ಬೆಂಗಳೂರು: ಕಳಸಾ ಬಂಡೂರಿ, ಮಹದಾಯಿ ವಿಚಾರದಲ್ಲಿ ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಭರವಸೆ ಕೊಡಿಸಲಿ ಇಲ್ಲದಿದ್ದರೆ ಫೆ.4ರಂದು ಬೆಂಗಳೂರು ಬಂದ್ ನಡೆಯಲಿದೆ ಎಂದು ವಾಟಾಳ್ ನಾಗರಾಜ್ ಪುನರುಚ್ಚರಿಸಿದ್ದಾರೆ. ಮತ್ತೊಂದೆಡೆ ಫೆ.4ರ ಬೆಂಗಳೂರು ಬಂದ್ ಕಾಂಗ್ರೆಸ್ ಪ್ರಾಯೋಜಿತ. ಇದು ಕಾಂಗ್ರೆಸ್ ಷಡ್ಯಂತ್ರ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಆರೋಪಿಸಿದ್ದಾರೆ.
ಟ್ರಾಫಿಕ್ ಜಾಮ್, ಕಲ್ಲುತೂರಾಟಕ್ಕೆ ಸಂಚು?
ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ಪಕ್ಷ ವಾಟಾಳ್ ನಾಗರಾಜ್ ಅವರನ್ನು ಮುಂದಿಟ್ಟುಕೊಂಡು ಫೆ.4ರಂದು ಬೆಂಗಳೂರು ಬಂದ್ ಗೆ ಕರೆ ಕೊಟ್ಟಿದೆ ಎಂದು ಅಶೋಕ್ ದೂರಿದರು.
ಜನವರಿ 25ರಂದು ನಡೆದ ಕರ್ನಾಟಕ ಬಂದ್ ವೇಳೆ ಬೆಂಗಳೂರು ಕೂಡಾ ಬಂದ್ ಆಗಿದೆ. ಹಾಗಾದರೆ ಮತ್ತೆ ಫೆ.4ರಂದು ಬೆಂಗಳೂರು ಬಂದ್ ಯಾಕೆ?ಇತಿಹಾಸದಲ್ಲಿ ರಜಾ ದಿನ(ಭಾನುವಾರ)ದಂದು ಬಂದ್ ನಡೆಸಿದ ನಿದರ್ಶನವಿಲ್ಲ ಎಂದರು.
ಬುಧವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫೆ4ರಂದು ಟ್ರಾಪಿಕ್ ಜಾಮ್, ಕಲ್ಲುತೂರಾಟ ನಡೆಸುವ ಸಂಚು ನಡೆಸಲಾಗಿದೆ ಎಂದು ಆರೋಪಿಸಿದರು. ಪ್ರಧಾನಿ ಭೇಟಿ ವೇಳೆ ಬಂದ್ ನೆಪದಲ್ಲಿ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷದವರು ಏನೇ ಕೋಟೆ ಕಟ್ಟಲಿ, ಪೊಲೀಸ್ ಸರ್ಪಗಾವಲು ಹಾಕಲಿ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮ ನಡೆಸಿಯೇ ಸಿದ್ಧ ಎಂದು ತಿರುಗೇಟು ನೀಡಿದ್ದಾರೆ.
ಯಾರ ಕುಮ್ಮಕ್ಕೂ ಇಲ್ಲ, ಫೆ.3ರೊಳಗೆ ಭರವಸೆ ಕೊಡಿಸಿ: ವಾಟಾಳ್
ಮಹದಾಯಿ ವಿಚಾರದಲ್ಲಿ ಬಿಜೆಪಿ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಫೆ.3ರೊಳಗೆ ಭರವಸೆ ಕೊಡಿಸಿದರೆ ಫೆ.4ರ ಬೆಂಗಳೂರು ಬಂದ್ ವಾಪಸ್ ಪಡೆಯುತ್ತೇವೆ. ಇಲ್ಲದಿದ್ದರೆ ಬಂದ್ ನಡೆದೇ ನಡೆಯುತ್ತೆ ಎಂದು ವಾಟಾಳ್ ನಾಗರಾಜ್ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದು ಯಾರ ಕುಮ್ಮಕ್ಕಿನಿಂದಾಗಲಿ, ಷಡ್ಯಂತ್ರದಿಂದ ನಡೆಸುತ್ತಿರುವ ಬಂದ್ ಅಲ್ಲ. ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹದಾಯಿ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶಿಸುವುದಾಗಿ ಭರವಸೆ ಕೊಡಿಸಲಿ, ಸುಮ್ಮನೆ ಬಿಜೆಪಿ ಮುಖಂಡರು ನಮ್ಮ ವಿರುದ್ಧ ಆರೋಪಿಸುವುದು ಬೇಡ ಎಂದು ವಾಟಾಳ್ ತಿರುಗೇಟು ನೀಡಿದರು.