ಬೆಂಗಳೂರು: ನಮ್ಮ ವಿರುದ್ಧ ಯಾವ ರೀತಿ ಷಡ್ಯಂತ್ರ ನಡೆಯುತ್ತಿದೆ ಎಂಬುದು ನನಗೆ ಗೊತ್ತಿದೆ. ಅದಕ್ಕೆಲ್ಲ ಹೆದರಿ ಓಡಿ ಹೋಗುವವನಲ್ಲ. ಇಲ್ಲೇ ಇರುತ್ತೇನೆ. ಕಾನೂನು ರೀತಿಯಲ್ಲೇ ಎಲ್ಲವನ್ನೂ ಎದುರಿಸುತ್ತೇನೆ. ಅವರೂ ಕಾನೂನಿನಡಿ ಮಾಡಲಿ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.
ಸೋಮವಾರ ಪದ್ಮನಾಭ ನಗರದಲ್ಲಿನ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಎಸ್‌ಐಟಿ ರಚನೆ ಮಾಡಿದ್ದಾರೆ. ತನಿಖೆಗೆ ಮುಜುಗರ ಆಗಬಾರದೆಂದು ಪ್ರಕರಣದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ಕೊಡುವುದಿಲ್ಲ ಎಂದರು.
ಯಾವುದೋ ನಾಲ್ಕೈದು ವರ್ಷ ಹಿಂದಿನದನ್ನು ತಂದು ಪ್ರಕರಣ ದಾಖಲಿಸಿದರೆ, ನಾನು ಪ್ರತಿಕ್ರಿಯಿಸುವುದಿಲ್ಲ. ಪಕ್ಷದಿಂದ ಅಮಾನತು ಮಾಡುವುದು, ಉಚ್ಚಾಟಿಸುವುದು ಪಕ್ಷಕ್ಕೆ ಬಿಟ್ಟಿದ್ದು. ಮೊದಲೇ ನಿಗದಿಯಾದಂತೆ ಪ್ರಜ್ವಲ್ ವಿದೇಶಕ್ಕೆ ಹೋಗಬೇಕಿತ್ತು, ಹೋಗಿದ್ದಾನೆ. ಇವರು ಎಫ್ಐಆರ್ ಹಾಕುತ್ತಾರೆ, ಎಸ್‌ಐಟಿ ತನಿಖೆಗೆ ಕೊಡುತ್ತಾರೆ ಎಂದು ಅವನಿಗೇನು ಗೊತ್ತಿತ್ತಾ? ತನಿಖೆಗೆ ಕರೆದಾಗ ಬರುತ್ತಾನೆ ಎಂದರು.