸುದೀರ್ಘ‌ ಅವಧಿಗೆ ಅಧ್ಯಯನ ಮಾಡುತ್ತಿದ್ದರು. ವಿದ್ಯಾರ್ಥಿಗಳು ಅಂಬೇಡ್ಕರ್‌ ಆದರ್ಶ ಪಾಲಿಸಬೇಕು. ಈ ಮೂಲಕ ತಮ್ಮ ಭವಿಷ್ಯ ಉಜ್ವಲಗೊಳಿಸಬೇಕು ಎಂದರು.

Advertisement

ಪ್ರಾಚಾರ್ಯ ಪ್ರೊ| ಗೋಪಾಲ್‌ ಬಡಿಗೇರ್‌ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಸ್ವಾಮಿ ಹಾಗೂ ತಂಡದವರು ನಾಡಗೀತೆ ಹಾಗೂ ಜನಪದ ಗೀತೆಗಳನ್ನು ಹಾಡಿದರು. ರಾಜಕುಮಾರ ಶಿಂಧೆ ನಿರೂಪಿಸಿದರು. ಡಾ| ಅಂಬೇಡ್ಕರ್‌ ಅವರ ಬದುಕು-ಬರಹ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ 8 ಸಾವಿರ ರೂ. ಮೌಲ್ಯದ ಪುಸ್ತಕಗಳನ್ನು ಬಹುಮಾನ ರೂಪದಲ್ಲಿ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next