ಕೊಪ್ಪಳ: ಪೆಟ್ರೋಲ್, ಡೀಸೆಲ್ ತೈಲ ಬೆಲೆ ಏರಿಕೆ ಖಂಡಿಸಿ ಜೂ.20 ರಂದು ಕೊಪ್ಪಳ ಜಿಲ್ಲೆಯ ಐದೂ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಹೇಳಿದರು.
ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಿದೆ. ಸರ್ಕಾರ ತಾವು ಮಾಡಿದ ತಪ್ಪು ಸಮರ್ಥಿಸುತ್ತಿದೆ. ಇದು ದುರಂತದ ಸಂಗತಿ. ಹಿಂದೆ ಸಿದ್ದರಾಮಯ್ಯ ಅವರು ಬೆಲೆ ಏರಿಕೆ ಬಗ್ಗೆ ಮಾತನಾಡಿದ್ದು ಮರೆತಿದ್ದಾರೆ ಎಂದು ಹೇಳಿದರು.
ಜೂ.20 ರಂದು ಪ್ರತಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಲೆ ಏರಿಕೆ ವಿರುದ್ದ ಪ್ರತಿಭಟನೆ ಮಾಡಲಿದ್ದೇವೆ. ಗ್ರಾಮೀಣದಲ್ಲಿಯೂ ನಾವು ಪ್ರತಿಭಟನೆ ಮಾಡಲಿದ್ದೇವೆ. ಕೇಂದ್ರ ಈಗ ಯಾವುದೇ ಬೆಲೆ ಏರಿಕೆ ಮಾಡಿಲ್ಲ. ರಾಜ್ಯ ಸರ್ಕಾರ ಗ್ಯಾರಂಟಿ ತೂಗಿಸಲು ಬೆಲೆ ಏರಿಕೆ ಮಾಡುತ್ತಿದೆ ಎಂದರು.
ನಾವು ಈ ಮಟ್ಟದಲ್ಲಿ ಏರಿಕೆ ಮಾಡಿಲ್ಲ. ನಮ್ಮ ರಾಜ್ಯದ ಬೆಲೆ ಏಷ್ಟಿದೆ ಎಂದು ನಾವು ನೋಡಬೇಕಿದೆ. ಗ್ಯಾರಂಟಿ ತೂಗಿಸಲು ಖಾಸಗಿ ಸಂಸ್ಥೆ ಸಲಹೆ ಪಡೆದಿದ್ದಾರೆ. 15 ಬಾರಿ ಬಜೆಟ್ ಮಂಡಿಸಿದ ಹಾಗೂ ಆರ್ಥಿಕ ಸಲಹೆ ನೀಡುವವರು ಇದ್ದರೂ ಸಹ ತೈಲ ಬೆಲೆ ಏರಿಕೆ ಮಾಡಿದ್ದಾರೆ. ಬೇರೆ ಸಂಘ ಸಂಸ್ಥೆಗಳು ಸಹಭಾಗಿತ್ವದಲ್ಲಿ ಮುಂದೆ ಪ್ರತಿಭಟನೆ ಮಾಡಲಿದ್ದೇವೆ ಎಂದರು.
ಎಂಎಲ್ಸಿ ಹೇಮಲತಾ ನಾಯಕ್ ಮಾತನಾಡಿ, ಕೊಪ್ಪಳದಲ್ಲಿ ಸರಗಳ್ಳತನ ನಡೆಯುತ್ತಿವೆ. ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಲಿ ಎಂದು ಒತ್ತಾಯ ಮಾಡಿದರು.
ಬಿಜೆಪಿ ಮುಖಂಡ ಡಾ. ಬಸವರಾಜ ಕೆ, ವಕ್ತಾರ ಮಹೇಶ ಹಾದಿಮನಿ, ಪ್ರಸಾದ್ ಗಾಳಿ ಉಪಸ್ಥಿತಿ ಇದ್ದರು.