Advertisement

ಸಂವಿಧಾನ-ಪ್ರಜಾಪ್ರಭುತ್ವ ರಕ್ಷಣೆಗಾಗಿ ಕಾಂಗ್ರೆಸ್‌ ಗೆಲ್ಲಿಸಿ

04:50 PM Apr 17, 2019 | pallavi |

ಹರಪನಹಳ್ಳಿ: ಸಾಮಾಜಿಕ ನ್ಯಾಯ, ಧರ್ಮನಿರಪೇಕ್ಷತೆ, ಐಕ್ಯತೆ, ಸಮಗ್ರತೆ ಹಾಗೂ ಸರ್ವ ಸಮುದಾಯದ ಅಭ್ಯುದಯ ಬಯಸುವ ಭಾರತದ ಸಂವಿಧಾನವನ್ನು ಬದಲಿಸುವ ಷಡ್ಯಂತ್ರ ರಚಿಸಿರುವ ಬಿಜೆಪಿ ತಿರಸ್ಕರಿಸಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆಗಾಗಿ ಕಾಂಗ್ರೆಸ್‌ಗೆ ಮತ ನೀಡಿ ಎಂದು
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್‌.ಬಿ.ಮಂಜಪ್ಪ ಮನವಿ ಮಾಡಿದರು.

Advertisement

ತಾಲೂಕಿನ ತೆಲಗಿ, ನೀಲಗುಂದ, ಚಿರಸ್ತಳ್ಳಿ, ಗುಂಡಗತ್ತಿ, ಯಡಿಹಳ್ಳಿ, ರಾಗಿಮಸಲವಾಡ, ಶಿಂಗ್ರಿಹಳ್ಳಿ, ಲಕ್ಷ್ಮೀಪುರ, ಹಿರೇಮೇಗಳಗೇರಿ, ಕಂಚಿಕೇರಿ, ಅಡವಿಹಳ್ಳಿ ಗ್ರಾಪಂ ವ್ಯಾಪ್ತಿಗಳಲ್ಲಿ ಮತಯಾಚಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್‌ ಜಾತ್ಯತೀತ ಮೌಲ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತಾ ಬಂದಿದೆ.

ಪಟ್ಟಭದ್ರ ಹಿತಾಸಕ್ತಿಗಳಿಂದ ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದ ಈ ನೆಲದ ಮೂಲ ನಿವಾಸಿಗಳಾಗಿರುವ ದಲಿತರು, ಹಿಂದುಳಿದ ವರ್ಗ ಮತ್ತು ಮಹಿಳೆಯರ ಸ್ವಾಭಿಮಾನ ರಕ್ಷಣೆ ಹಾಗೂ ಅವರ ಬದುಕಿನ ಭದ್ರತೆಗಾಗಿ ಇಂದಿರಾಗಾಂಧಿಯವರ ನೇತೃತ್ವದಲ್ಲಿ 20 ಅಂಶಗಳ ಕಾರ್ಯಕ್ರಮ ಕೊಟ್ಟಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನ್ನಭಾಗ್ಯ, ವಿದ್ಯಾಸಿರಿ, ಕ್ಷೀರಭಾಗ್ಯದಂತಹ ಹಲವಾರು ಭಾಗ್ಯಗಳನ್ನು ನೀಡಿ ಸಹಕಾರಿ ಕ್ಷೇತ್ರದ ರೈತರ ಸಾಲಮನ್ನಾ ಮಾಡಿತ್ತು. ಮೈತ್ರಿ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ.

ನಾವು ಸಾಧನೆ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದರೆ, ಬಿಜೆಪಿ ಅಭ್ಯರ್ಥಿ ಮೋದಿ ಫೋಟೋ ತೋರಿಸಿ ಮತ ಕೇಳುತ್ತಿದ್ದಾರೆ. ಇದನ್ನು ಮತದಾರರು ಗಮನಿಸಿ ಮತ ಚಲಾಯಿಸಬೇಕೆಂದರು. ಕೆಪಿಸಿಸಿ ಮಹಿಳಾ ಘಟಕ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ಸಾಮಾನ್ಯ ಕುಟುಂಬದಿಂದ ಬಂದಿರುವ ಎಚ್‌.ಬಿ.ಮಂಜಪ್ಪನವರು ರಾಜಕಾರಣದಲ್ಲಿ ಬದ್ಧತೆ ಇಟ್ಟುಕೊಂಡವರು. ಮಂಜಪ್ಪ ಅವರಂಥ ಸರಳ ಮತ್ತು ಸಾತ್ವಿಕರನ್ನು ರಾಜಕಾರಣದಲ್ಲಿ ಉಳಿಸಿಕೊಳ್ಳದೆ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮುಂದೊಂದು ದಿನ ದೊಡ್ಡ ಕೊಡಲಿ ಏಟು ಬೀಳಲಿದೆ ಎಂದರು.

ಇದೇ ಸಂಧರ್ಭದಲ್ಲಿ ಪುರಸಭೆಯ ಮಾಜಿ ಸದಸ್ಯ ಗುಡಿ ನಾಗರಾಜ್‌ ಬಿಜೆಪಿ ತೊರೆದು ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್‌ ಗೆ ಸೇರ್ಪಡೆಯಾದರು. ಜಿಪಂ ಸದಸ್ಯ ಎಚ್‌.ಬಿ.ಪರಶುರಾಮಪ್ಪ, ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿ.ಅಂಜಿನಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೇಲೂರು ಅಂಜಪ್ಪ, ಮುಖಂಡರಾದ ಡಿ.ಅಬ್ದುಲ್‌ ರೆಹಮಾನ, ಟಿ.ವೆಂಕಟೇಶ, ಮುತ್ತಿಗಿ ಜಂಬಣ್ಣ, ಚಿಕ್ಕೇರಿ ಬಸಪ್ಪ, ಎಚ್‌.ವಸಂತಪ್ಪ, ಸಿ.ಜಾಯೇದ, ವಾಗೀಶ ರಾಯದುರ್ಗ, ರವಿ ಯುವಶಕ್ತಿ ಪಡೆಯ ಅಧ್ಯಕ್ಷ ಯಡಿಹಳ್ಳಿ ಉದಯಶಂಕರ, ಪಿ.ಪ್ರೇಮಕುಮಾರಗೌಡ, ಲಾಟಿ ದಾದಾಪೀರ, ಶೃಂಗಾರತೋಟ ಬಸವರಾಜ, ಎಂ.ಡಿ.ನಜೀರ, ಮಾಡ್ಲಗೇರಿ ಅಶೋಕ, ಎಲ್‌.ಮಂಜಾನಾಯ್ಕ, ಇರ್ಫಾನ್‌ ಮುದಗಲ್‌ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next