ಬೆಂಗಳೂರು: ವಿಧಾನಸಭೆ ಚುನಾವಣೆ ಈ ಬಾರಿ ಜೆಡಿಎಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ಅಭ್ಯರ್ಥಿಗಳು ಮೈ ಮರೆಯಬಾರದು. ಧೈರ್ಯದಿಂದ ಹೋರಾಟ ನಡೆಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿಗಳಿಗೆ ಸೂಚಿಸಿದ್ದಾರೆ.
ಪಕ್ಷದ ಅಭ್ಯರ್ಥಿಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಎಷ್ಟೇ ಪ್ರಬಲರಿದ್ದರೂ ನಮ್ಮ ಪಕ್ಷದ ಕಾರ್ಯಕ್ರಮ ಹಾಗೂ ನಾಯಕತ್ವದಿಂದ ನಮಗೆ ಯಶಸ್ಸು ಸಿಗಲಿದೆ. ಎರಡೂ ಪಕ್ಷಗಳ ಅಬ್ಬರದಿಂದ ಯಾರೂ ಧೃತಿಗೆಡುವುದು ಬೇಡ. ನಿಮ್ಮ ಜತೆ ನಾನಿದ್ದೇನೆಂದು ಧೈರ್ಯ ತುಂಬಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿ ಇರುವ ಕೆಲವೆಡೆ ಕಾಂಗ್ರೆಸ್ ಮತ್ತು ಬಿಜೆಪಿಯವರು ಆಮಿಷವೊಡ್ಡಿ ನಿವೃತ್ತಿಯಾಗುವಂತೆ ಒತ್ತಡ ಹೇರುತ್ತಿರುವುದು, ಪ್ರಚಾರ ಮಾಡದೆ ತಟಸ್ಥರಾಗಿ ಎಂದು ಒತ್ತಡ ಹೇರುತ್ತಿರುವುದು ಸೇರಿ ಪ್ರಚಾರಕ್ಕೆ ಅಡ್ಡಿಪಡಿಸುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಜತೆ ಖುದ್ದಾಗಿ ಕುಮಾರಸ್ವಾಮಿ ಮಾತನಾಡಿದ್ದಾರೆಂದು ತಿಳಿದು ಬಂದಿದೆ.
ಜಲಧಾರೆ ಹಾಗೂ ಪಂಚರತ್ನ ಯಾತ್ರೆ ವೇಳೆ 224 ಕ್ಷೇತ್ರಗಳಲ್ಲಿ ಸಂಚಾರ ಮಾಡಿದ್ದೇನೆ. ಎಲ್ಲ ಕ್ಷೇತ್ರಕ್ಕೂ ಮತ್ತೆ ಪ್ರಚಾರಕ್ಕೆ ಬರಲು ಆಗುವುದಿಲ್ಲ. ದೇವೇಗೌಡರು ಆರೋಗ್ಯ ದೃಷ್ಟಿಯಿಂದ ಸೀಮಿತ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಅಭ್ಯರ್ಥಿಗಳು ಪಕ್ಷದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಲುಪಿಸಿ ಪ್ರಚಾರ ಮಾಡಿ ಎಂದು ನಿರ್ದೇಶನ ನೀಡಿದ್ದಾರೆ.
ಕೆಸಿಆರ್-ಮಮತಾ ಆಗಮನ
ಜೆಡಿಎಸ್ ಪರ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ ರಾವ್ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಚಾರಕ್ಕೆ ಬರಲಿದ್ದು ಒಟ್ಟು ಐದು ಕಡೆ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಚಂದ್ರಶೇಖರರಾವ್ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ, ಮಮತಾ ಬ್ಯಾನರ್ಜಿ ಅವರು ಹಳೇ ಮೈಸೂರು ಭಾಗದಲ್ಲಿ ಪ್ರಚಾರಕ್ಕೆ ಬರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.