Advertisement

ಷಡ್ಯಂತ್ರ ಮಾಡಿದವರನ್ನು ಬೆತ್ತಲೆಗೊಳಿಸುವೆ

03:45 AM Feb 20, 2017 | Team Udayavani |

ಹಾವೇರಿ: “ಕೆಲವರು ರಾಜಕೀಯವಾಗಿ ನನ್ನನ್ನು ತುಳಿಯಲು ಷಡ್ಯಂತ್ರ ಮಾಡುತ್ತಿದ್ದಾರೆ. ಅವರನ್ನೆಲ್ಲ ಮುಂದಿನ ದಿನಗಳಲ್ಲಿ ಬೆತ್ತಲೆಗೊಳಿಸುವ ಕೆಲಸ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧಿಗಳ ವಿರುದ್ಧ ಗುಡುಗಿದರು. ರಾಣಿಬೆನ್ನೂರು ನಗರದ ಮುನ್ಸಿಪಲ್‌ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಉಣ್ಣೆ ನೂಲು ಮತ್ತು ಬ್ಲಾಂಕೆಟ್‌ ತಯಾರಿಕಾ ಘಟಕ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದ ಉದ್ಘಾಟನೆ, ಕುರಿ ಉಣ್ಣೆಯ ಔದ್ಯೋಗಿಕ ಬೆಳವಣಿಗೆಯ ಸಹಕಾರಿ ಸಂಘದ ವಜ್ರ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

“ನನ್ನ ಬಗ್ಗೆ ಆರೋಪ ಮಾಡುವ ಹಿಂದಿನ ಸಿಎಂ ಮೇಲೆ 25 ಕ್ರಿಮಿನಲ್‌ ಪ್ರಕರಣ ದಾಖಲಾಗಿದ್ದವು. ನನ್ನ ಮೇಲೆ ಒಂದೇ ಒಂದು ಖಾಸಗಿ ಪ್ರಕರಣವೂ ದಾಖಲಾಗಿಲ್ಲ. ನಾನು ಈ ವರ್ಷ 12ನೇ ಬಜೆಟ್‌ ಮಂಡಿಸುತ್ತಿದ್ದು, ಒಂದೇ ಒಂದು ಕಪ್ಪುಚುಕ್ಕೆ ನನ್ನ ಮೇಲಿಲ್ಲ. ಕಪ್ಪುಚುಕ್ಕೆ ತರುವಂಥ ಕೆಲಸ ಮಾಡಿ ಅಧಿಕಾರ ನೀಡಿದ ಜನರಿಗೆ ಅಗೌರವ ತೋರುವುದಿಲ್ಲ’ ಎಂದರು.

ಅಹಿಂದ-ಬಡವರ ಪರ: “ನಾನು ಅಹಿಂದ ಪರ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಎಲ್ಲ ವರ್ಗದ ಬಡವರ ಪರವಾಗಿಯೂ ಇದ್ದೇನೆ. ನನ್ನನ್ನು ನೋಡಿ ಹೊಟ್ಟೆ ಉರಿ ಪಡುವವರಿಗೆ ನಾನು ಹೆದರಲ್ಲ. ಹೊಟ್ಟೆ ಉರಿ ಪಡುವವರೇ ಉರಿಯ ನೋವು ಅನುಭವಿಸುತ್ತಾರೆ. ಅಧಿಕಾರ, ಸಂಪತ್ತು ಎಲ್ಲರಿಗೂ ಹಂಚಿಕೆ ಆಗಬೇಕು, ಸಾಮಾಜಿಕ ಸಾಮರಸ್ಯ ಇರಬೇಕು ಎಂಬುದು ನನ್ನ ಬದ್ಧತೆ ಎಂದರು.

15 ಪೈಸೆಯೂ ಹಾಕಿಲ್ಲ: 500 ಹಾಗೂ 1000 ಮುಖಬೆಲೆಯ ನೋಟು ಅಮಾನ್ಯ ಮಾಡಿ ಭ್ರಷ್ಟರ, ಕಪ್ಪು ಹಣ ದಂಧೆಕೋರರ ನಿದ್ದೆಗೆಡಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಆದರೆ ನಿಜವಾಗಿ ನಿದ್ದೆಗೆಟ್ಟಿದ್ದು ಬಡವರೇ ಹೊರತು ಶ್ರೀಮಂತರಲ್ಲ. ಎಟಿಎಂ, ಬ್ಯಾಂಕ್‌ಗಳ ಮುಂದೆ ನಿಂತವರ್ಯಾರೂ ಶ್ರೀಮಂತರಲ್ಲ. ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಬಡ ಜನರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿ ಮೂರು ವರ್ಷವಾದರೂ ಬಡವರ ಖಾತೆಗೆ
15 ಪೈಸೆಯನ್ನೂ ಹಾಕಿಲ್ಲ ಎಂದರು.

ಕೇಂದ್ರ ಸರ್ಕಾರ ರೈತರ ಅರ್ಧದಷ್ಟು ಸಾಲಮನ್ನಾ ಮಾಡಿದರೆ ಉಳಿದ ಸಾಲಮನ್ನಾ ಮಾಡಲು ರಾಜ್ಯ ಸರ್ಕಾರವೂ ಸಿದ್ಧ ಎಂಬ ಮಾತಿಗೆ ಈಗಲೂ ಬದ್ಧನಿದ್ದೇನೆ. ಈ ಬಗ್ಗೆ ಪ್ರಧಾನಿಯವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ, ಪತ್ರ ಬರೆದಿದ್ದೇನೆ. ಕೇಂದ್ರ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಆರೋಪಿಸಿದರು.

Advertisement

ಡೈರಿ ವಿಚಾರ ಪ್ರಸ್ತಾಪಕ್ಕೆ ಸಿಎಂ ಕೆಂಡಾಮಂಡಲ
ಹುಬ್ಬಳ್ಳಿ: ಪಕ್ಷದ ಹೈಕಮಾಂಡ್‌ಗೆ ಕಪ್ಪ ಕಾಣಿಕೆ ನೀಡಲಾಗಿದೆ ಎಂದು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ
ಬಿಜೆಪಿಯವರ ಬಳಿ ಯಾವುದೇ ಆಧಾರ ಹಾಗೂ ಡೈರಿಯೂ ಇಲ್ಲ. ಇದ್ದಿದ್ದರೆ ಇಷ್ಟೊತ್ತಿಗಾಗಲೇ ಅದನ್ನು ಬಹಿರಂಗ
ಪಡಿಸುತ್ತಿದ್ದರು. ಸುಳ್ಳು ಹೇಳುವುದೇ ಅವರಿಗೆ ರಕ್ತಗತವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಕಾಂಗ್ರೆಸ್‌ನ ಹೈಕಮಾಂಡ್‌ಗೆ ಕಪ್ಪುಹಣ ನೀಡಿದ ಬಗ್ಗೆ ಡೈರಿಯಲ್ಲಿ ಉಲ್ಲೇಖವಿದೆಯಂತಲ್ಲ ಎಂಬ ಸುದ್ದಿಗಾರರ
ಪ್ರಶ್ನೆಯಿಂದ ಕೆರಳಿದ ಅವರು, ಅವರ ಆರೋಪ ಬಿಡಿ. ನಿಮಗೇನಾದರೂ (ಮಾಧ್ಯಮ) ಆ ಡೈರಿ ತೋರಿಸಿದ್ದಾರೆಯೇ
ಹೇಳಿ ಎಂದು ಮರುಪ್ರಶ್ನಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು 1 ಲಕ್ಷ ಕೋಟಿ ರೂ. ಹೊಡೆದಿದ್ದಾರೆಂದು ನಾನೇನಾದರೂ ಆರೋಪಿಸಿದರೆ ಅದನ್ನೂ ಬರೆಯುತ್ತೀರಾ ಎಂದರು ಪ್ರಶ್ನಿಸಿದರು.

ಸಂಶಯದಿಂದ ನೋಡುತ್ತಾರೆ: ಬಿಜೆಪಿಯವರು ರಾಜ್ಯ ಸರಕಾರದ ಎಲ್ಲ ನಡೆಗಳನ್ನು ಸಂಶಯದಿಂದ ನೋಡುತ್ತಿದ್ದಾರೆ.
ವಾಸ್ತವಾಂಶ ಇಲ್ಲದಿದ್ದರೂ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಮಾಡುವುದಾದರೆ ಮಾಡಲಿ. ಕಾಂಗ್ರೆಸ್‌ಗೂ ಅವರ ವಿರುದ್ಧ ಹೋರಾಟ ಮಾಡಲು ಬರುತ್ತದೆ. ಅವರಿಗಿಂತ ಹತ್ತು ಪಟ್ಟು ಕಾರ್ಯಕರ್ತರು ಪಕ್ಷದಲ್ಲಿದ್ದಾರೆ ಎಂದರು. ರಾಜ್ಯ ಒಲಿಂಪಿಕ್ಸ್‌ ಸಂಘದ ಅಧ್ಯಕ್ಷರು ಕ್ರೀಡಾಕೂಟದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಆದರೆ ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next